ನವದೆಹಲಿ: ಸ್ಟ್ಯಾಂಡ್ ಅಪ್ ಕಾಮಿಡಿಯನ್, ಮಿಮಿಕ್ರಿ ಕಲಾವಿದ ಶ್ಯಾಮ್ ರಂಗೀಲಾ ಇತ್ತೀಚೆಗೆ ರಾಜಸ್ಥಾನದ ಝಲಾನಾ ಚಿರತೆ ರಕ್ಷಿತಾರಣ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಂತೆ ಸಫಾರಿ ಪೋಷಾಕು ಧರಿಸಿ, ನೀಲ್ ಗಾಯ್ ಗೆ ಆಹಾರವನ್ನು ನೀಡಿರುವ ವಿಡಿಯೋ ವೈರಲ್ ಆಗಿದೆ. ಮತ್ತೊಂದೆಡೆ ನೀಲ್ ಗಾಯ್ ಗೆ ಆಹಾರ ನೀಡಿರುವ ಶ್ಯಾಮ್ ರಂಗೀಲಾಗೆ ಕಚೇರಿಗೆ ಹಾಜರಾಗಿ ವಿವರಣೆ ನೀಡುವಂತೆ ಅರಣ್ಯಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ:IPL 2023 ಇಂದು ಆರ್ ಸಿಬಿ- ಸಿಎಸ್ ಕೆ ಮುಖಾಮುಖಿ: ಹೇಗಿದೆ ಉಭಯ ತಂಡಗಳ ಬಲಾಬಲ
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಬಂಡೀಪುರ ಹುಲಿ ರಕ್ಷಿತಾರಣ್ಯಕ್ಕೆ ಸಫಾರಿ ಕೈಗೊಂಡಿದ್ದು, ಆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಧರಿಸಿದ್ದ ಪೋಷಾಕಿನಂತೆ ಶ್ಯಾಮ್ ರಂಗೀಲಾ ಕೂಡಾ ಹ್ಯಾಟ್ ಹಾಕಿಕೊಂಡು ನೀಲ್ ಗಾಯ್ ಗೆ ಆಹಾರ ನೀಡಿರುವ ವಿಡಿಯೋವನ್ನು ಚಿತ್ರೀಕರಿಸಿದ್ದರು.
ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಸಫಾರಿ ವೇಳೆ ಯಾವುದೇ ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡುವುದು ಅಪರಾಧವಾಗಿದೆ. ಆ ನಿಟ್ಟಿನಲ್ಲಿ ಜೈಪುರದ ಝಲಾನಾ ರಕ್ಷಿತಾರಣ್ಯದಲ್ಲಿ ಸಫಾರಿ ಕೈಗೊಂಡ ವೇಳೆ ನೀಲ್ ಗಾಯ್ ಗೆ ಆಹಾರ ನೀಡಿದ ಶ್ಯಾಮ್ ಗೆ ನೋಟಿಸ್ ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಜಂಗಲ್ ಸಫಾರಿ ವೇಳೆ ಶ್ಯಾಮ್ ರಂಗೀಲಾ ಹ್ಯಾಟ್ ಧರಿಸಿ, ಕಪ್ಪು ಕನ್ನಡಕ, ಜಾಕೆಟ್ ಧರಿಸಿದ್ದು, ನೀಲ್ ಗಾಯ್ ಗೆ ಆಹಾರ ತಿನ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.