Advertisement

ಗಂಭೀರ ಪರಿಸ್ಥಿತಿ ಇದ್ದರೆ ಮಾತ್ರ ಆಸ್ಪತ್ರೆಗೆ ಬನ್ನಿ; ಸರ್ಕಾರ ಮನವಿ

01:04 AM Mar 21, 2020 | Lakshmi GovindaRaj |

ಬೆಂಗಳೂರು: ಮುಂದಿನ ಎರಡು ವಾರಗಳ ಮಟ್ಟಿಗೆ ಜನರು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಆಸ್ಪತ್ರೆಗೆ ಹೋಗುವುದನ್ನು ನಿಯಂತ್ರಿಸಿ. ಅನಿವಾರ್ಯ ಹಾಗೂ ತುರ್ತು ಚಿಕಿತ್ಸೆ ಅಗತ್ಯವಿದ್ದಲ್ಲಿ ಮಾತ್ರ ಆಸ್ಪತ್ರೆಗಳಿಗೆ ಬರಬೇಕು. ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕು ವ್ಯಾಪಿಸುತ್ತಿರುವುದನ್ನು ತಡೆಗಟ್ಟಿ, ಪರಿಸ್ಥಿತಿಯನ್ನು ಹತೋಟಿಗೆ ತರಲು ಸಾರ್ವಜನಿಕರು ಸಹಕರಿಸಬೇಕಾಗಿ ಸರ್ಕಾರ ಮನವಿ ಮಾಡಿದೆ.

Advertisement

ತುರ್ತು ಚಿಕಿತ್ಸೆ ಅಗತ್ಯವಿದ್ದಲ್ಲಿ ಮಾತ್ರ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ಸ್ವಾಯತ್ತ ಆರೋಗ್ಯ ಸಂಸ್ಥೆಗಳಲ್ಲಿ ಚಿಕಿತ್ಸೆ ಪಡೆಯಲು ತೆರಳಬೇಕು. ಉಳಿದಂತೆ ದಂತ ಸಮಸ್ಯೆ ಸೇರಿದಂತೆ ಮತ್ತಿತರ ಚಿಕಿತ್ಸೆಯ ಅಗತ್ಯ ಇಲ್ಲದಿದ್ದಲ್ಲಿ ಎರಡು ವಾರಗಳವರೆಗೆ ಆಸ್ಪತ್ರೆಗಳಿಗೆ ಭೇಟಿ ನೀಡಬೇಡಿ.

ಆಸ್ಪತ್ರೆಗಳಲ್ಲಿ ಹೆಚ್ಚು ಜನಸಂದಣಿ ಆಗದಂತೆ ಎಚ್ಚರ ವಹಿಸುವ ಮೂಲಕ ಕೊರೊನಾ ವೈರಸ್‌ ಹರಡುವುದನ್ನು ತಡೆಯಲು ಸಹಕರಿಸುವಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಆಖ್ತರ್‌ ಮನವಿ ಮಾಡಿದ್ದಾರೆ. ಇನ್ನು ಖಾಸಗಿ ಆಸ್ಪತ್ರೆಗಳು ಸಹ ಜನಸಂದಣಿಯನ್ನು ತಡೆಗಟ್ಟುವ ಮೂಲಕ ಸೋಂಕು ಹರಡುವುದನ್ನು ನಿಯಂತ್ರಿಸಲು ಇದೇ ರೀತಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಸುತ್ತೋಲೆ ಹೊರಡಿಸಿದ ಇಲಾಖೆ: ಈ ನಡುವೆ, ವೈದ್ಯಕೀಯ ಶಿಕ್ಷಣ ಇಲಾಖೆಯು ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು, ಅಧೀನದಲ್ಲಿ ಬರುವ ಆಸ್ಪತ್ರೆಗಳಿಗೆ “ರೋಗಿಗಳ ಪರಿಸ್ಥಿತಿ ಗಂಭೀರವಾಗಿದ್ದಲ್ಲಿ ಮಾತ್ರ ಒಳರೋಗಿಗಳಾಗಿ ದಾಖಲು ಮಾಡಿಕೊಳ್ಳಬೇಕು ಹಾಗೂ ಶಸ್ತ್ರಚಿಕಿತ್ಸೆ ಕೈಗೊಳ್ಳಬೇಕು’ ಎಂದು ಸುತ್ತೋಲೆ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next