ಧಾರವಾಡ: ಜಿಲ್ಲೆಯಲ್ಲಿ ಎಸ್ ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭಗೊಂಡಿದ್ದು, ಪ್ರಥಮ ಭಾಷೆಯ ಪರೀಕ್ಷೆಗೆ ನೋಂದಣಿಯಾಗಿದ್ದ 28,332 ವಿದ್ಯಾರ್ಥಿಗಳ ಪೈಕಿ 28,065 ವಿದ್ಯಾರ್ಥಿಗಳು ಹಾಜರಾಗಿದ್ದರೆ, 267 ಜನ ಗೈರು ಹಾಜರಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 113 ಎಸ್ ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇನ್ನು ಎಸ್‌ಎಸ್‌ಎಲ್‌ಸಿ ಬಾಹ್ಯ ಪರೀಕ್ಷೆ ತೆಗೆದುಕೊಂಡಿರುವ ಪರೀಕ್ಷಾರ್ಥಿಗಳಿಗಾಗಿ ಧಾರವಾಡ ನಗರದಲ್ಲಿ 3 ಖಾಸಗಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬಾಹ್ಯ ಪರೀಕ್ಷೆಗೆ ಒಟ್ಟು 1163 ವಿದ್ಯಾರ್ಥಿಗಳು ನೋಂದಾಯಿತರಾಗಿದ್ದಾರೆ. ಸೋಮವಾರ ನಡೆದ ಪರೀಕ್ಷೆಗೆ 1027 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು, 136 ಜನ ಗೈರು ಹಾಜರಾಗಿದ್ದಾರೆ.
ಡಿಸಿ ಭೇಟಿ: ನಗರದ ಬಾಸೆಲ್ ಮಿಷನ್ ಇಂಗ್ಲಿಷ್ ಮಾಧ್ಯಮ ಶಾಲೆ ಸೇರಿದಂತೆ ವಿವಿಧ ಶಾಲೆಗಳಲ್ಲಿನ ಎಸ್. ಎಸ್‌ಎಲ್.ಸಿ ಪರೀಕ್ಷಾ ಕೇಂದ್ರಗಳಿಗೆ ಡಿಸಿ ನಿತೇಶ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಯಾವುದೇ ರೀತಿಯ ನಕಲು, ದುರ್ವರ್ತನೆ ಸೇರಿದಂತೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ, ಎಸ್ ಎಸ್‌ಎಲ್‌ಸಿ ಜಿಲ್ಲಾ ನೋಡೆಲ್ ಅ ಧಿಕಾರಿ ಪೂರ್ಣಿಮಾ ಮುಕ್ಕುಂದಿ, ವಿಷಯ ಪರಿವೀಕ್ಷಕ ಸಂಜಯ ಮಾಳಿ, ಬಾಸೆಲ್ ಮಿಷನ್ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಇ.ಎಸ್. ತುಮಕೂರ, ಮಂಜುನಾಥ ಸೇರಿದಂತೆ ಹಲವರು ಇದ್ದರು.