Advertisement

Comet of the Century: ಅಕ್ಟೋಬರ್‌ನಲ್ಲಿ ಧೂಮಕೇತುಗಳ ಮೆರವಣಿಗೆ

12:16 AM Oct 06, 2024 | Team Udayavani |

ಉಡುಪಿ: ವರ್ಷದ ಧೂಮಕೇತು ಎಂದು ಭಾವಿಸಲಾಗಿದ್ದ ಸುಚಿನ್ಸನ್‌ – ಅಟ್ಲಾಸ್‌ ಸೆಪ್ಟಂಬರ್‌ ಕೊನೆಯ ವಾರದಲ್ಲಿ ಸೂರ್ಯೋದಯಕ್ಕೆ ಮುನ್ನ ಬರಿಗಣ್ಣಿಗೆ ಕಾಣಿಸಿದೆ. ಸೌರವ್ಯೂಹದ ಹೊರವಲಯ ಊರ್ಷ್‌ ಕ್ಲೌಡ್‌ನಿಂದ (ಸುಮಾರು 3 ಜ್ಯೋತಿರ್ವರ್ಷ =.30 ಟ್ರಿಲಿಯನ್‌ ಕಿ.ಮೀ.) ದೂರದಿಂದ ಹೊರಟ ಈ ಧೂಮಕೇತು, ಸೆಕೆಂಡಿಗೆ ಸುಮಾರು 80 ಕಿ.ಮೀ. ಅತ್ಯಂತ ವೇಗದಲ್ಲಿ ಕ್ರಮಿಸುತ್ತಾ ಸೆ.27ರಂದು ಸೂರ್ಯನನ್ನು ಸಮೀಪಿಸಿ ಹಿಂದಿರುಗಿದೆ.

Advertisement

ಸುಮಾರು 80 ಸಾವಿರ ವರ್ಷಕ್ಕೊಮ್ಮೆ ಸೂರ್ಯನನ್ನು ಸುತ್ತುವ ಈ ಧೂಮಕೇತು ಸೂರ್ಯನಿಂದ ಮರಳುವಾಗ ಅಕ್ಟೋಬರ್‌ 8ರಿಂದ 12ರ ವರೆಗೆ ಸೂರ್ಯಾಸ್ತದ ಬಳಿಕ 20 ನಿಮಿಷಗಳ ಕಾಲ ಪಶ್ಚಿಮ ಆಕಾಶದಲ್ಲಿ ಬರಿಗಣ್ಣಿಗೆ ಕಾಣಿಸಲಿದೆ. ಅದು ಅ. 12ರಂದು ಭೂಮಿಗೆ ಹೆಚ್ಚು ಸಮೀಪದಲ್ಲಿರಲಿದೆ.
2023ರ ಜನವರಿಯಲ್ಲಿ ಇದನ್ನು ದೂರದರ್ಶಕದಲ್ಲಿ ನೋಡಿ 2024 ಸೆಪ್ಟಂಬರ್‌ ಅಕ್ಟೋಬರ್‌ಗೆ ಇದೊಂದು ಶತಮಾನದ ಧೂಮಕೇತುವಾಗಲಿದೆ ಎಂದು ಅಂದಾಜಿಸಲಾಗಿತ್ತಾದರೂ 2024ರ ಫೆಬ್ರವರಿಯಲ್ಲಿ ಇದು ಕಾಣೆಯಾದಾಗ ಸಿಡಿದು ಹೋಯಿತು ಎನ್ನಲಾಗಿತ್ತು. ಈಗ ಇದರ ತುಂಡೋ ಅಥವಾ ಮೂಲ ಧೂಮಕೇತುವೂ ಅಂತೂ ದೂರದರ್ಶಕಕ್ಕೆ ಪುನಃ ಗೋಚರಿಸಿ ಬರಿಗಣ್ಣಿಗೆ ಕಾಣುವ ವರ್ಷದ ಧೂಮಕೇತುವಾಗಲಿದೆ ಎಂದು ಅಂದಾಜಿಸಲಾಗಿದೆ.

ಎರಡನೆಯದು ಸೆ.27ರಂದು ಮೊದಲು ಕಂಡುಬಂದಿರುವ ಸನ್ಗ್ರೇಸರ್‌ ಧೂಮಕೇತು. ಇದು ಅ.28ರಂದು ಸೂರ್ಯನ ಸಮೀಪ ಬರಲಿದೆ. ಇದೊಂದು ಶತಮಾನದ ಸುಂದರ ಧೂಮಕೇತುವಾಗಬಹುದೆಂದು ಅಂದಾಜಿಸಲಾಗಿದೆ. ಈ ರೀತಿಯ ಧೂಮಕೇತುಗಳು ಸೂರ್ಯನಿಗೆ ಅತ್ಯಂತ ಸಮೀಪ ಬರುವುದರಿಂದ ಆಗಲೇ ಸಿಡಿದು ಪುಡಿಪುಡಿಯಾಗಲೂಬಹುದು. ಉಳಿದು ಮರಳಿದರೆ ಬಲು ಚೆಂದ. ಧೂಮಕೇತುಗಳ ಚಲನವಲನ ಹೀಗೆಯೇ ಎನ್ನುವಂತಿಲ್ಲ. ಇವು ಶತಮಾನದ ಧೂಮಕೇತುಗಳಾಗಬಹುದೇ? ಬರಿಗಣ್ಣಿಗೆ ಕಾಣಿಸಿಕೊಂಡು ವರ್ಷದ ಧೂಮಕೇತುವಾದೀತೇ ಮುಂತಾದ ಎಲ್ಲ ಪ್ರಶ್ನೆಗಳಿಗೆ ಕೆಲವು ದಿನಗಳಲ್ಲಿ ಉತ್ತರ ಸಿಗಲಿದೆ.

ಶತಮಾನದ ಧೂಮಕೇತು ಅಂದರೆ ಅದು ಕೆಲವು ತಿಂಗಳು ಆಕಾಶದಲ್ಲಿ ಹೆಚ್ಚು ಪ್ರಕಾಶಮಾನ ವಾಗಿ ಬರಿಗಣ್ಣಿಗೆ ಕಂಡು ವಿಜೃಂಭಿಸುವಂಥವು. ಅದು ತುಂಬಾ ವರ್ಷಗಳ ಅಂತರ ದಲ್ಲಿ ಕಾಣಿಸಿಕೊಳ್ಳುವಂಥವು. ವರ್ಷದ ಧೂಮಕೇತುಗಳೂ ಬರಿಗಣ್ಣಿಗೆ ಕಾಣ ಸಿಗುತ್ತವೆ. ಆದರೆ ಹೆಚ್ಚು ಪ್ರಕಾಶಮಾನವಾಗಿರುವುದಿಲ್ಲ. ಈ ಹಿಂದೆ ಬರಿಗಣ್ಣಿಗೆ ಕಂಡ ಧೂಮಕೇತುಗಳನ್ನು ಗ್ರೇಟ್‌ ಕಾಮೆಟ್‌ ಎಂದು ಹೆಸರಿಸಿದ್ದಾರೆ. 1996ರ ಹಯಾಕುಟಿಕೆ, 1997ರ ಹೇಲ್‌ ಬೂಪ್‌, 2003ರ ನೀಟ್‌, 2007ರ ಮಕ್ನಾಟ್‌, 2011ರ ಲವ್ಜಾಯ್‌, 2020ರ ನಿಯೋವೈಸ್‌ಗಳು.

ಈಗ ಬರುತ್ತಿರುವ ಧೂಮಕೇತುಗಳು ಬರಿಗಣ್ಣಿಗೆ ಕಂಡು ಇವುಗಳ ಸಾಲಿಗೆ ಸೇರಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಧೂಮಕೇತುಗಳು ಸೂರ್ಯನ ಸಮೀಪ ಬರುವಾಗ ಬೆಳಗಿನ ಜಾವ ಹಾಗೂ ಮರಳುವಾಗ ಸಂಜೆ ಆಕಾಶದಲ್ಲಿ ಕಾಣಿಸುತ್ತವೆ. ಸೂರ್ಯನ ಸಮೀಪ ಬಂದು ಹೋಗುವಾಗ ಬೃಹತ್‌ ಬಾಲಬೀಸಿ ವಿಸ್ಮಯ ತೋರಬಹುದು. ಬಾಲಗಳಲ್ಲೂ ಎರಡು. ನೀಲಿ ಬಣ್ಣದ ಬಾಲ ಸೂರ್ಯನಿಗೆ ನೇರ ವಿರುದ್ಧ ದಿಕ್ಕಿನಲ್ಲಿದ್ದರೆ, ಮತ್ತೊಂದು ಬಾಲ ಆವಿಯ ಕಣಗಳವಕ್ರ ಬಾಲ. ರಾತ್ರಿ ಆಕಾಶದಲ್ಲಿ ಚಂದ್ರನೇ ಚೆಂದ. ಚಂದ್ರನನ್ನು ಬಿಟ್ಟರೆ ಧೂಮಕೇತುಗಳೇ ಚೆಂದ ಎಂದು ಖಗೋಳಶಾಸ್ತ್ರಜ್ಞ ಡಾ| ಎ.ಪಿ.ಭಟ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next