ಮನಃಶಾಸ್ತ್ರ ಪರಿಣತರು ಕೂಡ ಹೇಳುವುದು ಅಂಕಗಳ ಬೆನ್ನ ಹಿಂದೆ ಓಡಬೇಡಿ ಎಂದು. ಪರೀಕ್ಷೆ ಅಂಕ ಗಳಿಕೆಯ ಸಾಧನವಾಗದೇ ಪ್ರತಿಭೆಯ ಪ್ರದರ್ಶನ ಮಾಡುವ ವೇದಿಕೆಯಾಗಲಿ.
Advertisement
ಅರ್ಹತೆಯ ಮಾನದಂಡ, ವಿದ್ಯೆಯನ್ನು ಒರೆಗೆ ಹಚ್ಚುವ ಸಾಧನ. ಪರೀಕ್ಷೆ ಎಂದರೆ ಪೆಡಂಭೂತವಲ್ಲ. ನಾವು ಓದಿದ್ದನ್ನು ಮನನ ಮಾಡಿಕೊಳ್ಳಲು ಇರುವ ಅವಕಾಶ. ವರ್ಷಪೂರ್ತಿ ಶಾಲಾಭ್ಯಾಸ ಮಾಡಿದ್ದಕ್ಕೆ ಇರುವ ಸಾರ್ವಕಾಲಿಕ ದಾಖಲೆ. ಅದಕ್ಕಾಗಿ ನಾವು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಬೇಕು ಎನ್ನುತ್ತಾರೆ ಕೋಟೇಶ್ವರದ ಮನಶಾÏಸ್ತ್ರ ವೈದ್ಯೆ ಡಾ| ಮಹಿಮಾ. ಏನು ಮಾಡಬೇಕು? ಇಲ್ಲಿದೆ ಟಿಪ್ಸ್.
– ಅತಿಯಾದ ಓದು ಬೇಕಿಲ್ಲ. ಪರೀಕ್ಷೆ ಬಂದಾಗ ಒಮ್ಮೆಲೆ ಓದುತ್ತೇನೆಂಬ ಅತಿಯಾದ ವಿಶ್ವಾಸ ಒಳ್ಳೆಯದಲ್ಲ. ಮೆದುಳಿಗೆ ದಿಢೀರ್ ಒತ್ತಡ ತಂದು ಗ್ರಹಿಕೆಗೆ ಕಷ್ಟವಾಗುತ್ತದೆ.
– ಈ ದಿನ ಇಷ್ಟನ್ನು ಓದಿ ಮುಗಿಸಲೇಬೇಕು ಎಂದು ನಿರ್ಧರಿಸಿ. ರಾತ್ರಿಯೊಳಗೆ ಅಷ್ಟನ್ನು ಪೂರೈಸಿ. ಪರೀಕ್ಷೆ ಎದುರಿಸುವ ಸ್ಥೈರ್ಯ ತಾನಾಗಿಯೇ ಬರುತ್ತದೆ.
– ಮೆದುಳಿಗೆ ಬೇಕಾಗುವ ವರ್ಧಕ ನಾವು ಸೇವಿಸುವ ಪೋಷಕಾಂಶಭರಿತ ಆಹಾರದಲ್ಲಿರುತ್ತದೆ. ಹಣ್ಣುಗಳು, ಬಾದಾಮಿಯಂತಹ ಬೀಜಗಳು, ಪುದಿನ, ಪಾಲಕ್‌ನಂತಹ ಸೊಪ್ಪುಗಳು ಸ್ಮರಣಶಕ್ತಿ, ಏಕಾಗ್ರತೆಗೆ ಸಹಕಾರಿ. ಆದ್ದರಿಂದ ಊಟ, ತಿಂಡಿ ಬಿಟ್ಟು ಓದುವ ದುಸ್ಸಾಹಸ ಮಾಡಬೇಡಿ.
– ಓದುವಿಕೆಗೆ ವೇಳಾಪಟ್ಟಿಯ ಶಿಸ್ತು, ನಿಯಮಬದ್ಧ ಕಲಿಕೆ ರೂಢಿಸಿಕೊಳ್ಳಿ. ಓದುತ್ತಿದ್ದಂತೆಯೇ ಮುಖ್ಯ ವಿಷಯಗಳನ್ನು ನೋಟ್ಸ್ ಮಾಡಿಕೊಳ್ಳಿ. ಒಂದು ವಿಷಯ ಇನ್ನೊಂದಕ್ಕೆ ಹೇಗೆ ಜೋಡಣೆಯಾಗಿದೆ ಎಂದು ಗಮನಿಸಿದರೆ ನೆನಪು ಸುಲಭ.
- ಮೆದುಳು ವಿಷಯಗಳನ್ನು 20 ಶೇ. ಕೇಳುವುದರ, 30 ಶೇ. ನೋಡುವುದರ, 10 ಶೇ. ಸಂವಾದದಲ್ಲಿ ಗ್ರಹಿಸುತ್ತದೆ. ಆದ್ದರಿಂದ ಪಾಠ ಕೇಳಿ, ಸ್ವಲ್ಪ ಗಟ್ಟಿಯಾಗಿ ಓದಿ, ಓದಿದ್ದನ್ನು ಸಹಾಧ್ಯಾಯಿಗಳ ಜತೆ ಚರ್ಚಿಸಿದರೆ ನೆನಪಿಟ್ಟುಕೊಳ್ಳುವುದು ತೀರಾ ಸುಲಭ.
– ಬರೆಯುವುದು ದುಪ್ಪಟ್ಟು ಓದಿದಷ್ಟು ನೆನಪಿಸುತ್ತದೆ. ಉತ್ತರಗಳನ್ನು, ಪಾಯಿಂಟ್ಸ್‌ಗಳನ್ನು, ಸೂತ್ರಗಳನ್ನು, ಡಯಾಗ್ರಾಮ್‌ಗಳನ್ನು ಬರೆದು ಕಲಿಯಿರಿ.
– ನಿದ್ದೆ, ಊಟ, ತಿಂಡಿ ಬಿಟ್ಟು ದಿನವಿಡೀ ಓದಬೇಡಿ. ಪೋಷಕಾಂಶಗಳ ಕೊರತೆಯಾಗಿ ದೇಹಾಯಾಸ, ತಲೆಸುತ್ತು, ವಾಂತಿ ಮೊದಲಾದ ಅನಾರೋಗ್ಯಕ್ಕೆ ಕಾರಣವಾಗಬಹುದು.
– ಕೆಲವರಿಗೆ ಮುಂಜಾನೆ ಬೇಗ, ಕೆಲವರಿಗೆ ತಡರಾತ್ರಿವರೆಗಿನ ಏಕಾಂತದ ಓದು ಅನುಕೂಲ. ಅಧ್ಯಯನಕ್ಕೆ ಯಾವುದು ಸೂಕ್ತ ಎಂದು ಗಮನಿಸಿ ಅಂತೆಯೇ ಪಾಲಿಸಿ. ಒಮ್ಮೆ ಬೆಳಗ್ಗೆ, ಒಮ್ಮೆ ರಾತ್ರಿ ಎಂದು ಬದಲಿಸಬೇಡಿ. ಇದು ಮೆದುಳಿನ ವಿಶ್ರಾಂತಿ ಮೇಲೆ ಪರಿಣಾಮ ಬೀಳುತ್ತದೆ.
– ವಿರಾಮರಹಿತ ನಿರಂತರ ಓದು ಒಳ್ಳೆಯದಲ್ಲ. ಸ್ವಲ್ಪ ವ್ಯಾಯಾಮ, ಸಂಗೀತದತ್ತ ಗಮನಹರಿಸಿ.
– ಆದಷ್ಟು ಏಕಾಗ್ರತೆ ಬರುವಂತೆ ಏಕಾಂತವಾಗಿ ಓದಿ.
– ಆದ್ಯತೆಯಂತೆ ಓದಿ. ಮುಖ್ಯ ಅಂಶಗಳನ್ನು ಪಾಯಿಂಟ್ ಮಾಡಿಕೊಳ್ಳಿ.
- ಹಳೆ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ ಮನನ ಮಾಡಿಟ್ಟುಕೊಳ್ಳಿ. ಧೈರ್ಯ ಹೆಚ್ಚಿಸುತ್ತದೆ.
- ಉತ್ತರಗಳನ್ನು ಕೋಡ್ ಮೂಲಕ ಕಲಿಯಲು ಯತ್ನಿಸಿ. ಹತ್ತು ಹೆಸರುಗಳಿದ್ದರೆ, ಸೂತ್ರಗಳಿದ್ದರೆ ನೆನಪಿಟ್ಟುಕೊಳ್ಳಲು ಯಾವುದಾದರೂ ತಂತ್ರ ಉಪಯೋಗಿಸಿ.
– ಡಯಾಗ್ರಾಮ್ (ಚಿತ್ರಗಳ) ಮೂಲಕ ಕಲಿತರೆ ಆ ಚಿತ್ರವೇ ಮನಃಪಟಲದಲ್ಲಿ ಮೂಡಿಬಂದು ಉತ್ತರ ನೆನಪಾಗುತ್ತದೆ.
– ಓದಿದ್ದು ಸರಿಯಿದೆಯೇ, ಯಾವುದೆಲ್ಲ ಎಷ್ಟು ನೆನಪಿನಲ್ಲಿ ಉಳಿದಿದೆ ಎಂದು ನಿಮ್ಮನ್ನು ಪರೀಕ್ಷಿಸಿಕೊಳ್ಳಲು ಮನೆಯವರಲ್ಲಿ/ಸ್ನೇಹಿತರಲ್ಲಿ
ಪ್ರಶ್ನೆ ಕೇಳಲು ಹೇಳಿ ಉತ್ತರಿಸಿ. ಮರೆತದ್ದರ ಮರು ಓದಿಗೆ ಇದು ಸಹಕಾರಿ.
– ಗಣಿತಸೂತ್ರ, ಮುಖ್ಯಾಂಶಗಳನ್ನು ಸಣ್ಣ ಚೀಟಿಯಲ್ಲಿ ಬರೆದು ಎದುರು ಕಾಣುವಂತೆ ಅಂಟಿಸಿ. ಆಗಾಗ ನೋಡಿದರೆ ನೆನಪಿಗೆ ಬರುತ್ತದೆ.
– ನಿತ್ಯ ವ್ಯಾಯಾಮ, ಆಟವಾಡುವ ಅಭ್ಯಾಸವಿದ್ದರೆ ಬಿಡಬೇಡಿ. ತುಸುವಾದರೂ ತೊಡಗಿಸಿಕೊಳ್ಳಿ.
- ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕೆಂದು ಮೊದಲೇ ಸಮಯ ನಿರ್ಧರಿಸಿಡಿ.
– ಸಣ್ಣ ಪ್ರಶ್ನೆಗಳಿಗೆ, ದೊಡ್ಡ ಪ್ರಶ್ನೆಗಳಿಗೆ ಎಂದು ಸಮಯ ವಿಂಗಡಿಸಿ. ಆಗ ಅನಗತ್ಯ ವಿಳಂಬ ತಪ್ಪಿಸಬಹುದು.
- ನನಗೆ ನೆನಪಿನ ಶಕ್ತಿ ಚೆನ್ನಾಗಿದೆ ಎಂದು ಹೇಳಿಕೊಂಡು, ವೃದ್ಧಿಸಲು ಪ್ರಯತ್ನಿಸಿ. ಗಮನಿಸಿ
ಧನಾತ್ಮಕ ಅಂಶಗಳ ಕಡೆಗೆ ಗಮನಿಸದೇ, ಮಾನಸಿಕವಾಗಿ ಸ್ಥೈರ್ಯ ತುಂಬಿ, ಭಯ ಬಿಟ್ಟು ಓದಿದರೆ ಪರೀಕ್ಷೆ ಸುಲಭ. ಸರಳವಾಗಿ ಸೂತ್ರಗಳ, ಚಿತ್ರಗಳ, ಬರೆಯುವ ಮೂಲಕ ನೆನಪಿಟ್ಟುಕೊಳ್ಳಬಹುದು. ಪರೀಕ್ಷೆ ಕುರಿತು ಹೆತ್ತವರು, ಶಿಕ್ಷಕರು ಭಯ ಹುಟ್ಟಿಸಬಾರದು. ಅಂಕಗಳ ಕಡೆಗೆ ಓಡುವಂತೆ ಓದಿಸಬಾರದು.
– ಡಾ| ಮಹಿಮಾ, ಮನಃಶಾÏಸ್ತ್ರ ವೈದ್ಯೆ, ಕೋಟೇಶ್ವರ