ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧ ವಸತಿ ನಿಲಯಗಳಿಗೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಆರ್.ಎಸ್.ಪೆದ್ದಪ್ಪಯ್ಯ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು. ಅಲ್ಲದೇ ಹಾಸ್ಟೆಲ್‌ನಲ್ಲಿಯೇ ವಾಸ್ತವ್ಯ ಹೂಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.
ಜಿಲ್ಲೆಯ ಚಿಕ್ಕಬಳ್ಳಾಪುರ ನಗರ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಹಾಗೂ ಬಾಗೇಪಲ್ಲಿ ತಾಲೂಕಿನ ನಲ್ಲಗುಟ್ಟಪ್ಪಲ್ಲಿ ಗ್ರಾಮದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಮೆಟ್ರಿಕ್ ಪೂರ್ವ ಬಾಲಕಿರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಮಕ್ಕಳಿಗೆ ನೀಡುತ್ತಿರುವ ಮೂಲ ಸೌಕರ್ಯ, ಆಹಾರದ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ವೇಳೆ ಆಯುಕ್ತರು ವಿದ್ಯಾರ್ಥಿಗಳಿಗೆ ಹಲವು ಪ್ರಶ್ನೆ ಕೇಳಿ ಶೈಕ್ಷಣಿಕ ಗುಣಮಟ್ಟದ ಜೊತೆಗೆ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಮೂಲ ಸೌಕರ್ಯ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.ವಿದ್ಯಾರ್ಥಿ ನಿಲಯದ ಸ್ವಚ್ಛತೆ, ಆಹಾರ ತಯಾರಿಕೆ ಕುರಿತು ಅಡುಗೆ ಸಿಬ್ಬಂದಿಯೊಂದಿಗೆ ಚರ್ಚಿಸಿ ಉತ್ತಮ ಗುಣಮಟ್ಟದ ಆಹಾರ ತಯಾರಿಸಲು ಅಡುಗೆಯವರಿಗೆ ಸೂಚಿಸಿ ರಾತ್ರಿ ಊಟವನ್ನು ವಿದ್ಯಾರ್ಥಿಗಳ ಜೊತೆಗೆ ಸವಿದರು.
ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಜೊತೆಗೆ ಬಾಲಕರ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಇದ್ದು ಹಾಸ್ಟೆಲ್‌ಗಳ ಸ್ಥತಿಗತಿಗಳ ಬಗ್ಗೆ ಅವಲೋಕ ಮಾಡಿದರು. ನಂತರ ಆಶ್ರಮ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ವಿದ್ಯಾಭ್ಯಾಸ ಕುರಿತು ಚರ್ಚಿಸಿ ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುವಂತೆ ಹಾಗೂ ಗ್ರಂಥಾಲಯಕ್ಕೆ ಅವಶ್ಯಕ ಪಠ್ಯ ಪುಸ್ತಕ ಒದಗಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಒಂದರೆಡು ಹಾಸ್ಟೆಲ್‌ಗೆ ಸೀಮಿತ: ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಜಿಲ್ಲೆಯ ವಸತಿ ನಿಲಯಗಳ ಬಗ್ಗೆ ಪರಿಶೀಲನೆ ಬಂದ ವೇಳೆ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೇವಲ ಒಂದರೆಡು ವಸತಿ ಶಾಲೆಗಳಿಗೆ ಮಾತ್ರ ಕರೆದುಕೊಂಡು ಹೋಗಿ ತೋರಿಸಿದರು. ಆದರೆ, ಸಮಸ್ಯೆ ಇರುವ ಕಡೆ ಹೋಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಜೊತೆಗೆ ಆಯುಕ್ತರ ಭೇಟಿ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಾಕಷ್ಟು ಗುಟ್ಟಾಗಿ ಇರಿಸಿಕೊಂಡು ಮಾಧ್ಯಮಗಳಿಗೂ ಮಾಹಿತಿ ನೀಡದಂತೆ ಇಲಾಖೆ ಅಧಿಕಾರಿಗಳು ಒಂದರೆಡು ಹಾಸ್ಟೆಲ್‌ಗಳಿಗೆ ಆಯುಕ್ತರನ್ನು ಕರೆದುಕೊಂಡು ಹೋಗಿ ಪರಿಶೀಲನಾ ಶಾಸ್ತ್ರ ಮುಗಿಸಿದ್ದಾರೆಂದು ಸ್ಥಳೀಯರು ದೂರಿದ್ದಾರೆ.
ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ತೇಜ್ ಆನಂದ್‌ರೆಡ್ಡಿ, ಬಾಗೇಪಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಆಯುಕ್ತರಿಗೆ ದಿಕ್ಕುತಪ್ಪಿಸಿದ ಅಧಿಕಾರಿಗಳು: ಜಿಲ್ಲೆಯ ಹಾಸ್ಟೆಲ್‌ಗಳ ಸ್ಥಿತಿಗತಿ ತಿಳಿಯಲು ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆ ಆಯುಕ್ತರನ್ನು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ದಿಕ್ಕು ತಪ್ಪಿಸಿ ಹಾಸ್ಟೆಲ್ ಭೇಟಿ ನೀಡುವ ಬಗ್ಗೆ ಮೊದಲೇ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಅಲ್ಲದೇ, ಹಾಸ್ಟೆಲ್‌ಗಳಲ್ಲಿ ಏನು ಸಮಸ್ಯೆ ಇಲ್ಲದಂತೆ ಬಿಂಬಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿ ಹೊಸದಾಗಿ ನೇಮಕಗೊಂಡಿರುವ ಪೆದ್ದಪ್ಪಯ್ಯ ಜಿಲ್ಲೆಯ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಖುದ್ದು ಮೂಲ ಸೌಕರ್ಯ ಪರಿಶೀಲಿಸಿದ್ದಾರೆ. ಆದರೆ, ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಮೊದಲೇ ಪೂರ್ವನಿಯೋಜಿತವಾಗಿ ಒಂದರೆಡು ಹಾಸ್ಟೆಲ್ ತೋರಿಸುವ ಮೂಲಕ ಜಿಲ್ಲೆಯಲ್ಲಿ ಸಮಸ್ಯೆಗಳೇ ಇಲ್ಲ ಎನ್ನುವ ರೀತಿಯಲ್ಲಿ ಅಧಿಕಾರಿಗಳು ವರ್ತಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.