Advertisement

ರೈತರ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರ ಆರಂಭ

09:03 PM Feb 17, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಯಶಸ್ವಿಯಾಗಿ ಕೃಷಿ ಮೇಳದ ಭಾಗವಾಗಿ ಸಿರಿಧಾನ್ಯಗಳ ಹಬ್ಬ ಹಾಗೂ ಫ‌ಲಪುಪ್ಪ ಪ್ರದರ್ಶನ ಆಯೋಜಿಸಿ ಗಮನ ಸೆಳೆದಿದ್ದ ಕೃಷಿ ಇಲಾಖೆ, ಇದೀಗ ಜಿಲ್ಲೆಯ ಅನ್ನದಾತರಿಗೆ ನಿರಂತರವಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಿದೆ.

Advertisement

ಹೌದು, ಕೃಷಿ ಪ್ರಧಾನವಾದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಾವರಿ ಜೊತೆಗೆ ಖುಷ್ಕಿ ಬೇಸಾಯವನ್ನೇ ನಂಬಿಕೊಂಡಿರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸಣ್ಣ, ಅತಿ ಸಣ್ಣ ರೈತರು ಇರುವ ಜಿಲ್ಲೆಯಲ್ಲಿ ಬರೋಬ್ಬರಿ 1.54 ಲಕ್ಷ ಹೆಕ್ಟೇರ್‌ನಲ್ಲಿ ಖುಷ್ಕಿ ಬೇಸಾಯ ನಡೆಸಿದರೆ, ಸುಮಾರು 40 ಸಾವಿರಕ್ಕೂ ಅಧಿಕ ಹೆಕ್ಟೇರ್‌ ಪ್ರಮಾಣದಲ್ಲಿ ನೀರಾವರಿ ಕೃಷಿ ಮಾಡಲಾಗುತ್ತಿದೆ. ಆದ್ದರಿಂದ ರೈತರಿಗೆ ಅನುಕೂಲವಾಗಲು ಕೃಷಿ ಇಲಾಖೆ ಸಹಾಯವಾಣಿ ಕೇಂದ್ರ ಸ್ಥಾಪಿಸಿರುವುದು ಜಿಲ್ಲೆಯ ರೈತರಿಗೆ ಖುಷಿ ತಂದಿದೆ.

ವಾಣಿಜ್ಯ ಬೆಳೆ: ಜಿಲ್ಲೆಯಲ್ಲಿ ಪ್ರತಿ ತಾಲೂಕಿನಲ್ಲಿ ಒಂದೊಂದು ವಾಣಿಜ್ಯ ಬೆಳೆಯನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದ್ದು, ಚಿಕ್ಕಬಳ್ಳಾಪುರ ತಾಲೂಕು ದ್ರಾಕ್ಷಿ, ಆಲೂಗಡ್ಡೆ, ಗುಲಾಬಿ ಹೂ ಬೆಳೆಯುವಲ್ಲಿ ಮುಂಚೂಣಿಯಲ್ಲಿದೆ. ಚಿಂತಾಮಣಿ, ಮಾವು, ಟೊಮೆಟೋ ಮತ್ತಿತರ ತರಕಾರಿ ಬೆಳೆಯುವುದರಲ್ಲಿ ಮುಂಚೂಣಿಯಲ್ಲಿದೆ. ಶಿಡ್ಲಘಟ್ಟ ಸಹ ರೇಷ್ಮೆ ಜೊತೆಗೆ ಹೈನುಗಾರಿಕೆ, ತೋಟಗಾರಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ.

ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ ತಾಲೂಕುಗಳಲ್ಲಿ ಸಹ ಕೃಷಿ ಪ್ರದೇಶ ಹೇರಳವಾಗಿರುವುದರಿಂದ ಜಿಲ್ಲೆಯಲ್ಲಿ ಲಕ್ಷಾಂತರ ಕುಟುಂಬಗಳು ಕೃಷಿ ಅವಲಂಬಿಸಿಯೇ ಸ್ವಾವಲಂಬಿ ಬದುಕು ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ಕಾಲಕಾಲಕ್ಕೆ ಜಿಲ್ಲೆಯ ರೈತರಿಗೆ ಕೃಷಿ, ಪಶು, ಮೀನುಗಾರಿಕೆ, ರೇಷ್ಮೆ ಮತ್ತಿತರ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ರೈತರು ಪಡೆಯಲು ಅನುಕೂಲವಾಗಲೆಂದು ಸದ್ದಿಲ್ಲದೇ ಸಹಾಯವಾಣಿ ಕೇಂದ್ರ ತೆರೆದು ನುರಿತ ತಜ್ಞರನ್ನು ನೇಮಿಸುವ ಮೂಲಕ ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆ ಈಡೇರಿಸುವ ಮೂಲಕ ಕೃಷಿ ಇಲಾಖೆ ಗಮನ ಸೆಳೆದಿದೆ.

ರೈತರನ್ನು ಕಚೇರಿಗಳಿಗೆ ಸುತ್ತಾಡಿಸುವುದನ್ನು ತಪ್ಪಿಸಲು ಸಮಯ ಹಾಗೂ ಹಣ ವ್ಯರ್ಥ ಆಗುವುದನ್ನು ತಡೆಯುವ ಉದ್ದೇಶದಿಂದಲೇ ಸಹಾಯವಾಣಿ ಕೇಂದ್ರ ಆರಂಭಗೊಂಡಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಇದನ್ನು ಸಮರ್ಪಕವಾಗಿ ನಿಭಾಯಿಸುವ ಮೂಲಕ ರೈತರ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳಬೇಕಿದೆ.

Advertisement

ವಿವಿಧ ಇಲಾಖೆಗಳ ಮಾಹಿತಿ: ಕೃಷಿ ಇಲಾಖೆ ಆರಂಭಿಸಿರುವ ಸಹಾಯವಾಣಿ ಕೇಂದ್ರದ ಮೊಬೈಲ್‌ ಸಂಖ್ಯೆಗೆ ಕರೆ ಮಾಡುವ ರೈತರು ಜಿಲ್ಲೆಯಲ್ಲಿ ಕೃಷಿ ಆಧಾರಿತ ಇಲಾಖೆಗಳಾದ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ ಹಾಗೂ ಅರಣ್ಯ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದು. ಸರ್ಕಾರಿ ರಜೆಗಳನ್ನು ಹೊರತುಪಡಿಸಿ ರೈತರು ಕೆಲಸದ ಅವಧಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೂ ಕರೆ ಮಾಡಿ ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಬಹುದಾಗಿದೆ.

ಪ್ರಶ್ನೆಗಳಿದ್ದರೆ 8277102345 ಕರೆ ಮಾಡಿ: ಜಿಲ್ಲೆಯ ರೈತರು ಕೃಷಿ ಸಂಬಂಧಿತ ಇಲಾಖೆಗಳಲ್ಲಿ ಸಿಗುವ ಸಾಲ, ಸೌಲಭ್ಯಗಳು, ಸಮಗ್ರ ಬೇಸಾಯ, ಕಾಲಕಾಲಕ್ಕೆ ಬರುವ ಬೆಳೆಗಳ ರೋಗ, ನಿಯಂತ್ರಣ, ವಿಧಾನ ಸೇರಿದಂತೆ ಸಮಗ್ರ ಕೃಷಿ ಪದ್ಧತಿಗಳ ಬಗ್ಗೆ ರೈತರು ನೇರವಾಗಿ ಕೃಷಿ ಇಲಾಖೆ ಆರಂಭಿಸಿರುವ ಸಹಾಯವಾಣಿ ಕೇಂದ್ರದ ಸಂಖ್ಯೆ-8277102345 ಕರೆ ಮಾತಿ ತಜ್ಞರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಬಹುದಾಗಿದೆ.

ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶು ಸಂಗೋಪನೆ ಸೇರಿದಂತೆ ಕೃಷಿ ಸಂಬಂಧಿತ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಒಂದೇ ಸೂರಿನಡಿ ರೈತರಿಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದ್ದು, ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೂ ರೈತರು 8277102345 ಕರೆ ಮಾಡಿ ತಿಳಿದುಕೊಳ್ಳಬಹುದು.
-ಎಲ್‌.ರೂಪಾ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು

ಕೃಷಿ ಇಲಾಖೆ ಹಲವು ವರ್ಷಗಳ ನಂತರ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸಹಾಯವಾಣಿ ಕೇಂದ್ರ ತೆರೆದಿರುವುದು ಸಂತೋಷದ ವಿಚಾರ. ಆದರೆ ಇದು ಕಾಟಾಚಾರಕ್ಕೆ ಕಾರ್ಯ ನಿರ್ವಹಿಸಿದಂತೆ ಆಗಬಾರದು. ಸಹಾಯವಾಣಿ ಕೇಂದ್ರದ ಬಗ್ಗೆ ಜಿಲ್ಲೆಯಲ್ಲಿ ಪ್ರಚಾರ ನಡೆಸಬೇಕು. ಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿಯು ಮೊಬೈಲ್‌ ಸಂಖ್ಯೆ ಪ್ರದರ್ಶಿಸಬೇಕು.
-ವೆಂಕಟರೆಡ್ಡಿ, ಪ್ರಗತಿಪರ ರೈತ, ಚಿಂತಾಮಣಿ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next