ಹುಬ್ಬಳ್ಳಿ: ಮಹಾನಗರ ಪಾಲಿಕೆ ಆಯುಕ್ತರ ಧೋರಣೆ ಖಂಡಿಸಿ ಸುಮಾರು 20ಕ್ಕೂ ಅಧಿಕ ಕಾಂಗ್ರೆಸ್ ಸದಸ್ಯರು ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ತಮ್ಮ ಜನಪ್ರತಿನಿಧಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಅವರು ಅಭಿವೃದ್ಧಿ ವಿಷಯದಲ್ಲಿ ಪಾಲಿಕೆಯ ಸದಸ್ಯರಿಗೆ ಜಾತಿವಾರು ಭೇದ- ಭಾವ ಮಾಡುತ್ತಿದ್ದಾರೆ. ಉನ್ನತ ಜಾತಿಗಳ ಕೆಲ ಸದಸ್ಯರ ಪ್ರದೇಶಗಳಲ್ಲಿ ಸಾಕಷ್ಟು ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ಇನ್ನುಳಿದ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳುವಂತೆ ಮನವಿ ಮಾಡಿಕೊಂಡರೂ ಸದಸ್ಯರೊಂದಿಗೆ ಸರಿಯಾಗಿ ಸ್ಪಂದಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.
ಇದರಿಂದಾಗಿ ನಾವು ವಾರ್ಡ್‌ನ ಜನರಿಗೆ ಮುಖ ತೋರಿಸುವುದು ದುಸ್ತರವಾಗಿದೆ. ಆದ್ದರಿಂದ ಮುಂದಿನ ಚುನಾವಣೆಗಳ ದೃಷ್ಟಿಯಿಂದ ಅವರನ್ನು ತಕ್ಷಣವೇ ವರ್ಗಾವಣೆ ಮಾಡಿ, ಬೇರೆಯವರನ್ನು ನೇಮಿಸಬೇಕು. ಈಗಿನ ಆಯುಕ್ತರೇ ಮುಂದುವರಿದರೆ ನಮ್ಮ ವಾರ್ಡ್‌ನ ಜನರು ನಮಗೆ ಮತ ಹಾಕದೆ ವಿರೋಧಿಸಬಹುದು.
ಆಗ ನಾವು ಸೋಲು ಕಾಣುವ ಸಾಧ್ಯತೆಗಳೇ ಹೆಚ್ಚು. ಪಕ್ಷದ ಬಲವರ್ಧನೆಗೆ ಮತ್ತು ವಾರ್ಡ್‌ನ ಪ್ರದೇಶಗಳ ಸಾರ್ವಜನಿಕರ ಜೊತೆ ಉತ್ತಮ ಸಂಬಂಧ ಹೊಂದಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದು ಅತ್ಯವಶ್ಯವಾಗಿದೆ. ಜನರು ನಮ್ಮ ವಿರುದ್ಧ ಆಕ್ರೋಶಗೊಳ್ಳುವ ಮೊದಲು ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠರನ್ನು ತುರ್ತಾಗಿ ವರ್ಗಾವಣೆ ಮಾಡಲು ಸೂಕ್ತ ಕ್ರಮಕೈಗೊಳ್ಳಬೇಕು.
ಇಲ್ಲದಿದ್ದರೆ ನಾವು ನಿಮಗೆ ಸಲ್ಲಿಸುತ್ತಿರುವ ರಾಜೀನಾಮೆ ಪತ್ರ ಅಂಗೀಕರಿಸಬೇಕೆಂದು ಸದಸ್ಯರು ಶಾಸಕರಿಗೆ ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲ ಸದಸ್ಯರ ಪತ್ರಗಳು “ಉದಯವಾಣಿ’ಗೆ ಲಭ್ಯವಾಗಿವೆ.