Advertisement

ಭೂಸ್ವಾಧೀನ ಅನುದಾನಕ್ಕೆ ಸಿಎಂ ಬಳಿ ನಿಯೋಗ: ಐವನ್‌ ಡಿ’ಸೋಜಾ

04:07 PM Apr 28, 2017 | Team Udayavani |

ಮಹಾನಗರ: ಮಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ  ತುಂಬೆಯ ನೂತನ ಅಣೆಕಟ್ಟಿನ‌ಲ್ಲಿ 7 ಮೀಟರ್‌ ಎತ್ತರಕ್ಕೆ ನೀರು ನಿಲ್ಲಿಸಲು ಭೂಸ್ವಾಧೀನಕ್ಕೆ ಅವಶ್ಯವಿರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ  ಕೋರಿ ಮುಖ್ಯಮಂತ್ರಿಯವರ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಹೇಳಿದರು.

Advertisement

ತುಂಬೆ ವೆಂಟೆಡ್‌ಡ್ಯಾಂಗೆ ಗುರುವಾರ ಭೇಟಿ ನೀಡಿ   ನೀರಿನ ಮಟ್ಟ  ಪರಿಶೀಲಿಸಿದ ಅವರು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. 
ಬಳಿಕ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು, ನಗರದ ಶಾಸಕರು, ಪಾಲಿಕೆ  ಮೇಯರ್‌ ಮತ್ತು ಕಾರ್ಪೊರೇಟರ್‌ಗಳನ್ನು ಒಳಗೊಂಡ ನಿಯೋಗವೊಂದು  ಸಿಎಂ ಬಳಿ ತೆರಳಿ  7 ಮೀಟರ್‌ ನೀರು ಸಂಗ್ರಹ ಮಾಡುವು ದರಿಂದ ಮುಳುಗಡೆ ಯಾಗುವ ಭೂಮಿಯ  ಸ್ವಾಧೀನ  ಮಾಡಿ ಪರಿಹಾರ ನೀಡಲು ಅವಶ್ಯವಿರುವ ಅನುದಾನವನ್ನು  ಶೀಘ್ರ ಮಂಜೂರು ಮಾಡುವಂತೆ ಒತ್ತಾಯಿಸಲಾಗುವುದು.ವೆಂಟೆಡ್‌ ಡ್ಯಾಂನಲ್ಲಿ    7 ಮೀಟರ್‌ ನೀರು ಸಂಗ್ರಹವಾದರೆ ಮಂಗಳೂರು ನಗರದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿರುವುದು ಎಂದರು.

ಸರ್ವೆಯಂತೆ  4ರಿಂದ 5 ಮೀ.ವರೆಗೆ ನೀರು ನಿಲ್ಲಿಸಲು 49.93 ಎಕ್ರೆ, 5ರಿಂದ 6 ಮೀ. ವರೆಗೆ 51.41 ಎಕ್ರೆ , 6 ರಿಂದ 7 ಮೀ. ವರೆಗೆ 182.13 ಎಕ್ರೆ , 7ರಿಂದ 8 ಮೀ. ವರೆಗೆ 194.14 ಎಕ್ರೆ  ಸೇರಿ ಒಟ್ಟು  477.61 ಎಕ್ರೆ ಭೂಮಿ ಮುಳುಗಡೆ ಯಾಗಲಿದೆ. ಭೂಸ್ವಾಧೀನಕ್ಕೆ ಒಟ್ಟು  250 ಕೋ.ರೂ. ಅವಶ್ಯವಿದೆ ಎಂದರು. 

ಪ್ರಸ್ತುತ  49. 93  ಎಕ್ರೆ ಭೂಮಿಯನ್ನು   6 ತಿಂಗಳವರೆಗೆ ನೆಲಬಾಡಿಗೆಗೆ ಪಡೆದು 5 ಮೀಟರ್‌ ನೀರು ನಿಲ್ಲಿಸಲಾಗಿದೆ. 21 ರೈತರಿಗೆ  ನೆಲಬಾಡಿಗೆ ನೀಡಲಾಗಿದೆ. ರೈತರಿಗೆ ಶಾಶ್ವತ ಪರಿಹಾರ ಒದಗಿಸಲು  7 ಕೋ.ರೂ. ಈಗಾಗಲೇ  ಸರಕಾರ ಬಿಡುಗಡೆ ಮಾಡಿದೆ ಎಂದರು. 

ಅನುದಾನದ ಕೊರತೆ ಇಲ್ಲ
ಮಂಗಳೂರಿನಲ್ಲಿ 128 ಬೋರ್‌ವೆಲ್‌ಗ‌ಳು ಸುಸ್ಥಿತಿಯಲ್ಲಿದ್ದು  ಬಳಕೆಯಾಗು ತ್ತಿದೆ. ಬೇಸಗೆಯಲ್ಲಿ  ಕುಡಿಯುವ ನೀರಿಗಾಗಿ 1.12 ಕೋ.ರೂ. ಸರಕಾರ ಬಿಡುಗಡೆ ಮಾಡಿದ್ದು  ಬೋರ್‌ವೆಲ್‌ಗ‌ಳ ರಿಚಾರ್ಚ್‌, ಅಂತರ್ಜಲ ವೃದ್ಧಿ ಸಹಿತ ಕುಡಿಯುವ ನೀರು ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದರು. ಉಪಮೇಯರ್‌ ರಜನೀಶ್‌,  ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯೀ ಸಮಿತಿ ಅಧ್ಯಕ್ಷರಾದ ನಾಗವೇಣಿ, ಪ್ರತಿಭಾ ಕುಳಾಯಿ, ಕಾರ್ಪೊರೇಟರ್‌ಗಳಾದ ನವೀನ್‌ ಡಿ’ಸೋಜಾ, ಭಾಸ್ಕರ್‌, ಆಶಾ ಡಿ’ ಸಿಲ್ವ,  ಆಯುಕ್ತ ಮಹಮ್ಮದ್‌ ನಜೀರ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ನಿಂಗೇಗೌಡ, ನರೇಶ್‌ ಶೆಣೈ, ಅಧೀ ಕ್ಷಕ ಎಂಜಿನಿಯರ್‌ ಶ್ರೀನಿವಾಸ್‌ ಇದ್ದರು.

Advertisement

ನೀರಿನ ನಿರ್ವಹಣೆ ಸಮರ್ಪಕ
ತುಂಬೆ ವೆಂಟೆಡ್‌ಡ್ಯಾಂಗೆ ಎಎಂಆರ್‌ನಿಂದ ನೀರು ಬಿಡಲಾಗಿದ್ದು, ಗುರುವಾರ ಬೆಳಗ್ಗೆ ನೀರಿನ ಮಟ್ಟ  5 ಮೀಟರ್‌ ತಲುಪಿದೆ. ಕಳೆದ ವರ್ಷ ಇದೇ ದಿನಾಂಕದಂದು ಕನಿಷ್ಠ ಮಟ್ಟಕ್ಕೆ  ತಲುಪಿತ್ತು.  ಎಎಂಆರ್‌ನಲ್ಲಿ 3.9 ಮೀಟರ್‌  ನೀರು ಸಂಗ್ರಹವಿದೆ. ಕಳೆದ ವರ್ಷ ಈ ಡ್ಯಾಮ್‌ನಲ್ಲಿ ಈ ದಿನ 1.96 ಮೀಟರ್‌ ನೀರಿನ ಸಂಗ್ರಹವಿತ್ತು. ಈ ವರ್ಷ ಜಿಲ್ಲಾಧಿಕಾರಿಗಳು, ಪಾಲಿಕೆ ಆಡಳಿತ ಸಾಕಷ್ಟು  ಮುಂಚಿತವಾಗಿ ಸೂಕ್ತ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ನೀರಿನ ನಿರ್ವಹಣೆ ಸಮರ್ಪಕವಾಗಿ  ನಡೆಯುತ್ತಿದೆ.  ಎ. 26ರಿಂದ  ನಗರಕ್ಕೆ  ದಿನಂಪ್ರತಿ ನೀರು ನೀಡಲಾಗುತ್ತಿದೆ . ಪ್ರಸ್ತುತ ಇರುವ ನೀರಿನ ಸಂಗ್ರಹದಲ್ಲಿ  ಸುಮಾರು 30 ರಿಂದ 40 ರ ದಿನವರೆಗೆ ನಗರಕ್ಕೆ  ದಿನಂಪ್ರತಿ ಕುಡಿಯುವ ನೀರು ನೀಡಬಹುದು ಎಂದು ಅಂದಾಜಿಸಲಾಗಿದೆ. ತುಂಬೆ ಡ್ಯಾಂನಲ್ಲಿ 7 ಮೀಟರ್‌ ನೀರು ಸಂಗ್ರಹ  ಮಾಡಿದರೆ 14.73 ದಶಲಕ್ಷ ಕ್ಯುಬಿಕ್‌  ಮೀಟರ್‌ ನೀರು ಸಂಗ್ರಹ ಮಾಡಬಹುದಾಗಿದೆ ಎಂದು ಐವನ್‌ ಡಿ’ಸೋಜಾ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next