ಕಲಬುರಗಿ: ಇಲ್ಲಿನ ರಂಗಾಯಣದ ಹೆಸರುಳಿಸಲು ನಾನು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ. ಹಳೆಯ ಕಥೆ ನನಗೆ ಬೇಕಿಲ್ಲ, ನಾನು ಹೊಸದಾಗಿ ಬಂದಿದ್ದೇನೆ. ಹೊಸ ಉಮೇದು ತಂದು ಕೊಡುವ ಪ್ರಯತ್ನ ನನ್ನದು ಎಂದು ರಂಗಾಯಣದ ನೂತನ ನಿರ್ದೇಶಕ ಮಹೇಶ ವಿ.ಪಾಟೀಲ ಹೇಳಿದರು.
ಶುಕ್ರವಾರ ನಗರದ ಸೇಡಂ ರಸ್ತೆಯಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯ ಸಾಂಸ್ಕೃತಿಕ ಭವನದಲ್ಲಿ ನೂತನ ರಂಗಾಯಣ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸರಕಾರ ಮತ್ತು ಈ ಭಾಗದ ಹಿರಿಯರು, ರಂಗಾಸಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಉಮಾಶ್ರೀ ಅವರು, ರಂಗ ಸಮಾಜದ ಸುಜಾತಾ ಜಂಗಮಶೆಟ್ಟಿ ಅವರು ನನ್ನನ್ನು ಗುರುತಿಸಿ ಜವಾಬ್ದಾರಿ ನೀಡಿದ್ದಾರೆ.
ಅದನ್ನು ನಿಭಾಯಿಸುವುದು ನನ್ನ ಮೊದಲ ಆದ್ಯತೆ. ಅದರೊಂದಿಗೆ ನನ್ನೊಳಗಿನ ಕಲೆ, ರಂಗಮಾಹಿತಿ ಮತ್ತು ರಂಗ ತಂತ್ರಗಳನ್ನು ಕಲಾವಿದರ ಮುಖೇನ ತೋರ್ಪಡಿಸುವ ಕೆಲಸ ಮಾಡುತ್ತೇನೆ ಎಂದರು. ರಂಗಾಯಣದ ಕಲಾವಿದರನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸುವ ಹಾಗೆ ಕಾರ್ಯನಿರ್ವಹಿಸುವುದು ನನ್ನ ಮೊದಲ ಆದ್ಯತೆ.
ಅದನ್ನು ಬಿಟ್ಟು ಹಾಗೆ ಮಾಡುತ್ತೇನೆ. ಹೀಗೆ ಮಾಡುತ್ತೇನೆ ಎಂದು ಹೇಳಿಕೊಂಡು ಓಡಾಡುವ ಜಾಯಮಾನ ನನ್ನದಲ್ಲ. ನಾನು ಏನಿದ್ದರೂ ಕೆಲಸ ಮಾಡಿ ನನ್ನ ಫಲಿತಾಂಶ ಹೇಳುವ ವ್ಯಕ್ತಿ ಎಂದರು. ಹಿಂದಿನ ನಿರ್ದೇಶಕರ ಹಾಗೂ ಕಲಾವಿದರ ನಡುವಿನ ಭಿನ್ನಾಭಿಪ್ರಾಯ ಹಾಗೂ ವಿವಾದಗಳ ಕುರಿತು ನಾನು ಮಾತನಾಡುವುದಿಲ್ಲ. ಹಿಂದೆ ಏನಾಗಿದೆ ನನಗೆ ಬೇಕಿಲ್ಲ.. ಇನ್ನು ಮುಂದೆ ಏನಾಗಬೇಕಾಗಿದೆ ಅದಕ್ಕೆ ಮಾತ್ರ ನಾನು ತಲೆ ಕೆಡಿಸಿಕೊಳ್ಳುತ್ತೇನೆ ಎಂದರು.
ನಾನು ರಾಜಕೀಯದಿಂದ ಬಹುದೂರ ಇರುವೆ. ರಂಗಾಯಣದ ಕಲಾವಿದರನ್ನು ಒಗ್ಗೂಡಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚುವ ಹಾಗೆ ಮಾಡುವೆ ಎಂದರು. ರಂಗ ಸಮಾಜದ ಸದಸ್ಯೆ ಡಾ| ಸುಜಾತಾ ಜಂಗಮಶೆಟ್ಟಿ, ರಂಗಾಯಣದ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ಹಾಜರಿದ್ದರು.