ಮಹಾಲಿಂಗಪುರ: ಪುರಸಭೆ ನೂತನ ಅಧ್ಯಕ್ಷ ಬಸವರಾಜ ಹಿಟ್ಟಿನಮಠ 75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಘೋಷಿಸಿದಂತೆ ಸ್ವಚ್ಛ ಮಹಾಲಿಂಗಪುರ ಅಭಿಯಾನಕ್ಕೆ ಪುರಸಭೆ ಸಿಬ್ಬಂದಿ ಮತ್ತು ಪಟ್ಟಣದ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸ್ವಚ್ಛ ಮಹಾಲಿಂಗಪುರ ಅಭಿಯಾನಕ್ಕೆ ಸಹಕರಿಸುವಂತೆ ಪಟ್ಟಣದ ಸಾರ್ವಜನಿಕರಲ್ಲಿ ಪುರಸಭೆ ಅಧ್ಯಕ್ಷರು ಮತ್ತು ಅಧಿಕಾರಿಗಳು ವಿಶೇಷ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ಜೊತೆಗೆ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಸಹ ಶ್ರಮವಹಿಸಿ ನಿತ್ಯ ಪಟ್ಟಣದಲ್ಲಿ ಉತ್ಪಾದನೆಯಾಗುವ ಕಸ ಸಂಗ್ರಹಿಸಿ ತಾಜ್ಯ ವಿಲೇವಾರಿ ಘಟಕಕ್ಕೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
ನಿತ್ಯ 13 ಟನ್ ಕಸ ಸಂಗ್ರಹ: ಮಹಾಲಿಂಗಪುರ ಪಟ್ಟಣದ ಒಟ್ಟು 23 ವಾರ್ಡ್‌ಗಳಿಂದ ನಿತ್ಯ 13 ಟನ್ ಕಸ ಸಂಗ್ರಹವಾಗುತ್ತಿದೆ. ಇದರಲ್ಲಿ ಸುಮಾರು 8 ಟನ್‌ನಷ್ಟು ಹಸಿ ಕಸ ಸಂಗ್ರಹವಾಗುತ್ತಿದೆ. ಹಸಿ ಮತ್ತು ಒಣ ಕಸ ಪ್ರತ್ಯೇಕ ಮಾಡಿ ಎರೆಹುಳು ಗೊಬ್ಬರ ತಯಾರಿಕೆ ಘಟಕದಲ್ಲಿ ಹಾಕಿ ಎರೆಹುಳುಗಳಿಂದ ಗೊಬ್ಬರ ತಯಾರಿಸಲಾಗುತ್ತಿದೆ. ಪ್ರಸಕ್ತ ವರ್ಷ ಸುಮಾರು 6-7 ಟನ್‌ನಷ್ಟು ಗೊಬ್ಬರ ತಯಾರಿಸಿ ಸಂಗ್ರಹಿಸಲಾಗಿದೆ. ಸಂಗ್ರಹವಾದ ಎರೆಹುಳು ಗೊಬ್ಬರವನ್ನು ಪ್ರತಿ ಕೆ.ಜಿಗೆ 2 ರೂ.ಗಳಂತೆ ರೈತರಿಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ನಿರುಪಯುಕ್ತ ತಾಜ್ಯ ವಸ್ತುಗಳಿಂದ ಮರು ಬಳಕೆ ವಸ್ತುಗಳನ್ನು ತಯಾರಿಸಲಾಗುತ್ತಿದೆ.
ಆರೋಗ್ಯ ಇಲಾಖೆ ಸಕ್ರಿಯ: ಪುರಸಭೆಯಲ್ಲಿ ಆರೋಗ್ಯ ಇಲಾಖೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುವ ಇಲಾಖೆ. ಓರ್ವ ಹಿರಿಯ ಆರೋಗ್ಯ ನಿರೀಕ್ಷಕ, ಇಬ್ಬರು ಕಿರಿಯ ಆರೋಗ್ಯ ನಿರೀಕ್ಷಕರು, 26 ಕಾಯಂ ಪೌರ ಕಾರ್ಮಿಕರು, 9 ಜನ ನೇರ ಪಾವತಿ ಕಾರ್ಮಿಕರು, 8 ಜನ ಹೊರಗುತ್ತಿಗೆ ವಾಹನ ಚಾಲಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಪ್ರಸಕ್ತ ವರ್ಷ ಹಸಿ ಮತ್ತು ಒಣ ಕಸ ವಿಲೇವಾರಿಗೆ ಪಟ್ಟಣದ ಪ್ರತಿ ಮನೆಗೆ ಪ್ರತ್ಯೇಕ ಎರಡು ಡಬ್ಬಿಗಳಂತೆ ಸುಮಾರು 12 ಸಾವಿರಕ್ಕೂ ಅಧಿಕ ಕಸದ ಡಬ್ಬಿ ವಿತರಿಸಲಾಗಿದೆ. ಮನೆ-ಮನೆಯಿಂದ ಕಸ ಸಂಗ್ರಹಣೆಗಾಗಿ 10 ತಳ್ಳು ಗಾಡಿ, 4 ಟಾಟಾ ಏಸ್, 2 ಆಟೋ ಬ್ಯಾಟರಿ ಟಿಪ್ಪರ್, 1 ಟ್ರ್ಯಾಕ್ಟರ್, 1 ಒಂದು ಮಿನಿ ಟಿಪ್ಪರ್ ಬಳಕೆಯಲ್ಲಿದ್ದು, ಇತ್ತೀಚೆಗೆ ಖರೀದಿಸಿದ ಒಂದು ಹೊಸ ಕಾಂಪೆಕ್ಟರ್ ಟ್ರಕ್, 4 ಹೊಸ ಆಟೋ ಟಿಪ್ಪರ್‌ಗಳು ಸಹ ಕಸ ಸಂಗ್ರಹ ಮತ್ತು ವಿಲೇವಾರಿಗೆ ಬಳಕೆಯಾಗಲಿವೆ.
ಪುರಸಭೆಯ ಪ್ರತಿಯೊಂದು ಯೋಜನೆಗಳ ಅನುಷ್ಠಾನಕ್ಕೆ ಆಡಳಿತ ಮಂಡಳಿ, ಅಧಿಕಾರಿಗಳು, ಸಿಬ್ಬಂದಿ ಜತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ. ಪುರಸಭೆ ಹಮ್ಮಿಕೊಂಡ ಕಸ ವಿಲೇವಾರಿ ಮತ್ತು ಎರೆಹುಳು ಗೊಬ್ಬರ ತಯಾರಿಕೆಗೆ ಸಾರ್ವಜನಿಕರು ನಿತ್ಯ ಹಸಿ-ಒಣ ಕಸ ಬೇರ್ಡಡಿಸಿ ಪುರಸಭೆ ವಾಹನಗಳಲ್ಲಿ ಹಾಕುವ ಮೂಲಕ ಸ್ವಚ್ಛ ಪಟ್ಟಣ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು.
-ಸಿದ್ದು ಅಳ್ಳಿಮಟ್ಟಿ, ರಾಜು ಹೂಗಾರ, ಕಿರಿಯ ಆರೋಗ್ಯ ನಿರೀಕ್ಷಕರು ಪುರಸಭೆ
ಪಟ್ಟಣದ ಸಾರ್ವಜನಿಕರು ಕಸಮುಕ್ತ ಸ್ವಚ್ಛ ಪಟ್ಟಣಕ್ಕಾಗಿ ಹಸಿ-ಒಣ ಕಸ ಬೇರ್ಪಡಿಸಿ ಪುರಸಭೆ ವಾಹನಗಳು ಬಂದಾಗ ಕಸ ನೀಡಿದರೆ ಪಟ್ಟಣದ ಸ್ವತ್ಛತೆಯೊಂದುಗೆ ಸರಳ ಕಸ ವಿಲೇವಾರಿಗೆ ಸಹಕಾರಿಯಾಗುತ್ತದೆ. ಕಸದಿಂದ ಎರೆಹುಳು ಗೊಬ್ಬರ ತಯಾರಿಸಿ ಪುರಸಭೆಯ ಸ್ಥಳೀಯ ಆದಾಯ ಹೆಚ್ಚಿಸಲು ಅನುಕೂಲವಾಗುತ್ತದೆ. –
ಬಸವರಾಜ ಹಿಟ್ಟಿನಮಠ, ಅಧ್ಯಕ್ಷರು, ಪುರಸಭೆ
-ಚಂದ್ರಶೇಖರ ಮೋರೆ