Advertisement
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿ 100 ದಿನ ಕಳೆದರೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧವಾಗಿಲ್ಲ ಎಂಬುದು ಸಣ್ಣ ವಿಚಾರವೇನಲ್ಲ. ಯಾವುದೇ ಒಂದು ಸಮ್ಮಿಶ್ರ ಸರ್ಕಾರ ರಚನೆಯಾದಾಗ ಸರ್ಕಾರದ ಪಾಲುದಾರ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆ ಮೂಲಕ ನೀಡಿದ್ದ ಭರವಸೆಗಳ ಈಡೇರಿಕೆ ಸಂಬಂಧ ಮಾರ್ಗಸೂಚಿ ಸಿದ್ಧಪಡಿಸಿಕೊಳ್ಳುತ್ತದೆ.
Related Articles
Advertisement
ಎರಡೂ ಪಕ್ಷಗಳು ಚುನಾವಣಾ ಪೂರ್ವದಲ್ಲಿ ನೀಡಿದ್ದ ಪ್ರಣಾಳಿಕೆ ಆಧಾರದ ಮೇಲೆ ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಸಿದ್ಧಗೊಂಡು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಯಾಗಿ ಯಾವ್ಯಾವ ಕಾರ್ಯಕ್ರಮಗಳು ಆದ್ಯತೆ ಮೇರೆಗೆ ಜಾರಿಗೊಳಿಸಬೇಕು ಎಂಬುದು ತೀರ್ಮಾನವಾಗಬೇಕಿತ್ತು. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ರಾಜ್ಯಾಧ್ಯಕ್ಷರೂ ಇನ್ನು ಸಮನ್ವಯ ಸಮಿತಿಗೆ ಪ್ರವೇಶ ಪಡೆದಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಎರಡೂ ಪಕ್ಷಗಳ ರಾಷ್ಟ್ರೀಯ ಮುಖಂಡರು ಸಮಿತಿಯಲ್ಲಿದ್ದು, ಕಾಂಗ್ರೆಸ್ ಶಾಸಕಂಗ ಪಕ್ಷದ ನಾಯಕರು ಅಧ್ಯಕ್ಷರಾಗಿದ್ದಾರೆ. ಇವರ್ಯಾರೂ ಇದುವರೆಗೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪ ಮಾಡಿಲ್ಲವೇ? ಮಾಡಿದ್ದರೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧವಾಗಬೇಕಿತ್ತಲ್ಲವೇ ಎಂಬ ಪ್ರಶ್ನೆಗಳೂ ಇವೆ.
ಸರ್ಕಾರದ ಸ್ಥಿರತೆ ಬಗ್ಗೆ ಮೊದಲ ದಿನದಿಂದಲೂ ಅನುಮಾನ, ಜತೆಗೆ ಎರಡೂ ಪಕ್ಷಗಳ ನಾಯಕರ ನಡುವಿನ ಆಂತರಿಕ ಭಿನ್ನಾಭಿಪ್ರಾಯ, ಗೊಂದಲ ಇವೆಲ್ಲವೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧವಾಗದಿರಲು ಕಾರಣ. ಚುನಾವಣೆ ನಂತರ ಒಟ್ಟಾಗಿ ಉತ್ತಮ ಆಡಳಿತ ನೀಡುತ್ತೇವೆ ಎಂದು ವಾಗ್ಧಾನ ಮಾಡಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ ಕಾರ್ಯಕ್ರಮ ಜಾರಿಗೊಳಿಸುತ್ತೇವೆ ಎಂದು ಘೋಷಿಸಿದ ಮೇಲೆ ಆ ಬಗ್ಗೆ ನಿರಾಸಕ್ತಿ ವಹಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಎರಡೂ ಪಕ್ಷದ ನಾಯಕರೇ ಹೇಳಬೇಕು.