Advertisement

ಚುನಾವಣಾ ಸಾಕ್ಷರತೆಗೆ ಮುಂದಾದ ಆಯೋಗ

12:43 PM Oct 01, 2018 | |

ಬೆಂಗಳೂರು: ಚುನಾವಣಾ ಆಯೋಗ  ಶಿಕ್ಷಣ ಇಲಾಖೆ ಜತೆಗೂಡಿ ವಿದ್ಯಾರ್ಥಿಗಳಿಗೆ ಚುನಾವಣಾ ಅರಿವು ಮೂಡಿಸಲು ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ಶಾಲಾ ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್‌ ಹಾಗೂ ಚುನಾವಣಾ ಪಾಠಶಾಲಾ ಕೂಡ ರಚನೆ ಮಾಡಲಾಗಿದೆ.

Advertisement

ಪ್ರಜಾಪ್ರಭುತ್ವ, ಚುನಾವಣೆ ಮತ್ತು ಚುನಾವಣಾ ಪ್ರಕ್ರಿಯೆ, ನೂತನ ಮತದಾರರ ಗುರುತಿನ ಚೀಟಿ ಪಡೆಯುವ ವಿಧಾನ ಸೇರಿದಂತೆ ವಿವಿಧ ಮಾಹಿತಿ ನೀಡಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಈ ಎರಡು ಸಮಿತಿಗಳು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜಿಸಲಿವೆ.

ರಾಜ್ಯದ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜು, ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜು, ವಿಶ್ವವಿದ್ಯಾಲಯ, ಇಂಜಿನಿಯರಿಂಗ್‌ ಕಾಲೇಜು, ಪಾಲಿಟೆಕ್ನಿಕ್‌ ಕಾಲೇಜು ಹಾಗೂ ಆರ್ಟ್ಸ್ ಮತ್ತು ಡ್ರಾಯಿಂಗ್‌ ಶಾಲೆಗಳ ವಿದ್ಯಾರ್ಥಿಗಳಿಗೆ ಚುನಾವಣಾ ಸಂಬಂಧ ಚಿತ್ರಪಟ ಹಾಗೂ ಕೊಲೇಜ್‌ ಸಿದ್ಧಪಡಿಸುವ ಹಾಗೂ ಪ್ರಬಂಧ ಸ್ಪರ್ಧೆ ನಡೆಯಲಿದೆ.ವಿದ್ಯಾರ್ಥಿಗಳಿಗೆ ಅವರ ಶಾಲಾ ಕಾಲೇಜು ವಿಭಾಗವಾರು ಥೀಮ್‌ ನೀಡಲಾಗಿದೆ.

ಆರ್ಟ್ಸ್ ಮತ್ತು ಡ್ರಾಯಿಂಗ್‌ ಶಾಲೆಯ ವಿದ್ಯಾರ್ಥಿಗಳಿಗೆ ಚಿತ್ರಪಟ ಹಾಗೂ ಕೊಲೇಜ್‌ ಸಿದ್ಧಪಡಿಸುವ ಸ್ಪರ್ಧೆ ರೂಪಿಸಲಾಗಿದೆ. ಇದಕ್ಕಾಗಿ “ಯಾವ ಮತದಾರರನ್ನು ಕೈ ಬಿಡುವಂತಿಲ್ಲ’, “ಪೂರ್ಣ ಮಾಹಿತಿ ಒಳಗೊಂಡ ಮತ್ತು ನೈತಿಕ ಮತದಾನ’ ಹಾಗೂ “ಸುಗಮ ಚುನಾವಣೆ’ ಎಂಬ ವಿಷಯ ನೀಡಲಾಗಿದೆ.

“ಮತದಾನವನ್ನು ಕಡ್ಡಾಯಗೊಳಿಸಬೇಕೇ?: ಗಂಭೀರ ಅಪರಾಧಗಳನ್ನು ಎಸಗಿದ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕೇ?’ ಹಾಗೂ “ಪ್ರಜಾಪ್ರಭುತ್ವದಲ್ಲಿ ಭಾರತ ಚುನಾವಣಾ ಆಯೋಗದ ಪಾತ್ರ’ ಎಂಬ ವಿಷಯ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರಬಂಧ ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ.

Advertisement

ಪಿಯುಸಿ ಮತ್ತು ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳ ಪ್ರಬಂಧ ಸ್ಪರ್ಧೆಗೆ “ಮತದಾನ ನನ್ನ ಸಂವಿಧಾನಿಕ ಹಕ್ಕು’, “ಮತದಾನವೇ ರಾಷ್ಟ್ರ ನಿರ್ಮಾಣದ ಮೊದಲ ಸೋಪಾನ’, “ಚುನಾವಣಾ ಅಭ್ಯರ್ಥಿಯಲ್ಲಿ ಅಪೇಕ್ಷಿಸುವ ಗುಣಗಳು’, “ಚುನಾವಣಾ ಆಯೋಗದ ರಚನೆ ಮತ್ತು ಕರ್ತವ್ಯ’, “ಪ್ರಜಾಪ್ರಭುತ್ವಕ್ಕೆ ಚುನಾವಣಾ ಆಯೋಗದ ಕೊಡುಗೆ’, “ನಿಷ್ಪಕ್ಷಪಾತ ಮತ್ತು ಪಾರದರ್ಶಕ ಚುನಾವಣಾ ನಿರ್ವಹಣೆ’, “ನೋಟಾ ನನ್ನ ಆಯ್ಕೆ ಆಗಬೇಕೇ? ಹೀಗೆ ಏಳು ವಿಷಯ ನೀಡಲಾಗಿದೆ.

“ಮತದಾರರ ಶಿಕ್ಷಣದ ಅವಶ್ಯಕತೆ: “ಇಂದಿನ ಸನ್ನಿವೇಶದಲ್ಲಿ ಆನ್‌ಲೈನ್‌ ಮತದಾನ ಪದ್ಧತಿ ಸಾಧುವೇ?’,”ಪ್ರಜಾಪ್ರಭುತ್ವದಲ್ಲಿ ಭಾರತ ಚುನಾವಣಾ ಆಯೋಗದ ಪಾತ್ರ’, “ಚುನಾವಣಾ ನಿರ್ವಹಣೆಯಲ್ಲಿ ನಿಷ್ಪಕ್ಷಪಾತ ಹಾಗೂ ಪಾರದರ್ಶಕತೆ’, “ಭಾರತದ ಚುನಾವಣಾ ಆಯೋಗದ ರಚನೆ ಹಾಗೂ ಕರ್ತವ್ಯ’ ಮತ್ತು “ನೋಟಾ ನನ್ನ ಆಯ್ಕೆ ಆಗಬೇಕೇ?’ ಹೀಗೆ ಆರು ವಿಷಯಗಳನ್ನು ಪದವಿ, ಸ್ನಾತಕೋತ್ತರ ಪದವಿ ಹಾಗೂ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ.

ಸ್ಪರ್ಧೆ ವಿವರ: ಚುನಾವಣಾ ಅರಿವು ಕುರಿತಾಗಿ ನಡೆಸಬೇಕಾದ ಸ್ಪರ್ಧೆಯ ಮಾಹಿತಿ ಆಯಾ ಜಿಲ್ಲಾ ಉಪನಿರ್ದೇಶಕರ ಮೂಲಕ ಶಾಲಾ, ಕಾಲೇಜುಗಳಿಗೆ ನೀಡಲಾಗಿದೆ. ವಿದ್ಯಾರ್ಥಿಗಳು ಅ. 10ರೊಳಗೆ ನೋಂದಣಿ ಮಾಡಿಕೊಳ್ಳಬಹುದು. ಆರಂಭದಲ್ಲಿ ಶಾಲಾ ಕಾಲೇಜು ಹಂತದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ. ನಂತರ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ನಡೆಸಿ ವಿಜೇತರ ಪಟ್ಟಿ ಘೋಷಿಸಲಾಗುತ್ತದೆ. ನಂತರ ಎಲ್ಲ ಜಿಲ್ಲೆಗಳ ಮಾಹಿತಿ ಸಂಗ್ರಹಿಸಿ ರಾಜ್ಯ ಮಟ್ಟದ ವಿಜೇತರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next