Advertisement

ಜೋಳ ಖರೀದಿ ಅವ್ಯವಹಾರ ತನಿಖೆಗೆ ಸಮಿತಿ

04:33 PM May 26, 2022 | Team Udayavani |

ಬಳ್ಳಾರಿ: ಫ್ರೂಟ್ಸ್‌ ತಂತ್ರಾಂಶದಲ್ಲಿ ಸುಳ್ಳು ಮಾಹಿತಿ ನೀಡಿ ಸಿರುಗುಪ್ಪ ತಾಲೂಕಿನಲ್ಲಿ ಆಗಿರುವ ಜೋಳ ಖರೀದಿ ಅವ್ಯವಹಾರವನ್ನು ತನಿಖೆ ನಡೆಸಲು ಅಪರ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ಜಂಟಿ ಕೃಷಿ ನಿರ್ದೇಶಕರನ್ನೊಳಗೊಂಡ ತಂಡವನ್ನು ರಚಿಸಲಾಗುತ್ತಿದ್ದು ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ತಾಕೀತು ಮಾಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆ ಮತ್ತು ತ್ತೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಿರುಗುಪ್ಪ ತಾಲೂಕು ಕೆಂಚನಗುಡ್ಡ ವ್ಯಾಪ್ತಿಯಲ್ಲಿ ಸಂಪೂರ್ಣ ಭತ್ತ ಬೆಳೆಯಲಾಗುತ್ತದೆ. ಆದರೆ ಕೆಲ ರೈತರು ಆಂಧ್ರದಿಂದ ಜೋಳ ತಂದು ಕೆಂಚನಗುಡ್ಡ ಪ್ರದೇಶದ ಪಹಣಿ ಬಳಸಿ ಜೋಳ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದಾರೆ ಎಂದು ಕಳೆದ ಕೆಡಿಪಿ ಸಭೆಯಲ್ಲಿ ಸಿರುಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ ದೂರಿದ್ದರು. ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

ಅದರಂತೆ ಬುಧವಾರದ ಕೆಡಿಪಿ ಸಭೆಯಲ್ಲಿ ಆರಂಭದಲ್ಲೇ ಈ ಕುರಿತು ಪರಿಶೀಲಿಸಿದ ಸಚಿವ ಬಿ. ಶ್ರೀರಾಮುಲು ಅವರಿಗೆ ದೇವಲಾಪುರದ 4, ಹಳೇಕೋಟೆ, ಕೆಂಚನಗುಡ್ಡದ ಒಬ್ಬರು ಸೇರಿ ಒಟ್ಟು ಆರು ರೈತರು ಫ್ರೂಟ್ಸ್‌ ತಂತ್ರಾಂಶದಲ್ಲಿ ತಪ್ಪು ಮಾಹಿತಿ ನೀಡಿ, ಕೆಂಚನಗುಡ್ಡ ವ್ಯಾಪ್ತಿಯ ಪಹಣಿಯಿಂದ ದೇವಲಾಪುರ ಖರೀದಿ ಕೇಂದ್ರದಲ್ಲಿ ಜೋಳ ಮಾರಾಟ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಸೋಮಲಿಂಗಪ್ಪ, ಕೆಂಚನಗುಡ್ಡ ಪ್ರದೇಶದಲ್ಲಿ ಎಷ್ಟು ಎಕರೆಯಲ್ಲಿ ಭತ್ತ ಬೆಳೆಯಲಾಗಿದೆ. ಎಷ್ಟು ಕ್ವಿಂಟಲ್‌ ಜೋಳ ಖರೀದಿ ಮಾಡಲಾಗಿದೆ ಮಾಹಿತಿ ಕೊಡಿ ಎನ್ನುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಸಚಿವ ಶ್ರೀರಾಮುಲು, ವರದಿಯನ್ನು ತನಿಖೆ ಮಾಡಲು ಎಡಿಸಿ, ಎಸಿ, ಕೃಷಿ ಜಂಟಿ ನಿರ್ದೇಶಕರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಮಾತನಾಡಿ, ಈ ಬಾರಿ ಆದ ತಪ್ಪು ಮುಂದೆ ಆಗದಂತೆ ಮಾಡಲು ಸಮೀಕ್ಷೆ ಕೈಗೊಳ್ಳಲಾಗುತ್ತದೆ ಎಂದರು. ಇದೇ ವೇಳೆ ಉದ್ಯೋಗ ಖಾತರಿ ಯೋಜನೆಯಡಿ ನಿರೀಕ್ಷಿತ ಗುರಿಮುಟ್ಟಲು ಆಗಿಲ್ಲ ಎಂದು ಸಭೆ ಗಮನಕ್ಕೆ ಬರುತ್ತಿದ್ದಂತೆ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡ ಸಚಿವ ಶ್ರೀರಾಮುಲು, ನೀವು ಈ ರೀತಿ ಗುರಿ ಮುಟ್ಟಲು ಆಗಲ್ಲ ಎನ್ನುವಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಇದಕ್ಕೆ ದನಿಗೂಡಿಸಿದ ಶಾಸಕ ನಾಗೇಂದ್ರ, ತುಕಾರಾಂ, ಸೋಮಲಿಂಗಪ್ಪ, ಸಂಸದ ದೇವೇಂದ್ರಪ್ಪ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರ ಕೊಟ್ಟ ಗುರಿಮುಟ್ಟಲು ಆಗಲ್ಲ ಎಂದರೆ ಹೇಗೆ? ಎಂದ ಅವರು, ಹೂಳು ತೆಗೆಸುವ, ಜಂಗಲ್‌ ಕತ್ತರಿಸುವ, ಸಸಿ ನೆಡುವಂಥ ಕಾರ್ಯಕ್ರಮ ರೂಪಿಸಿಕೊಂಡು ನಿಗದಿತ ಗುರಿಮುಟ್ಟುವಂತೆ ತಾಕೀತು ಮಾಡಿದರು. ಉದ್ಯೋಗ ಖಾತರಿ ವಿಚಾರದಲ್ಲಿ ಅಧಿಕಾರಿಗಳ ನಿರಾಸಕ್ತರಾಗಿರುವ ವಿಚಾರ ತಿಳಿದ ಶ್ರೀರಾಮುಲು ಐದೂ ತಾಲೂಕಿನ ಇಒಗಳನ್ನು ನಿಲ್ಲಿಸಿ ಪಾಠ ಮಾಡಿದರು. ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ಹಿಂದೆ ಬೀಳಬೇಡಿ. ಕೂಲಿ ಹಣ ನೀಡಿದಂತೆ ವಸ್ತು ಖರೀದಿಯ ಬಿಲ್‌ ಸಹ ಮಾಡಿ ಎಂದರು.

ಕಳೆದ ವರ್ಷ ಜಿಲ್ಲೆಗೆ 221 ಕೋಟಿ ರೂ. ಗುರಿ ನೀಡಲಾಗಿತ್ತು. ಕೇವಲ 153 ಕೋಟಿ ರೂ. ಗುರಿ ಮುಟ್ಟಿದ್ದೀರಿ. ಅಲ್ಲಿಗೆ ಶೇ.69ರಷ್ಟು ಮಾತ್ರ ಗುರಿ ತಲುಪಿದಂತೆ ಆಗಿದೆ. ಈಗ ಇರುವ ಪರಿಸ್ಥಿತಿ ನೋಡಿದರೆ ಈ ವರ್ಷ ಸಹ ಹೀಗೆ ಆಗಲಿದೆ ಎಂದು ಕಿಡಿಕಾರಿದರು. ಜೊತೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ಅಜಯ್‌ ನಾಗಭೂಷಣ್‌ಗೂ ತಾಕೀತು ಮಾಡಿದ ಸಚಿವರು ನೀವು ಬೆಂಗಳೂರಿನಲ್ಲಿ ಕುಳಿತು ಕೆಲಸ ಮಾಡುವುದು ಬೇಡ. ಆಗಿಂದಾಗ್ಗೆ ಇಲ್ಲಿಗೆ ಬಂದು ಗುರಿ ಮುಟ್ಟಲು ಸಲಹೆ, ಸೂಚನೆ ನೀಡಬೇಕು ಎಂದರು. ಇದಕ್ಕೂ ಮುನ್ನ ಮಾತನಾಡಿದ್ದ ಕಾರ್ಯದರ್ಶಿ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉದ್ಯೋಗ ಖಾತರಿ ಯೋಜನೆ ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಿದ್ದು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್‌ ಸಿಇ ವಿಶೇಷ ಗಮನ ಹರಿಸಿ, ಗುರಿ ಮುಟ್ಟಲು ಶ್ರಮಿಸಬೇಕು ಎಂದು ಸೂಚಿಸಿದರು.

ಪಶು ಇಲಾಖೆ ಭರ್ತಿ ಮಾಡಿ

ಜಿಲ್ಲೆಯಲ್ಲಿ ಪಶು ಸಂಗೋಪನಾ ಇಲಾಖೆಯಲ್ಲಿ ಶೇ.50ರಷ್ಟು ಹುದ್ದೆ ಖಾಲಿ ಇದ್ದು ಹುದ್ದೆ ಭರ್ತಿಗೆ ಸರ್ಕಾರದ ಹಂತದಲ್ಲಿ ಯತ್ನಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರಲ್ಲಿ ವಿಧಾನ ಪರಿಷತ್‌ ಸದಸ್ಯ ವೈ.ಎಂ. ಸತೀಶ್‌ ಕೋರಿದರು. ಜಿಲ್ಲೆಯಲ್ಲಿ ಒಟ್ಟು 85 ಹುದ್ದೆ ಇದ್ದು ಈ ಪೈಕಿ 45 ಹುದ್ದೆ ಖಾಲಿ ಇವೆ ಎಂದು ಅವರು ಸಭೆಯ ಗಮನ ಸೆಳೆದರು.

ಜೋಕರ್‌ ಅನ್ಕೊಂಡಿದಿರಾ?

ಕೆಡಿಪಿ ಸಭೆಗೆ ಸ್ವಲ್ಪ ತಡವಾಗಿ ಬಂದ ಸಂಡೂರು ಶಾಸಕ ಈ. ತುಕಾರಾಂ ಅವರು, ಸಭೆಯ ಉಸ್ತುವಾರಿ ವಹಿಸಿಕೊಂಡವರಂತೆ ಪ್ರತಿ ವಿಷಯದಲ್ಲೂ ಒಂದು ‘ಸಬ್‌ಮಿಷನ್‌’ ಎನ್ನುತ್ತಲೇ ಮಧ್ಯ ಪ್ರವೇಶಿಸುತ್ತಿದ್ದು ಗಮನ ಸೆಳೆಯಿತು. ಶ್ರೀರಾಮುಲು ಅವರನ್ನು ಅಣ್ಣಾ ಎಂದು ಸಂಬೋಧಿಸುತ್ತಲೇ ಜೆಸ್ಕಾಂ ಅಧಿಕಾರಿಗಳಿಗೆ ಜೋರು ಮಾಡುತ್ತಾ ಸಚಿವರನ್ನು ಜೋಕರ್‌ ಅನ್ಕೊಂಡಿದಿರಾ? ಜಿಲ್ಲಾ ಉಸ್ತುವಾರಿ ಸಚಿವರ ಕೆಡಿಪಿ ಸಭೆಗೆ ಎಲ್ಲ ಮಾಹಿತಿಯೊಂದಿಗೆ ಬರಬೇಕು. ಜಿಲ್ಲಾಮಟ್ಟದ ಅಧಿಕಾರಿಗಳೇ ಸಭೆಗೆ ಬರಬೇಕು. ಸಭೆಗೆ ಗೈರಾಗುವುದಾದರೆ ಸಚಿವರ ಅನುಮತಿ ಪಡೆಯಬೇಕು ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next