Advertisement
ಮತದಾನಕ್ಕೆ ಮಾಡಿಕೊಳ್ಳಲಾದ ಸಿದ್ಧತೆಗಳ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, 14 ಕ್ಷೇತ್ರಗಳಲ್ಲಿ ಶಾಂತಿಯುತ, ಸುಗಮ ಮತದಾನಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
Related Articles
Advertisement
ಅತಿ ಹೆಚ್ಚು 57 ಅಭ್ಯರ್ಥಿಗಳು ಇರುವ ಬೆಳಗಾವಿ ಕ್ಷೇತ್ರದಲ್ಲಿ 4 ಬ್ಯಾಲೆಟ್ ಯೂನಿಟ್‌ಗಳನ್ನು ಬಳಸಿದರೆ, 16 ಕ್ಕಿಂತ ಹೆಚ್ಚು ಅಭ್ಯರ್ಥಿಗಳಿರುವ ಬೀದರ್, ಹಾವೇರಿ ಹಾಗೂ ದಾವಣಗೆರೆ ಕ್ಷೇತ್ರಗಳಲ್ಲಿ ತಲಾ 2 ಬ್ಯಾಲೆಟ್ ಯೂನಿಟ್‌ಗಳನ್ನು ಬಳಸಲಾಗುತ್ತಿದೆ ಎಂದು ಸಂಜೀವ್ ಕುಮಾರ್ ತಿಳಿಸಿದರು.
ಮೌನ ಅವಧಿ: ಏ.23ರಂದು ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ ಭಾನುವಾರ (ಏ.21) ಸಂಜೆ 6 ಗಂಟೆಯಿಂದ “ಮೌನ ಅವಧಿ’ ಜಾರಿಗೆ ಬರಲಿದ್ದು, ಏ.21ರ ಸಂಜೆ 6ರಿಂದ ಏ.23ರ ಸಂಜೆ ರವರೆಗೆ ಇದು ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಎಲ್ಲ ರೀತಿಯ ಬಹಿರಂಗ ಪ್ರಚಾರ, ಧ್ವನಿವರ್ದಕ ಬಳಕೆ, ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.
ಅಲ್ಲದೇ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸೆಕ್ಷನ್ 144 ಹೇರಲಾಗಿರುತ್ತದೆ. ಈ ಅವಧಿಯಲ್ಲಿ ಗಡಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗುವುದು. ಚುನಾವಣಾ ನೀತಿ ಸಂಹಿತೆ ಜಾರಿ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು. ಹೆಚ್ಚು ಅಕ್ರಮ ಹಣ ಜಪ್ತಿಯಾಗಿರುವ ಕ್ಷೇತ್ರಗಳ ಮೇಲೆ ವಿಶೇಷ ನಿಗಾ ಇಡಲಾಗುವುದು ಎಂದು ಸಂಜೀವ್ ಕುಮಾರ್ ತಿಳಿಸಿದರು.
“ಮಾಸ್ ಡಿಲೀಶನ್’ ಶುದ್ಧ ಸುಳ್ಳು – ಸಿಇಒ: ಮತದಾರರ ಪಟ್ಟಿಯಲ್ಲಿ “ದೊಡ್ಡ ಮಟ್ಟದಲ್ಲಿ ಮತದಾರರ ಹೆಸರು ತೆಗೆದು ಹಾಕಲಾಗಿದೆ’ (ಮಾಸ್ ಡಿಲೀಶನ್) ಎಂಬ ಆರೋಪ ಶುದ್ಧ ಸುಳ್ಳು. ಆ ರೀತಿ ದೊಡ್ಡ ಪ್ರಮಾಣದಲ್ಲಿ ಹೆಸರು ತೆಗೆದು ಹಾಕಿಲ್ಲ, ಹಾಕುವುದಕ್ಕೆ ಸಾಧ್ಯವೂ ಇಲ್ಲ. ರಾಜಕೀಯ ಪಕ್ಷಗಳಿಗೆ ಜ.16ರಂದು ನೀಡಲಾಗಿದ್ದ ಮತದಾರರ ಪಟ್ಟಿ ಇಟ್ಟುಕೊಂಡು ನೋಡಿದರೆ ಕೆಲವೊಂದು ಗೊಂದಲಗಳು ಮೂಡುವುದು ಸಹಜ.
ಅಭ್ಯರ್ಥಿಗಳಿಗೆ ನೀಡಲಾದ ಅಂತಿಮ ಪಟ್ಟಿ ಪರಿಶೀಲಿಸಿಕೊಂಡರೆ ಈ ಗೊಂದಲ ಇರುವುದಿಲ್ಲ. ನಿರ್ದಿಷ್ಟ ಪ್ರಕರಣಗಳಿದ್ದರೆ ಒಂದೊಂದು ಪ್ರಕರಣದ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ. ಆಧಾರ-ಪುರಾವೆಗಳಿಲ್ಲದೇ ಮಾಡುವ ಆರೋಪಗಳಿಗೆ ಉತ್ತರ ಕೊಡುವುದಿಲ್ಲ. ಪರಿಶೀಲನೆಯೂ ನಡೆಸುವುದಿಲ್ಲ ಎಂದು ಸಂಜೀವ್ ಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗುವುದು.-ಸಂಜೀವ್ ಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ.