ಮೈಸೂರು: ಸಂಪೂರ್ಣ ಭರ್ತಿಯಾಗಿರುವ ಕೃಷ್ಣರಾಜ ಸಾಗರ ಆಣೆಕಟ್ಟೆ ಹಿನ್ನೀರಿನಲ್ಲಿ ದಸರಾ ಮಹೋತ್ಸವ ಅಂಗವಾಗಿ ಇದೇ ಮೊದಲ ಬಾರಿಗೆ ಆಯೋಜಿಸಿರುವ ದಸರಾ ಜಲಸಾಹಸ ಕ್ರೀಡೆಗೆ ಭಾನುವಾರ ಚಾಲನೆ ನೀಡಲಾಯಿತು. ಕೆಆರ್‌ಎಸ್‌ನ ಹಿನ್ನೀರು ಪ್ರದೇಶವಾದ ಉಂಡುವಾಡಿಯಲ್ಲಿ ಮೊದಲ ಬಾರಿಗೆ ತಾಲೂಕಿನ ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆ ಆಯೋಜಿಸಿರುವ ಜಲ ಸಾಹಸ ಕ್ರೀಡೆಗೆ ಶಾಸಕ ಜಿ.ಟಿ.ದೇವೇಗೌಡ ಸ್ವತ: ಬೋಟ್‌ನಲ್ಲಿ ಸುತ್ತಾಡುವ ಮೂಲಕ ಚಾಲನೆ ನೀಡಿದರು.
ಜಲ ಸಾಹಸ ಕ್ರೀಡೆಯಲ್ಲಿ ವಿಭಿನ್ನ ಹಾಗೂ ರೋಮಾಂಚನಕಾರಿ ಆಟಗಳಿದ್ದು, ಜೆಟ್ ಸ್ಕೈ ಒಬ್ಬರಿಗೆ 200 ರೂ, ಸ್ಪೀಡ್ ಬೋಟ್ 100, ಬನಾನ ರೈಡ್ 100, ಕಯಾಕಿಂಗ್ 50, ಕ್ಯಾನೋಯಿಂಗ್ 50, ಸ್ಟಿಲ್ ವಾಟರ್ ರಾಫ್ಟಿಂಗ್ 50, ಅಕ್ವಾಸ್ಲೆ„ಡ್ 100 ರೂ., ವಾಟರ್ ಜೋರ್ಬ್ಗೆ 100 ರೂ. ನಿಗದಿ ಪಡಿಸಲಾಗಿದೆ. ಎಲ್ಲವನ್ನೂ ಆಡುವವರಿಗೆ ಒಬ್ಬರಿಗೆ 700 ನಿಗದಿ ಪಡಿಸಲಾಗಿದೆ. ರೋಚಕ ಅನುಭವ ನೀಡುವ ಜಲ ಸಾಹಸ ಕ್ರೀಡೆ ಬೆಳಗ್ಗೆ 9.30 ರಿಂದ 5.30ರವರೆಗೆ ನಡೆಯಲಿದೆ.
ನಾಳೆಯಿಂದ ಯುವ ದಸರಾ: ದಸರಾದ ಪ್ರಮುಖ ಆಕರ್ಷಣೆಯಾದ ಯುವ ದಸರಾ ಮಹಾರಾಜ ಕಾಲೇಜು ಮೈದಾನದಲ್ಲಿ ಅ.1ರಿಂದ 6ರವರೆಗೆ ಆರು ದಿನಗಳ ಕಾಲ ನಡೆಯಲಿದೆ. ಮಂಗಳವಾರ ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ವಿಶ್ವ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಚಾಲನೆ ನೀಡಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ರಾನು ಮಂಡಾಲ್ ಅವರನ್ನು ಸನ್ಮಾನಿಸಲಾಗುತ್ತಿದೆ. ಬಳಿಕ, ಬಾಲಿವುಡ್ ಗಾಯಕರಾದ ಗುರು ರಾಂಧವ ತಂಡದಿಂದ ಮನರಂಜನಾ ಕಾರ್ಯಕ್ರಮವಿದೆ.
ಜಿಟಿಡಿಯಿಂದ ಸಿಎಂ ಬಿಎಸ್‌ವೈ ಗುಣಗಾನ
ಮೈಸೂರು: ರೈತ ಚಳವಳಿ, ಹೋರಾಟಗಳ ಮೂಲಕ ಮುಖ್ಯಮಂತ್ರಿಯಾದ ಏಕೈಕ ವ್ಯಕ್ತಿ ಬಿ.ಎಸ್.ಯಡಿಯೂರಪ್ಪ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಗುಣಗಾನ ಮಾಡಿದರು. ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2009ರಲ್ಲೂ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರವಾಹ ಬಂದಿತ್ತು. ಆ ಸಂದರ್ಭದಲ್ಲಿ ನಿರಾಶ್ರಿತರಾದವರಿಗೆ ಸ್ವಾಮೀಜಿಗಳು, ಉದ್ಯಮಿಗಳ ನೆರವಿನಿಂದ ಶಾಶ್ವತವಾದ ಮನೆ ಕಟ್ಟಿಕೊಟ್ಟಿದ್ದಾರೆ.
ಯಡಿಯೂರಪ್ಪ ಹೋರಾಟಗಾರರು, ಒಳ್ಳೆಯ ಮನಸ್ಸುಳ್ಳವರು. ಅವರು ಮುಖ್ಯಮಂತ್ರಿ ಯಾದ ಮೇಲೆ ನದಿಗಳೆಲ್ಲ ತುಂಬಿ ಹರಿಯುತ್ತಿವೆ. ಚಾಮುಂಡೇಶ್ವರಿ ಆಶೀರ್ವಾದದಿಂದ ಎಲ್ಲೆಲ್ಲೂ ಹಸಿರು ಕಂಗೊಳಿಸುತ್ತಿದೆ. ಮಂತ್ರಿಮಂಡಲ ರಚನೆಯಾಗದಿದ್ದರೂ 25 ದಿನಗಳ ಕಾಲ ಒಬ್ಬರೇ ರಾಜ್ಯ ಸುತ್ತಿ ಅನಾಹುತ ಆಗದಂತೆ ನೋಡಿಕೊಂಡಿದ್ದಾರೆ. ಕರ್ನಾಟಕವನ್ನು ರಾಮರಾಜ್ಯ ಮಾಡುವ ಶಕ್ತಿ ಅವರಿಗಿದೆ ಎಂದರು.