ಬೆಂಗಳೂರು:ರಾಜ್ಯದಲ್ಲಿ ಕಮಿಷನ್ ಪರ್ವ ಆರಂಭವಾಗಿದ್ದು, ಲೋಕೋಪಯೋಗಿ, ಆರೋಗ್ಯ, ನೀರಾವರಿ, ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ, ಗುತ್ತಿಗೆದಾರರ ಸಂಘದ ಅಧ್ಯಕ್ಷರು ಬರೆದರೂ, ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡರೂ ರಾಜ್ಯಸರ್ಕಾರದಿಂದ ಅಥವಾ ಕೇಂದ್ರ ಸರ್ಕಾರದಿಂದ ಕಮಿಷನ್ ಮಟ್ಟ ಹಾಕಲು ಸಾಧ್ಯವಾಗಿಲ್ಲ. ಈ ಕಮಿಷನ್ ಪರ್ವ ಈಗ ತಾರಕಕ್ಕೆ ಹೋಗಿದ್ದು, ಅದಕ್ಕೆ ಮತ್ತೂಂದು ಉದಾಹರಣೆ ರಾಯಚೂರು ಜಿಲ್ಲಾ ನಾರಾಯಣಪುರ ಆಣೆಕಟ್ಟಿನ ಬಲದಂಡೆ ಕಾಲುವೆ ಕಾಮಗಾರಿ ವಿಚಾರ ಎಂದು ದೂರಿದರು.
ಮೊದಲ ಪ್ಯಾಕೇಜ್ ಅನ್ನು 828.40 ಕೋಟಿ ರೂ.ಗೆ ಎನ್ ಡಿ ವಡ್ಡರ್ ಅಂಡ್ ಕಂಪನಿಗೆ ಆಗಿದೆ. ಅವರ ಸಹೋದರರು ಮಾಜಿ ಶಾಸಕರಾಗಿದ್ದು, ಹಟ್ಟಿ ಗೋಲ್ಡ… ಮೈನ್ ಮುಖ್ಯಾಸ್ಥರಾಗಿದ್ದಾರೆ. ಇವರಿಗೆ ಎರಡನೇ ಪ್ಯಾಕೇಜ್ 791 ಕೋಟಿಗೆ ನಿಗದಿಯಾಗಿದ್ದು, ಎರಡೂ ಪ್ಯಾಕೇಜ್ ನಿಂದ 1619 ಕೋಟಿ ರೂ. ಮೊತ್ತದ ಕಾಮಗಾರಿಯಲ್ಲಿ ಕಳಪೆ ಕಾಮಗಾರಿಯಾಗಿದ್ದು, ಈಗಾಗಲೇ ಮೊದಲ ಪ್ಯಾಕೇಜ್ ನಲ್ಲಿ 282 ಕೋಟಿ ರೂ. ಹಾಗೂ ಎರಡನೇ ಪ್ಯಾಕೇಜ್ ನಲ್ಲಿ 143 ಕೋಟಿ ರೂ. ಪಾವತಿಯಾಗಿದೆ ಎಂದು ಆರೋಪಿಸಿದರು.
40 ಪರ್ಸೆಂಟ್ ಕಮಿಷನ್ ಪಡೆಯುವ ವಿಚಾರವಾಗಿ ಶಿವಕುಮಾರ್ ಎಂಬ ಮುಖ್ಯ ಇಂಜಿನಿಯರ್ ಹಾಗೂ ಬಿಜೆಪಿ ಸ್ಥಳೀಯ ಶಾಸಕ ಶಿವನಗೌಡ ಅವರ ಮಧ್ಯೆ ದೂರವಾಣಿ ಸಂಭಾಷಣೆ ನಡೆದಿದ್ದು, ಶಾಸಕರು ಅಧಿಕಾರಿಗೆ ಅತ್ಯಂತ ಅವಾಚ್ಯ ಶಬ್ಧಗಳನ್ನು ಬಳಸಿ ನಿಂದಿದಿದ್ದಾರೆ. ಈ ಸಂಭಾಷಣೆಯಲ್ಲಿ ನೀನು 200 ಕೋಟಿ ರೂ. ನಕಲಿ ಬಿಲ್ ಕೊಟ್ಟಿದ್ದೀಯಾ ಎಂದು ಹಾಗೂ ನನ್ನನ್ನು ಕೇಳದೇ ಬಿಲ್ ಯಾಕೆ ಬರೆದೆ ಎಂಬ ವಿಚಾರಗಳು ಪ್ರಸ್ತಾಪವಾಗಿವೆ ಎಂದು ಹೇಳಿದರು.
ಸ್ಥಳೀಯ ಶಾಸಕರೇ 200 ಕೋಟಿ ರೂ.ನಷ್ಟು ನಕಲಿ ಬಿಲ್ ಎಂದಿದ್ದು, ಈ ನಕಲಿ ಬಿಲ್ ಗೆ ಸರ್ಕಾರ 200 ಕೋಟಿ ಪಾವತಿ ಮಾಡಿದೆ ಎಂದಾದರೆ ಆವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬೇಕು. ಇನ್ನು ನನ್ನನ್ನು ಕೇಳಿ ಯಾಕೆ ಬಿಲ್ ಬರೆಯಲಿಲ್ಲ ಎಂದು ಹೇಳಿದ್ದಾರೆ. ಇದುವರೆಗೂ ನಮ್ಮ ರಾಜಕೀಯ ಜೀವನದಲ್ಲಿ ಶಾಸಕರನ್ನು ಕೇಳಿ ಬಿಲ್ ಬರೆಯುವ ವ್ಯವಸ್ಥೆ ಇದೇ ಮೊದಲು ಕೇಳಿದ್ದೇನೆ ಎಂದು ತಿಳಿಸಿದರು.
ಎರಡೂ ಪ್ಯಾಕೇಜ್ ನಿಂದ ಈಗಾಗಲೇ 425 ಕೋಟಿ ಬಿಲ್ ಪಾವತಿಯಾಗಿದ್ದು, ಈ ಆಡಿಯೋ ಸಂಭಾಷಣೆ ಕೇಳಿದ ನಂತರ ರಾಜ್ಯದಲ್ಲಿ ಸರ್ಕಾರ ಜೀವಂತವಾಗಿದ್ದರೆ ಈ ವಿಚಾರವಾಗಿ ತನಿಖೆ ಮಾಡಲು ಮುಂದಾಗಬೇಕಿತ್ತು ಎಂದರು.
ಈ ಆಡಿಯೋದಲ್ಲಿ ಮಾತನಾಡಿರುವುದು ನಾನೇ ಎಂದು ಶಾಸಕರು ಮಾಧ್ಯಮವೊಂದರಲ್ಲಿ ಒಪ್ಪಿಕೊಂಡಿದ್ದಾರೆ. ಅವರು ಕೆಆರ್ ಡಿಸಿಎಲ್ ಅಧ್ಯಕ್ಷರಾಗಿದ್ದು, ಸಂಪುಟ ದರ್ಜೆಯಲ್ಲಿದ್ದಾರೆ. ತಕ್ಷಣ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಮಾಜಿ ಸಂಸದ ಚಂದ್ರಪ್ಪ, ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಸಹ ಸಂಚಾಲಕರಾದ ರಾಮಚಂದ್ರಪ್ಪ, ಸುರೇಶ್ ನಾಯ್ಕ ದೇವದುರ್ಗ ಉಪಸ್ಥಿತರಿದ್ದರು.