ಮುದ್ದೇಬಿಹಾಳ: ನೀರಿನ ಬಾಟಲಿ ವಿಷಯವಾಗಿ ನಡೆದಿದ್ದ ಗಲಾಟೆಯಿಂದ ಪ್ರಕ್ಷುಬ್ಧಗೊಂಡಿದ್ದ ಸುಕ್ಷೇತ್ರ ಶ್ರೀಶೈಲವು ಈಗ ಶಾಂತವಾಗಿದ್ದು ಅಹಿತಕರ ಘಟನೆಗಳು ನಡೆಯುತ್ತಿಲ್ಲ. ಕರ್ನಾಟಕದ ಭಕ್ತರು ಯಾವುದೇ ಆತಂಕ ಇಲ್ಲದೆ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ಬರಬಹುದಾಗಿದೆ ಎಂದು ಕರ್ನಾಟಕ ಚಾಲಕರ ಸಂಘದ ಮುದ್ದೇಬಿಹಾಳ ತಾಲೂಕು ಘಟಕದ ಅಧ್ಯಕ್ಷ ಶರಣು ಗಂಗನಗೌಡರ (ನಾಲತವಾಡ) ತಿಳಿಸಿದ್ದಾರೆ.
ಸದ್ಯ ಶ್ರೀಶೈಲದಲ್ಲಿರುವ ಅವರು, ಅಲ್ಲಿಂದಲೇ ಶುಕ್ರವಾರ ಉದಯವಾಣಿಯೊಂದಿಗೆ ಮಾತನಾಡಿ, ಅಲ್ಲಿನ ಪ್ರಸಕ್ತ ಪರಿಸ್ಥಿತಿಯ ಮಾಹಿತಿ ನೀಡಿ ಇಲ್ಲಿನ ಜನಜೀವನ ಎಂದಿನಂತಿದೆ. ಗಲಾಟೆಯ ವಿಷಯವನ್ನು ಇಲ್ಲಿನ ಜನ ಮರೆತಿದ್ದಾರೆ. ಅಂದಿನ ಘಟನೆಯಲ್ಲಿ ಗಾಯಗೊಂಡಿದ್ದ ಚಾಲಕರಾದ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕು ಜಾನಮಟ್ಟಿಯ ಶ್ರೀಶೈಲ್ ವಾಲಿಮಠ ಚೇತರಿಸಿಕೊಂಡಿದ್ದಾರೆ. ಇವರು ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ಸುಳ್ಳು. ನಾನೇ ಖುದ್ದಾಗಿ ಆತನಿಗೆ ಚಿಕಿತ್ಸೆ ನೀಡುತ್ತಿರುವ ಸುನ್ನಿಪೇಟೆಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆತ ಆರೋಗ್ಯವಾಗಿರುವುದನ್ನು ಕಣ್ಣಾರೆ ಕಂಡು, ಆತನನ್ನು ಮಾತನಾಡಿಸಿದ್ದೇವೆ. ಶ್ರೀಶೈಲ ಕ್ಷೇತ್ರ ವ್ಯಾಪ್ತಿ ಹೊಂದಿರುವ ಕರ್ನೂಲು ಜಿಲ್ಲೆಯ ಜಿಲ್ಲಾ ಚಾಲಕರ ಸಂಘದ ಅಧ್ಯಕ್ಷರೂ ಕನ್ನಡಿಗರೇ ಆಗಿದ್ದು ಅವರು ಸಹಿತ ಚಾಲಕ ಶ್ರೀಶೈಲ್ ಆರೋಗ್ಯವಾಗಿರುವುದರ ಕುರಿತು ಈಗಾಗಲೇ ಎಲ್ಲ ಕಡೆ ಧ್ವನಿ ಸಂದೇಶದ ಮೂಲಕ ಮಾಹಿತಿ ಕಳಿಸಿದ್ದಾರೆ. ಗಾಯಗೊಂಡಿದ್ದ ಅಮೀನಗಡದ ಇನ್ನೋರ್ವ ಚಾಲಕ ಗೋಪಾಲ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ತಿಳಿಸಿದರು.
ಶಕ್ತಿಪೀಠ ಇರುವ ಪುಣ್ಯಕ್ಷೇತ್ರ ಶ್ರೀಶೈಲಕ್ಕೆ ಯುಗಾದಿಯಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಮೊನ್ನೆ ನಡೆದ ಕಹಿ ಘಟನೆಯಿಂದ ಕಪೋಲಕಲ್ಪಿತ ಸುದ್ದಿಗಳು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಹರಿದಾಡಿ ಭಕ್ತರಲ್ಲಿ ಆತಂಕ ಹೆಚ್ಚಾಗುವಂತೆ ಮಾಡುತ್ತಿವೆ. ಆತಂಕಗೊಂಡಿರುವ ಭಕ್ತರು ಉಗಾದಿಯಂದು ಶ್ರೀಶೈಲಕ್ಕೆ ಬರಲು ಹಿಂದೇಟು ಹಾಕತೊಡಗಿದ್ದಾರೆ. ಕೊರೊನಾ ಮಹಾಮಾರಿಯ 2-3 ವರ್ಷ ಕರಾಳತೆಯ ನಂತರ ಇದೀಗ ಭಕ್ತರು ನೆಮ್ಮದಿಯ ಉಸಿರು ಬಿಟ್ಟು ಪುಣ್ಯಕ್ಷೇತ್ರಕ್ಕೆ ಆಗಮಿಸಿ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆಯಲು ಮುಂದಾಗುತ್ತಿದ್ದಾರೆ. ಕಹಿ ಘಟನೆ ಮರೆಯಾಗಿದ್ದು ಶ್ರೀಶೈಲದಲ್ಲಿ ಈಗ ಎಲ್ಲರೂ ಮೊದಲಿನಂತಾಗಿದೆ ಎನ್ನುವುದನ್ನು ಭಕ್ತರು ಮನವರಿಕೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ದೇವಸ್ಥಾನದ ಎದುರು ವ್ಯಾಪಾರ, ವಹಿವಾಟು ಎಂದಿನಂತೆ ಪ್ರಾರಂಭಗೊಂಡಿದೆ. ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ವ್ಯಾಪಾರಸ್ಥರೂ ಸಹಿತ ಭಕ್ತರ ಶೋಷಣೆ ಮಾಡುತ್ತಿಲ್ಲ. ಇದನ್ನು ನಾನು ಪ್ರತ್ಯಕ್ಷ ಕಂಡುಕೊಂಡಿದ್ದೇನೆ. ಕರ್ನಾಟಕ ಸರ್ಕಾರ ಶ್ರೀಶೈಲಕ್ಕೆ ರಾಯಚೂರು ಜಿಲ್ಲೆಯ ಪೊಲೀಸ್ ಅಧಿಕಾರಿಗಳನ್ನು ಕಳಿಸಿ ಇಲ್ಲಿನ ಕರ್ನಾಟಕದ ಭಕ್ತರ ಯೋಗಕ್ಷೇಮ ನೋಡಿಕೊಳ್ಳಲು ಕ್ರಮ ಕೈಕೊಂಡಿದೆ ಎಂದು ತಿಳಿಸಿದರು.
ಶ್ರೀಶೈಲ ಕ್ಷೇತ್ರದಲ್ಲಿ ಎಲ್ಲವೂ ಮೊದಲಿನಂತಿದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಇಲ್ಲದಂತೆ ದೇವಸ್ಥಾನ ಆಡಳಿತ ಮಂಡಳಿ, ಜಗದ್ಗುರುಗಳು ಮತ್ತು ಸ್ಥಳೀಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕರ್ನಾಟಕದ ಭಕ್ತರಿಗೆ ಯಾವುದೇ ತೊಂದರೆ ಇಲ್ಲ. ಶುಕ್ರವಾರ ನಡೆದ ಮಹಾರಥೋತ್ಸವದಲ್ಲಿ ಅಸಂಖ್ಯಾತ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದಾರೆ. ದೇವರ ದರ್ಶನಕ್ಕೂ ಯಾವುದೇ ತೊಂದರೆ ಇಲ್ಲ. ಕರ್ನಾಟಕದ ಭಕ್ತರು ಯಾವುದೇ ಆತಂಕ, ಹಿಂಜರಿಕೆ ಇಲ್ಲದೆ ಶ್ರೀಶೈಲ್‌ಕ್ಕೆ ಬಂದು ಹೋಗಬಹುದಾಗಿದೆ.
-ಗಂಗಪ್ಪ ಬುರ್ಲಿ, ಪಿಎಸೈ, ಇಡಪನೂರ ಪೊಲೀಸ್ ಠಾಣೆ, ರಾಯಚೂರು