Advertisement

ಬರಲಿದೆ ಬಿಚ್ಚುಗತ್ತಿ ಚಾಪ್ಟರ್‌ -2

09:09 AM May 07, 2019 | Lakshmi GovindaRaj |

ಕನ್ನಡದಲ್ಲಿ ಈಗಾಗಲೇ ಹಲವು ಚಿತ್ರಗಳು ಭಾಗ-1 ಭಾಗ-2, ಭಾಗ-3 ಹೀಗೆ ಪಾರ್ಟ್‌ಗಳಾಗಿ ಬಂದಿರುವ ಉದಾಹರಣೆಗಳಿಗೇನು ಕಮ್ಮಿಯಿಲ್ಲ. ಅವೆಲ್ಲಾ ಸಿನಿಮಾಗಳ ಯಶಸ್ಸಿನ ನಂತರದ ದಿನಗಳಲ್ಲಿ ಬಂದಂತಹ ಮುಂದುವರೆದ ಭಾಗ. ಈಗ ಕನ್ನಡ ಚಿತ್ರರಂಗದಲ್ಲಿ ಹೊಸ ಬದಲಾವಣೆಯ ಗಾಳಿ ಬೀಸಿದೆ. “ಕೆಜಿಎಫ್’ ಚಾಪ್ಟರ್‌-1 ಜೊತೆಗೆ “ಕೆಜಿಎಫ್ ಚಾಪ್ಟರ್‌-2 ಕೂಡ ಬರಲಿದೆ ಎಂಬುದನ್ನು ಮೊದಲೇ ಘೋಷಿಸಲಾಗಿತ್ತು.

Advertisement

ಚಿತ್ರೀಕರಣ ವೇಳೆಯಲ್ಲೇ ಚಾಪ್ಟರ್‌ 2 ಬರುತ್ತೆ ಎಂಬುದು ಪಕ್ಕಾ ಆಗಿತ್ತು. ಅದರಂತೆ, ಈಗ “ಕೆಜಿಎಫ್’ ಚಾಪ್ಟರ್‌ 2 ಚಿತ್ರೀಕರಣಕ್ಕೆ ಅಣಿಯಾಗಿದೆ. ಈಗ ಮತ್ತೊಂದು ಹೊಸ ಸುದ್ದಿ ಅಂದರೆ, ಯುವ ನಟ ರಾಜವರ್ಧನ್‌ ಅಭಿನಯದ “ಅಲೆಮಾರಿ’ ಹರಿ ಸಂತೋಷ್‌ ನಿರ್ದೇಶನದ “ಬಿಚ್ಚುಗತ್ತಿ’ ಕೂಡ ಚಾಪ್ಟರ್‌-2 ಬರಲಿದೆ. ಹೌದು, ಚಿತ್ರೀಕರಣ ಶುರುವಾದಾಗ, “ಬಿಚ್ಚುಗತ್ತಿ’ ಚಾಪ್ಟರ್‌- 2 ಬರಲಿದೆ ಎಂಬ ಸುಳಿವು ಇರಲಿಲ್ಲ.

ಈಗ ಚಿತ್ರತಂಡ “ಬಿಚ್ಚುಗತ್ತಿ’ ಚಾಪ್ಟರ್‌- 2 ಬರುವುದನ್ನು ಸ್ಪಷ್ಟಪಡಿಸಿದೆ. ಚಾಪ್ಟರ್‌-1 ಚಿತ್ರೀಕರಣ ಪೂರ್ಣಗೊಂಡಿದೆ. ಇತ್ತೀಚೆಗಷ್ಟೇ ಕುಂಬಳಕಾಯಿ ಕೂಡ ಒಡೆಯಲಾಗಿದೆ. “ಬಿಚ್ಚುಗತ್ತಿ’ ಚಾಪ್ಟರ್‌- 2 ಬರುವ ಬಗ್ಗೆ ಆರಂಭದಲ್ಲಿ ಯಾವುದೇ ಘೋಷಣೆ ಮಾಡದಿದ್ದರೂ, ಚಿತ್ರತಂಡ ಮಾತ್ರ ಮಾಡುವ ಪ್ಲಾನ್‌ ಮಾಡಿತ್ತು. “ಬಿಚ್ಚುಗತ್ತಿ ಭರಮಣ್ಣನಾಯಕ’ ಅವರದು ದೊಡ್ಡ ಕಥೆ.

ಈಗ ಚಾಪ್ಟರ್‌ 1 ರಲ್ಲಿ ದಳವಾಯಿ ದಂಗೆ ಕುರಿತ ಕಥೆ ಇದೆ. ಚಾಪ್ಟರ್‌ 1 ರಲ್ಲಿ ದಳವಾಯಿ ಮುದ್ದಣ್ಣ ಸಾವನ್ನಪ್ಪುತ್ತಾನೆ. 15 ವರ್ಷ ಆಡಳಿತ ನಡೆಸುವ ದಳವಾಯಿ ಮುದ್ದಣ್ಣ ಬಳಿಕ ಭರಮಣ್ಣನ ಕಥೆ ಶುರುವಾಗುತ್ತೆ. ಅದೇ ಚಾಪ್ಟರ್‌ -2 ಎಂಬುದು ಚಿತ್ರತಂಡದ ಮಾತು. ಈ ಕುರಿತು ಹೇಳುವ ನಾಯಕ ರಾಜವರ್ಧನ್‌, “ಇಲ್ಲಿಯವರೆಗೆ ಸಿನಿಮಾ ಚೆನ್ನಾಗಿ ಮೂಡಿಬಂದಿದೆ.

ನಾವು ಅಂದುಕೊಂಡಿದ್ದಕ್ಕಿಂತಲೂ ಅದ್ಭುತವಾಗಿ ಬಂದಿದೆ. ಇದು ಐತಿಹಾಸಿಕ ಕಥೆಯಾಗಿದ್ದರೂ, ಇಲ್ಲಿ ಪಕ್ಕಾ ಕಮರ್ಷಿಯಲ್‌ ಅಂಶಗಳಿವೆ. ಹಾಗಾಗಿ, ನೋಡುಗರಿಗೆ ಎಲ್ಲೂ ಬೋರ್‌ ಎನಿಸುವುದಿಲ್ಲ. ಚಾಪ್ಟರ್‌ 1 ರಲ್ಲಿ ನಾಲ್ಕು ಹಾಡುಗಳಿವೆ. ಏಳು ಫೈಟ್ಸ್‌ಗಳಿವೆ. ಆ್ಯಕ್ಷನ್‌ ಬಿಟ್ಸ್‌ಗಳು ಸೇರಿದರೆ ಒಟ್ಟು 13 ಭರ್ಜರಿ ಫೈಟ್ಸ್‌ ಇವೆ. ಅವೆಲ್ಲದರ ಜೊತೆಗೆ ಕಥೆಯೂ ಸೇರಿ ಒಟ್ಟು 2.10 ಗಂಟೆ ಅವಧಿಯಲ್ಲೇ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ’ ಎಂದು ವಿವರ ಕೊಡುತ್ತಾರೆ ರಾಜವರ್ಧನ್‌.

Advertisement

ಐತಿಹಾಸಿಕ ಸಿನಿಮಾಗಳೆಂದರೆ, ಸೆಟ್‌ ತುಂಬಾ ಕುದುರೆ, ಜನ, ಜಾನುವಾರು ಸಹಜ. ಇಲ್ಲೂ ಅದಕ್ಕೆ ಲೆಕ್ಕವಿಲ್ಲ ಎನ್ನುವ ರಾಜವರ್ಧನ್‌, ಪ್ರತಿ ದಿನವೂ ಸೆಟ್‌ನಲ್ಲಿ 50 ಕ್ಕೂ ಹೆಚ್ಚು ಕುದುರೆಗಳು, ಆನೆ, ನೂರಾರು ಜೂನಿಯರ್, ಟಗರುಗಳು, ಕುರಿ, ಕೋಳಿ ಸೇರಿದಂತೆ ಆಗಿನ ಕಾಲದಲ್ಲಿ ಬಳಸುತ್ತಿದ್ದ ಮುಧೋಳ್‌ ನಾಯಿಗಳನ್ನು ಕೂಡ ಚಿತ್ರದಲ್ಲಿ ಬಳಸಲಾಗಿದೆ.

ಬೆಟ್ಟಿಂಗ್‌ ಕೋಳಿಗಳ ಕಾಳಗ ಚಿತ್ರದ ಹೈಲೈಟ್‌ಗಳಲ್ಲೊಂದು ಎಂದು ಹೇಳುವ ರಾಜವರ್ಧನ್‌, ಇಲ್ಲಿ ಪಾತ್ರ ಸಖತ್‌ ಚಾಲೆಂಜ್‌ ಆಗಿತ್ತು. ನನ್ನ ಎರಡನೇ ಚಿತ್ರವೇ ಇಂಥದ್ದೊಂದು ಸಿನಿಮಾ ಸಿಕ್ಕಿರುವುದು ಅದೃಷ್ಟ. ದರ್ಶನ್‌ ಅವರು ಹೇಳ್ಳೋರು, “ನಾನು ಇಷ್ಟೊಂದು ಸಿನಿಮಾ ಮಾಡಿದ ಬಳಿಕ ಐತಿಹಾಸಿಕ ಚಿತ್ರದಲ್ಲಿ ನಟಿಸುವ ಅವಕಾಶ ಬಂತು.

ನಿನಗೆ ಎರಡನೇ ಚಿತ್ರದಲ್ಲೇ ಅಂತಹ ಅವಕಾಶ ಸಿಕ್ಕಿದೆ ಚೆನ್ನಾಗಿ ಹೋಮ್‌ ವರ್ಕ್‌ ಮಾಡು’ ಅಂತ ಸಾಕಷ್ಟು ಸಪೋರ್ಟ್‌ ಮಾಡಿದ್ದಾರೆ. ನಾನು ಒಂದು ವರ್ಷದ ಕಾಲ ಹಾರ್ಸ್‌ ರೇಡಿಂಗ್‌, ಕಲರಿ ಫೈಟ್‌, ಕತ್ತಿವರಸೆ, ದೊಣ್ಣೆ ವರಸೆ, ಬೆಂಕಿ ದೊಣ್ಣೆ ವರಸೆ ಸೇರಿದಂತೆ ದೇಸಿ ಕಲೆಗಳನ್ನು ಅಭ್ಯಾಸ ಮಾಡಿದ್ದೇನೆ.

ಇನ್ನು, ಪಾತ್ರಕ್ಕೆ ತೂಕ ಹೆಚ್ಚಿಸಿಕೊಳ್ಳಬೇಕಿದ್ದರಿಂದ 80 ಕೆಜಿಯಿಂದ 107 ಕೆಜಿಯವರೆಗೂ ಹೆಚ್ಚಿಸಿಕೊಂಡಿದ್ದೇನೆ. ಚಿತ್ರ ಪೂರ್ಣಗೊಂಡು ಈಗ ಟ್ರಿಮ್ಮಿಂಗ್‌ನಲ್ಲಿದೆ. ಇಷ್ಟರಲ್ಲೇ ಟೀಸರ್‌ ಹೊರಬರಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್‌ನಲ್ಲಿ ರಿಲೀಸ್‌ ಆಗಲಿದೆ. ಚಿತ್ರದಲ್ಲಿ ಸಿಜಿ ಕೆಲಸ ಸಾಕಷ್ಟು ಇದೆ.

ಅದಕ್ಕಾಗಿ “ರೋಬೋಟ್‌’, 2.0′ ಸಿನಿಮಾಗೆ ಕೆಲಸ ಮಾಡಿದ್ದ ತಂಡ ಇಲ್ಲೂ ಕೆಲಸ ಮಾಡಲಿದೆ. ಈಗಾಗಲೇ ಚಾಪ್ಟರ್‌ 2ಗೆ ಬೇಕಾದ ಒಂದಷ್ಟು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಚಾಪ್ಟರ್‌ 1 ರಲ್ಲಿ ದಳವಾಯಿ ಮುದ್ದಣ್ಣ ಪಾತ್ರವನ್ನು ‘ಬಾಹುಬಲಿ’ ಖ್ಯಾತಿಯ ಪ್ರಭಾಕರ್‌ ಮಾಡಿದ್ದಾರೆ. ಉಳಿದಂತೆ ಸ್ಪರ್ಶ ರೇಖಾ, ಹರಿಪ್ರಿಯಾ, ಶರತ್‌ಲೋಹಿತಾಶ್ವ, ಶ್ರೀನಿವಾಸಮೂರ್ತಿ ಇತರರು ಇದ್ದಾರೆ ಎಂದು ಹೇಳುತ್ತಾರೆ ರಾಜವರ್ಧನ್‌.

Advertisement

Udayavani is now on Telegram. Click here to join our channel and stay updated with the latest news.

Next