Advertisement
ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತೀಯ ಟೇಬಲ್ ಟೆನ್ನಿಸ್ ತಂಡದ ಓರ್ವ ಸದಸ್ಯೆಯಾಗಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಗೆ ತೆರಳುವ ಮುನ್ನ ಮಣಿಕಾ ಬಾತ್ರ ಎಂಬ 22 ವರ್ಷದ ತರುಣಿ ತನ್ನ ಖಾಸಗಿ ತರಬೇತುದಾರ ಸಂದೀಪ್ ಗುಪ್ತಾ ಅವರಿಗೆ ಕೊಟ್ಟ ಮಾತು ಹೇಗಿತ್ತು ಗೊತ್ತೇ…? “ಪಿಚ್ಲೀ ಬಾರ್ ಮೈ ಗ್ಲಾಸ್ಗೋ ಮೇ ಕ್ವಾರ್ಟರ್ ಫೈನಲ್ ಮೆ ಹಾರ್ ಗಯೀ ಥೀ ಪರ್ ಸರ್, ಇಸ್ ಬಾರ್ ಮೈ ಆಪ್ಕೋ ಮೆಡಲ್ ಜರೂರ್ ಲೇಕೆ ದೂಂಗಿ,” (ಗ್ಲಾಸ್ಗೋದಲ್ಲಿ ಈ ಹಿಂದೆ ನಾನು (ಮಹಿಳಾ ಸಿಂಗಲ್ಸ್) ಕ್ವಾರ್ಟರ್ ಫೈನಲ್ ನಲ್ಲಿ ಸೋತು ನಿಮಗೆ ನಿರಾಸೆ ಮೂಡಿಸಿದ್ದೆ, ಆದರೆ ಈ ಸಲ ಖಂಡಿತಾ ಪದಕ ಗೆದ್ದು ಬರುತ್ತೇನೆ,”. ಹೀಗೆ ಪದಕದ ಭರವಸೆ ನೀಡಿ ಗೋಲ್ಡ್ ಕೋಸ್ಟ್ ಗೆ ಹಾರಿಬಂದಿದ್ದ ಬಾತ್ರಾ ಕ್ರೀಡಾಕೂಟದ ಅಂತ್ಯದಲ್ಲಿ ತನ್ನ ಕೊರಳಿಗೆ ಏರಿಸಿಕೊಂಡಿದ್ದು 4 ಪದಕಗಳನ್ನು! ಮತ್ತು ಈ ಸಾಧನೆಯ ನಡುವೆ ಆಕೆ ಬರೋಬ್ಬರಿ ಎರಡು ಬಾರಿ ಇತಿಹಾಸವನ್ನೂ ಸೃಷ್ಟಿಸಿಬಿಟ್ಟಿದ್ದಳು!
Related Articles
Advertisement
ಕಳೆದ ಬಾರಿಯ ಒಲಂಪಿಕ್ಸ್ ಕೂಟದ ಸಂದರ್ಭದಲ್ಲಿ ಪಿ.ವಿ.ಸಿಂಧು ಅವರ ಕೋಚ್ ಗೋಪಿಚಂದ್ ಅವರು ಫೈನಲ್ ಮ್ಯಾಚ್ ಮುಗಿಯುವವರೆಗೆ ಸಿಂಧು ಅವರನ್ನು ಬಾಹ್ಯ ಜಗತ್ತಿನ ಸಂಪರ್ಕದಿಂದ ಪ್ರತ್ಯೇಕವಾಗಿರಿಸಿದ್ದು ಎಲ್ಲರಿಗೂ ತಿಳಿದ ವಿಷಯವೇ. ಅದೇ ತಂತ್ರವನ್ನು ಬಾತ್ರಾ ಅವರ ಕೋಚ್ ಸಹ ಈ ಬಾರಿ ಅನುಸರಿಸಿದ್ದರು. ಮತ್ತು ಬಾತ್ರಾ ಅವರನ್ನು ಕೂಟದುದ್ದಕ್ಕೂ ಉತ್ತೇಜಿಸಲು ತನ್ನ ಸಲಹೆ, ಸಂದೇಶಗಳನ್ನು (ಗುಪ್ತಾ ಆಸ್ಟ್ರೇಲಿಯಾಗೆ ತೆರಳಿರಲಿಲ್ಲ) ಆಕೆಯ ಸಹ ಆಟಗಾರ ಆಂಥೋಣಿ ಅಮಲ್ ರಾಜ್ ಮತ್ತು ಭಾರತೀಯ ಟಿ.ಟಿ. ಫೆಡರೇಶನ್ ಕಾರ್ಯದರ್ಶಿ ಎಂ.ಪಿ.ಸಿಂಗ್ ಅವರ ಮೂಲಕ ಆಗಾಗ ರವಾನಿಸುತ್ತಿದ್ದರು!
ಕ್ರಿಕೆಟ್ ಸರ್ವವ್ಯಾಪಿಯಾಗಿರುವ ಈ ದೇಶದಲ್ಲಿ ಟಿ.ಟಿ.ಯಂತಹ ಅಷ್ಟೇನೂ ಜನಪ್ರಿಯವಲ್ಲದ ಆಟದಲ್ಲಿ ಮಹೋನ್ನತ ಸಾಧನೆ ಮೆರೆಯುತ್ತಿರುವ ಮಣಿಕಾ ಬಾತ್ರಾ ಶಾಂತ ಸ್ವಭಾವ, ಸಹನಾ ಶಕ್ತಿಯ ಮೂಲಕ ನಿಜವಾದ ಸ್ತ್ರೀ ಶಕ್ತಿಯ ತಾಕತ್ತನ್ನು ದೂರದ ಗೋಲ್ಡ್ ಕೋಸ್ಟ್ ಅಂಗಳದಲ್ಲಿ ಪ್ರಕಟಗೊಳಿಸಿದ್ದಾರೆ. ಆ ಮೂಲಕ ಸಮಸ್ತ ಭಾರತೀಯ ಸ್ತ್ರೀ ಸಮೂಹಕ್ಕೆ ನೀಡಿರುವುದು ಒಂದೇ ಸಂದೇಶವನ್ನು, ಅದೇನೆಂದರೆ – “ಮಣಿಕಾಳಿಗೆ ಇದು ಸಾಧ್ಯವಾಗುತ್ತದೆಂದರೆ ; ನನಗೂ ಸಾಧ್ಯ..!!” ಈ ಸ್ಪೂರ್ತಿಗಾಥೆಯಿಂದ ಮುಂಬರುವ ದಿನಗಳಲ್ಲಿ ಒಲಂಪಿಕ್ಸ್ ಸಹಿತ ವಿಶ್ವಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಭಾರತೀಯ ಮಹಿಳಾ ಮಣಿಗಳು ಇನ್ನಷ್ಟು ಪದಕಗಳನ್ನು ಗೆಲ್ಲುವಂತಾಗಲಿ…
– ಹರಿಪ್ರಸಾದ್ ನೆಲ್ಯಾಡಿ