ಮನುಷ್ಯ ಹಾಗೂ ನಾಯಿಯ ಸಂಬಂಧದ ಕುರಿತು ಇದುವರೆಗೂ ಹಲವು ಚಿತ್ರಗಳು ಬಂದಿವೆ, ಬರುತ್ತಲೇ ಇವೆ. ಇದೇ ವಿಷಯವಾಗಿ ಗಡ್ಡ ವಿಜಿ, “ವಾಜಿ’ ಎಂಬ ಸಿನಿಮಾ ಮಾಡುವುದಾಗಿ ಹೇಳಿದ್ದರು. ಇತ್ತೀಚೆಗೆ ರಕ್ಷಿತ್ ಶೆಟ್ಟಿ ಅದೇ ವಿಷಯವಾಗಿ “777 ಚಾರ್ಲಿ’ ಎಂಬ ಸಿನಿಮಾ ನಿರ್ಮಿಸುತ್ತಿರುವುದಾಗಿ ಹೇಳಿದ್ದರು. ಈಗ ಇದೇ ವಿಷಯವನ್ನಿಟ್ಟುಕೊಂಡು “ನಾನು ಮತ್ತು ಗುಂಡ’ ಎಂಬ ಚಿತ್ರದಲ್ಲಿ ಸದ್ದಿಲ್ಲದೆ ತಯಾರಾಗುತ್ತಿದೆ.
“ನಾನು ಮತ್ತು ಗುಂಡ’ ಚಿತ್ರವು ಮನುಷ್ಯ ಹಾಗೂ ನಾಯಿಯ ಸಂಬಂಧದ ಸುತ್ತ ಹಣೆದಿರುವ ಕಥೆಯಾಗಿದ್ದು, ನಿಯತ್ತಿನ ನಾಯಿಯ ಬಗ್ಗೆ ತಿಳಿಯಬೇಕಾದರೆ ಈ ಚಿತ್ರವನ್ನು ನೋಡಬೇಕಂತೆ. ಈ ಹಿಂದೆ “ಪಟಾಸ್’ ಎಂಬ ಚಿತ್ರವನ್ನು ಶುರು ಮಾಡಿದ್ದ ಶ್ರೀನಿವಾಸ್ ರಾಮಯ್ಯ, ಈ “ನಾನು ಮತ್ತು ಗುಂಡ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಪೊಯಮ್ ಪ್ರೊಡಕ್ಷನ್ಸ್‌ನಡಿ ಈ ಚಿತ್ರವನ್ನು ರಘು ಹಾಸನ್ ನಿರ್ಮಿಸುತ್ತಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಸೆಪ್ಟೆಂಬರ್ 17ರಿಂದ 15 ದಿನಗಳ ಕಾಲ ಮುಗಿಸಲಾಗಿದೆ. ಇದೇ ತಿಂಗಳ 9ರಿಂದ ಅಕ್ಟೋಬರ್ 22ರವರೆಗೆ ಎರಡನೇ ಹಂತದ ಚಿತ್ರೀಕರಣ ಶುರುವಾಗಲಿದ್ದು, ಹಾಸನ, ಚನ್ನರಾಯಪಟ್ಟಣ, ಹಿರಿಸಾವೆ, ಶ್ರವಣಬೆಳಗೊಳ, ಆದಿಚುಂಚನಗಿರಿ, ಯಡಿಯೂರು, ಸಕಲೇಶಪುರ ಮುಂತಾದ ಕಡೆ ಚಿತ್ರೀಕರಣ ನಡೆಸಲಾಗುವುದು.
“ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದ ಶಿವರಾಜ್ ಕೆ.ಆರ್. ಪೇಟೆ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇನ್ನು ಸಂಯುಕ್ತ ಹೊರನಾಡು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಜೊತೆಗೆ ಗೋವಿಂದೇಗೌಡ, ರಾಕ್‌ಲೈನ್ ಸುಧಾಕರ, ಸಿಂಬ, ಗುಂಡ ವಿದ್ಯಾಧರ್, ಮಮತ, ಜ್ಯೋತಿ ಮರೂರ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ವಿವೇಕಾನಂದ ಅವರು ಕಥೆ ಬರೆದಿದ್ದು, ರಘು ಹಾಸನ್, ಶ್ರೀನಿವಾಸ್ ತಿಮ್ಮಯ್ಯ ಮತ್ತು ವಿವೇಕಾನಂದ ಚಿತ್ರಕಥೆ ರಚಿಸಿದ್ದಾರೆ.