ಇತ್ತೀಚೆಗಷ್ಟೇ ದೀಪಾವಳಿ ಹಬ್ಬವನ್ನು ಸಡಗರ – ಸಂಭ್ರಮದಿಂದ ಆಚರಿಸಿದವರು, ಭರ್ಜರಿಯಾಗಿ ಪಟಾಕಿ ಹೊಡೆದವರು “ಸುರ್ ಸುರ್ ಬತ್ತಿ’ ಹೆಸರನ್ನು ಖಂಡಿತ ಕೇಳಿರುತ್ತೀರಿ. ಕತ್ತಲಿನಲ್ಲಿ ಬಣ್ಣ-ಬಣ್ಣವಾಗಿ ಬೆಳಗುವ “ಸುರ್ ಸುರ್ ಬತ್ತಿ’ ಎಂಥವರನ್ನೂ ಒಮ್ಮೆ ಆಕರ್ಷಿಸುತ್ತದೆ. ದೀಪಾವಳಿಯೇನೊ ಅದ್ಧೂರಿಯಾಗಿ ಮುಗಿಯಿತು ಈಗ ಯಾಕೆ “ಸುರ್ ಸುರ್ ಬತ್ತಿ’ ವಿಷಯ? ಅಂತ ಕೇಳುತ್ತಿದ್ದೀರಾ, ಅದಕ್ಕೂ ಒಂದು ಕಾರಣವಿದೆ. ದೀಪಾವಳಿ ಮುಗಿಯುತ್ತಿದ್ದಂತೆ, ಹೊರಗಡೆಯೇನೊ “ಸುರ್ ಸುರ್ ಬತ್ತಿ’ ಅಬ್ಬರ ಕಡಿಮೆಯಾಯಿತು. ಇನ್ನೇನಿದ್ದರೂ, ಈ ವಾರದಿಂದ ಥಿಯೇಟರ್‌ಗಳಲ್ಲಿ “ಸುರ್ ಸುರ್ ಬತ್ತಿ’ ಬೆಳಕು ಕಾಣಿಸಲಿದೆ.
ಹೌದು, ಕನ್ನಡದಲ್ಲಿ “ಸುರ್ ಸುರ್ ಬತ್ತಿ’ ಎಂಬ ಶೀರ್ಷಿಕೆಯ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಇತ್ತೀಚೆಗೆ ಬರುತ್ತಿರುವ ವಿಭಿನ್ನ ಶೀರ್ಷಿಕೆಗಳ ಸಾಲಿಗೆ ಈಗ “ಸುರ್ ಸುರ್ ಬತ್ತಿ’ ಚಿತ್ರ ಕೂಡ ಸೇರ್ಪಡೆಯಾಗುತ್ತಿದೆ. ಈ ಹಿಂದೆ “ಚರ್ತುಭುಜ’ ಚಿತ್ರದ ಮೂಲಕ ಹೀರೋ ಆಗಿ ಪದಾರ್ಪಣ ಮಾಡಿದ್ದ ಲೋಕೇಶ್, ಈಗ “ಸುರ್ ಸುರ್ ಬತ್ತಿ’ ಚಿತ್ರದಲ್ಲಿ ಆರವ್ ಅಂತಾ ಹೆಸರು ಬದಲಾಯಿಸಿಕೊಂಡು ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆರ್ವನಿಗೆ ಜೋಡಿಯಾಗಿ ವೈಷ್ಣವಿ ಮೆನನ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಊರ್ವಶಿ, ಸಾಧುಕೋಕಿಲ, ಎಂ.ಕೆ ಮಠ, ಅನಿಲ್ ಮೊದಲಾದ ಕಲಾವಿದರ ತಾರಾಗಣವಿದೆ. ಮುಗಿಲ್. ಎಂ ಎಂಬುವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಪಿಎಂಎಸ್ ಫಿಲಂಸ್ ಬ್ಯಾನರ್‌ನಲ್ಲಿ ಬಿ.ಡಿ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಚಿತ್ರಕ್ಕೆ ಎ. ಸಿ ಮಹೇಂದರ್ ಛಾಯಾಗ್ರಹಣ ಮತ್ತು ಪ್ರವೀಣ್ ಸಂಕಲನವಿದೆ. ಲೋಕೇಶ್ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಂದ್ರಕಲಾ, ಚಂದ್ರ ಮೋಹನ್ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಗೌತಮ್ ಶ್ರೀವತ್ಸ ಹಿನ್ನೆಲೆ ಸಂಗೀತ ನೀಡಿದ್ದಾರೆ. ಕೌರವ ವೆಂಕಟೇಶ್ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶಿಸಿದ್ದಾರೆ.
ಹೆಸರೇ ಹೇಳುವಂತೆ “ಸುರ್ ಸುರ್ ಬತ್ತಿ’ ಲವ್ ಕಂ ಕಾಮಿಡಿ ಕಥಾಹಂದರವಿರುವ ಚಿತ್ರ. ಒಟ್ಟಾರೆ ಒಂದಷ್ಟು ಹೊಸ ಪ್ರತಿಭೆಗಳು ಸೇರಿ ಈ ವಾರ ಥಿಯೇಟರ್‌ಗಳಲ್ಲಿ “ಸುರ್ ಸುರ್ ಬತ್ತಿ’ ಹಚ್ಚೋಕೆ ರೆಡಿಯಾಗಿದ್ದು, ಚಿತ್ರ ಎಷ್ಟರ ಮಟ್ಟಿಗೆ ನೋಡುಗರ ಮನರಂಜಿಸಲಿದೆ ಎಂಬುದು ಕೆಲ ದಿನಗಳಲ್ಲೆ ಗೊತ್ತಾಗಲಿದೆ. ನಟ ಹಾಗೂ ನಿರ್ಮಾಪಕ ಮಿತ್ರಾ ಹಾಗೂ ವಿತರಕ ಮಾರ್ ಸುರೇಶ್ ಜಂಟಿಯಾಗಿ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ.