Advertisement

ಟೂರಿಸಂ, ಮೀನುಗಾರಿಕೆ, ಬಂದರು ಅಭಿವೃದ್ಧಿಗೆ ಬದ್ಧ- ಸಚಿವ ಮಂಕಾಳ ವೈದ್ಯ

11:41 PM Jul 14, 2023 | Team Udayavani |

ಮಂಗಳೂರು: ಕರಾವಳಿಯಲ್ಲಿನ ಪ್ರವಾಸೋದ್ಯಮ, ಮೀನುಗಾರಿಕೆ ಹಾಗೂ ಬಂದರುಗಳ ಅಭಿವೃದ್ಧಿ ಈ ಭಾಗದ ಪ್ರಗತಿಗೆ ಅತ್ಯವಶ್ಯಕ, ಅದಕ್ಕಾಗಿ ಯಾವುದೇ ರೀತಿಯ ಸಹಕಾರ ನೀಡಲು ಸರಕಾರ ಸಿದ್ಧವಿದೆ, ಉದ್ಯಮ ವಲಯದಿಂದಲೂ ಅದೇ ರೀತಿಯ ಪ್ರತಿಸ್ಪಂದನ ಬೇಕು ಎಂದು ರಾಜ್ಯ ಬಂದರು, ಮೀನುಗಾರಿಕೆ ಖಾತೆ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.

Advertisement

ಕಾನ್ಫಿಡರೇಶನ್‌ ಆಫ್‌ ಇಂಡಿಯನ್‌ ಇಂಡಸ್ಟ್ರಿ (ಸಿಐಐ) ವತಿ ಯಿಂದ ಮಂಗಳೂರಿನಲ್ಲಿ ಶುಕ್ರವಾರ ಹಮ್ಮಿ ಕೊಳ್ಳಲಾದ “ಬಂದರು- ಭಾರತದ ಆರ್ಥಿಕತೆ ಮತ್ತು ಆತ್ಮನಿರ್ಭರ ಭಾರತದ ಬೆನ್ನೆಲುಬು’ ಪರಿಕಲ್ಪನೆಯಲ್ಲಿ ನಡೆದ “ಸಿಐಐ ಕರ್ನಾಟಕ ಬಂದರು ಗಳ ಸಮ್ಮೇಳನ-2023’ರ ಸಮಾ ರೋಪದಲ್ಲಿ ಅವರು ಮಾತನಾಡಿ ಈ ಮೂರೂ ಕ್ಷೇತ್ರಗಳ ಅಭಿವೃದ್ಧಿಯಿಂದ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ, ಇವುಗಳ ಅಭಿವೃದ್ಧಿ ಪೂರಕವಾಗಿ ಆಗಬೇಕು, ಕರಾವಳಿ ಅಭಿವೃದ್ಧಿಗೆ ಏನೇನು ಆಗಬೇಕೋ ಅದಕ್ಕೆ ನೆರವಾಗುವಂತೆ ಸಿಎಂ ಕೂಡ ಸೂಚನೆ ನೀಡಿದ್ದಾರೆ ಎಂದರು.

ಬಡವರಿಗೂ ಸಿಗಲಿ ಫಲ!
ಇದೇ ವೇಳೆ ಉದ್ಯಮಿಗಳ ಜತೆ ಸಂವಾದದ ಸಂದರ್ಭ ಮಾತನಾಡಿದ ವೈದ್ಯ ಅವರು, 400 ಕೋಟಿ ರೂ.ನಷ್ಟು ಮೊತ್ತದ ಡೀಸೆಲ್‌ ಸಬ್ಸಿಡಿ ಬಹುತೇಕ ದೊಡ್ಡ ದೊಡ್ಡ ಬೋಟ್‌ನವರ ಪಾಲಾಗುತ್ತದೆ, ಅದು ಬಡ ಮೀನುಗಾರರಿಗೂ ಸಿಗುವಂತಾಗಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ವಿಳಂಬಿಸಿದರೆ ಕಪ್ಪು ಪಟ್ಟಿಗೆ
ಬಂದರು, ಮೀನುಗಾರಿಕಾ ಇಲಾಖೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಇನ್ನು ವಿಳಂಬ ವಾಗಬಾರದು, ಹಾಗಾಗಿ ನಿಗದಿತ ಸಮಯದೊಳಗೆ ಮುಗಿಸದಿದ್ದರೆ ಟೆಂಡರ್‌ ರದ್ದುಗೊಳಿಸಿ, ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ನವಮಂಗಳೂರು ಬಂದರು ಮಂಡಳಿ ಉಪಾಧ್ಯಕ್ಷ ಕೆ.ಜಿ.ನಾಥ್‌, ಸಿಐಐ ಕರ್ನಾಟಕ ಇದರ ಸಂಚಾಲಕ ಪವನ್‌ ಕುಮಾರ್‌ ಸಿಂಗ್‌, ಉಪನಿರ್ದೇಶಕ ಸೋಲೊಮನ್‌, ಸಿಐಐ ಮಂಗಳೂರು ಅಧ್ಯಕ್ಷ ಪ್ರವೀಣ್‌ ಕುಮಾರ್‌ ಕಲಾºವಿ ಉಪ ಸ್ಥಿತರಿದ್ದರು. ಸಿಐಐ ಮಂಗಳೂರು ಮಾಜಿ ಅಧ್ಯಕ್ಷ ಗೌರವ್‌ ಹೆಗ್ಡೆ ನಿರೂಪಿಸಿದರು. ಉಪಾಧ್ಯಕ್ಷ ಅಜಿತ್‌ ಕಾಮತ್‌ ವಂದಿಸಿದರು.

Advertisement

ಸಿಆರ್‌ಝಡ್‌ ಸಮಸ್ಯೆ
ಸಿಆರ್‌ಝಡ್‌, ಅರಣ್ಯ ಇಲಾಖೆ ಇತ್ಯಾದಿಗಳ ತೊಡಕಿನಿಂದಾಗಿ ಸಾಗರಮಾಲಾದ 1 ಸಾವಿರ ಕೋಟಿ ರೂ.ಗಳ 26ರಷ್ಟು ಯೋಜನೆಗಳು ಪ್ರಗತಿ ಕಾಣುತ್ತಿಲ್ಲ. ಸಿಆರ್‌ಝಡ್‌ನಿಂದ ಹಲವು ಕ್ಲಿಯರೆನ್ಸ್‌ 30 ದಿನದೊಳಗೆ ಆಗಬೇಕಿರುವುದು 2017 ರಿಂದೀಚೆಗೆ ಆಗಿಲ್ಲ. ನಾನು ಸಚಿವನಾದೊಡನೆಯೇ ಸಭೆ ಕರೆದು, ಕ್ಲಿಯರೆನ್ಸ್‌ ನೀಡಲು ಸೂಚಿಸಿದ್ದೇನೆ ಎಂದರು.
ಒಂದು ವೇಳೆ ಸಾಗರಮಾಲಾದ 1000 ಕೋಟಿ ರೂ.ನ ಯೋಜನೆಗಳು ಮುಂದೆ ಹೋಗಿದ್ದರೆ ಮತ್ತಷ್ಟು ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬರುತ್ತಿತ್ತು ಎಂದ ಅವರು ಶಿರಾಡಿ ಘಾಟಿ ರಸ್ತೆ ಸಂಪರ್ಕ ಇನ್ನೊಂದು ವರ್ಷದಲ್ಲಿ ಸುಧಾರಣೆಯಾಗುವ ಆಶಾಭಾವ ಇದೆ, ಹಾಗಾಗಿ ಬಂದರಿಗೆ ಬರುವ ಸರಕಿನ ಪ್ರಮಾಣ ಹೆಚ್ಚಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next