Advertisement

ಬರುತ್ತಿದೆ…ಬಯೋ ಡೀಸೆಲ್!

08:30 PM Dec 15, 2019 | Lakshmi GovindaRaj |

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಉಸಿರಾಟ ಸಂಬಂಧಿ ಖಾಯಿಲೆಗಳಿಂದ ಮರಣವನ್ನಪ್ಪುತ್ತಿರುವವರ ಸಂಖ್ಯೆ ಭಾರತದಲ್ಲೇ ಹೆಚ್ಚು. ಆಟೋಮೊಬೈಲ್‌ ಬಳಕೆ ನಿಷಿದ್ಧಗೊಳಿಸುವುದಂತೂ ಅಸಾಧ್ಯ. ಆದರೆ, ಇಂಧನವನ್ನೇ ಪರಿಸರಸ್ನೇಹಿಯನ್ನಾಗಿ ಮಾಡಿದರೆ? ಅದೇ ಹಿನ್ನೆಲೆಯಲ್ಲಿ ಪರಿಚಯಿಸಲ್ಪಡುತ್ತಿದೆ ಬಯೋ ಡೀಸೆಲ್‌…

Advertisement

ಸದ್ಯ ಇಡೀ ಜಗತ್ತನ್ನು ಕಾಡುತ್ತಿರುವ ವಿಷಯವೆಂದರೆ ವಾಯುಮಾಲಿನ್ಯ. ಇದರಿಂದಾಗಿ ಉದ್ಭವವಾಗಿರುವ ಹವಾಮಾನ ಬದಲಾವಣೆಯ ಕಪಿಮುಷ್ಠಿಯಿಂದ ಹೊರಬರುವ ಬಗ್ಗೆ ಜಗತ್ತಿನ ಎಲ್ಲಾ ದೇಶಗಳೂ ಭಾರೀ ಚಿಂತನೆಯಲ್ಲಿ ತೊಡಗಿವೆ. ಇದರ ನಡುವೆಯೇ ಪೆಟ್ರೋಲ್‌ ಮತ್ತು ಡೀಸೆಲ್‌ನಲ್ಲಿ ಬಯೋ ಡೀಸೆಲ್‌ಅನ್ನು ಮಿಶ್ರಣ ಮಾಡಿ ಬಳಕೆ ಮಾಡುವ ಬಗ್ಗೆ ಸಂಶೋಧನೆಗಳೂ ಶುರುವಾಗಿವೆ.

ಪೆಟ್ರೋಲ್‌ ಮತ್ತು ಡೀಸೆಲ್‌ಗೆ ಪ್ರತಿಯಾಗಿ ಏಕೆ ಬಯೋ ಡೀಸೆಲ್‌ಅನ್ನೇ ಸಂಪೂರ್ಣವಾಗಿ ಬಳಕೆ ಮಾಡುವ ಸಾಧ್ಯಾಸಾಧ್ಯತೆಗಳ ಕುರಿತಾಗಿ ಚರ್ಚೆಗಳೂ ಆರಂಭವಾಗಿವೆ. ಇದಕ್ಕೆ ಪೂರಕವೆಂಬಂತೆ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಇಲಾಖೆಯ ಸಚಿವರಾದ ನಿತಿನ್‌ ಗಡ್ಕರಿ ಅವರು, ಇತ್ತೀಚೆಗಷ್ಟೇ, ಬಯೋ ಡೀಸೆಲ್‌ ಬಳಕೆ ಬಗ್ಗೆ ಆಲೋಚನೆ ನಡೆಸುವಂತೆ ಆಟೋಮೊಬೈಲ್‌ ಕಂಪನಿಗಳಿಗೆ ಸೂಚನೆ ನೀಡಿದ್ದಾರೆ.

ಏನಿದು ಬಯೋಡೀಸೆಲ್?: ಬಯೋಡೀಸೆಲ್‌ ಅಂದರೆ, ಬಯೋತೈಲದ ಸುಧಾರಿತ ಮಾದರಿ. ಇದನ್ನು ಪ್ರಾಣಿಗಳ ಮತ್ತು ತರಕಾರಿಯ ಕೊಬ್ಬಿನಿಂದ ತಯಾರಿಸಲಾಗುತ್ತದೆ. ಜೊತೆಗೆ ಬಳಕೆ ಮಾಡಲ್ಪಟ್ಟ ಅಡುಗೆ ಎಣ್ಣೆಯನ್ನೂ ಬಳಸಿ ಬಯೋ ಡೀಸೆಲ್‌ ಅನ್ನು ತಯಾರಿಸಬಹುದಾಗಿದೆ.

ಉಪಯೋಗವೇನು?: ಸದ್ಯ ಮಾರುಕಟ್ಟೆಯಲ್ಲಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ಕಾರುಗಳು ಉಗುಳುವ ಹೊಗೆಯಿಂದಾಗಿ ವಾತಾವರಣ ಕೆಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಬಯೋಡೀಸೆಲ್‌ ಬಳಕೆ ಮಾಡುವ ವಾಹನಗಳು ಯಾವುದೇ ರೀತಿಯ ಹೊಗೆಯನ್ನು ಉಗುಳುವುದಿಲ್ಲ. ಹೀಗಾಗಿ ವಾತಾವರಣವೂ ಕಲುಷಿತಗೊಳ್ಳುವುದಿಲ್ಲ ಎಂಬ ಮಾತುಗಳಿವೆ. ಸದ್ಯದ ಮಟ್ಟಿಗೆ ಡೀಸೆಲ್‌ ಜತೆಗೆ ಮಿಶ್ರಣ ಮಾಡಿ ಬಳಸುವ ಬಗ್ಗೆಯಷ್ಟೇ ಸಂಶೋಧನೆಗಳಾಗುತ್ತಿವೆ. ಒಂದು ವೇಳೆ ಪೂರ್ಣವಾಗಿ ಇದನ್ನೇ ಬಳಕೆ ಮಾಡುವುದಾದರೆ ಇದರ ಫ‌ಲಿತಾಂಶ ಹೆಚ್ಚು ಫ‌ಲಕಾರಿಯಾಗಿರುತ್ತದೆ.

Advertisement

ಬಯೋ ಡೀಸೆಲ್‌ ಅನುಷ್ಠಾನ ಕಷ್ಟವಿಲ್ಲ: ವಿಶೇಷವೆಂದರೆ, ಬಯೋ ಡೀಸೆಲ್‌ನ ಅನುಷ್ಠಾನಕ್ಕೆ ಹೆಚ್ಚಿನ ಮಾರ್ಪಾಡುಗಳೇನೂ ಬೇಕಾಗುವುದಿಲ್ಲ. ಅಂದರೆ, ಈಗ ಇರುವ ವ್ಯವಸ್ಥೆಯನ್ನು ಬುಡಮೇಲು ಮಾಡಿ ಪೂರ್ತಿ ಹೊಸ ವ್ಯವಸ್ಥೆಯನ್ನು ತರುವ ಅಗತ್ಯವೇನೂ ಇರುವುದಿಲ್ಲ. ಈಗಿರುವ ಪಂಪ್‌ಗಳಲ್ಲೇ ಬಯೋ ಡೀಸೆಲ್‌ ಒದಗಿಸಲು ಸಾಧ್ಯವಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ದರಕ್ಕೆ ಹೋಲಿಕೆ ಮಾಡಿದರೆ, ಬಯೋ ಡೀಸೆಲ್‌ ದರ ಕಡಿಮೆ ಕೂಡಾ.

ಯಮಹಾ ಬಿಎಸ್‌6YZF- R15 ಬಿಡುಗಡೆ: ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಯಮಹಾ ಇಂಡಿಯಾ, ವೈಝಡ್‌ಎಫ್-ಆರ್‌15ನ 3ನೇ ಆವೃತ್ತಿಯ ಬಿಎಸ್‌6 ಬೈಕುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 155 ಸಿಸಿ ಸಾಮರ್ಥ್ಯದ ಈ ಬೈಕುಗಳ ಬೆಲೆಯೇ 1.45 ಲಕ್ಷ ರೂ.(ಎಕ್ಸ್ ಶೋ ರೂಂ ದರ)ನಿಂದ ಶುರುವಾಗುತ್ತದೆ. ಕಳೆದ ನವೆಂಬರ್‌ನಲ್ಲಿ ಎಫ್ ಝಡ್‌ ಎಫ್ಐ(149 ಸಿ.ಸಿ.) ಮತ್ತು ಎಫ್ ಝಡ್‌ ಎಸ್‌ ಎಫ್ಐ(149 ಸಿ.ಸಿ.)ನ ಬಿಎಸ್‌6 ಮಾದರಿ ಬೈಕುಗಳನ್ನು ಬಿಡುಗಡೆ ಮಾಡಲಾಗಿತ್ತು. ಈಗ ವೈಝಡ್‌ಎಫ್-ಆರ್‌15 ಮಾದರಿ ಬೈಕುಗಳಿಗೆ ಚಾಲನೆ ನೀಡಲಾಗಿದೆ. ಈ ಬೈಕುಗಳು ಡಿಸೆಂಬರ್‌ ಮೂರನೇ ವಾರದಿಂದ ದೇಶಾದ್ಯಂತ ಸಿಗಲಿವೆ ಎಂದು ಕಂಪನಿ ಹೇಳಿಕೊಂಡಿದೆ.

* ಸೋಮಶೇಖರ ಸಿ. ಜೆ.

Advertisement

Udayavani is now on Telegram. Click here to join our channel and stay updated with the latest news.

Next