Advertisement

Mangaluru ತಾಲೂಕಿಗೆ ಬರ! ಶೇ. 20ರಷ್ಟು ಮಳೆ ಕೊರತೆ

01:22 AM Aug 26, 2023 | Team Udayavani |

ಮಂಗಳೂರು: ಸಾಮಾನ್ಯವಾಗಿ ಅತೀ ಹೆಚ್ಚು ಮಳೆ ಸುರಿಯುವ ಕರಾವಳಿಯಲ್ಲೇ ಈ ಬಾರಿ ಮಳೆ ಕೊರತೆಯಾಗಿದ್ದು, ಇನ್ನೂ ವಾಡಿಕೆಯ ಮಳೆ ಸುರಿದಿಲ್ಲ. ಸದ್ಯಕ್ಕೆ ಮಳೆಯಾಗುವ ಮುನ್ಸೂಚನೆಯೂ ಇಲ್ಲ. ಈಗ ಬರ ಪರಿಸ್ಥಿತಿ ಉದ್ಬವಿಸಿರುವ 113 ತಾಲೂಕುಗಳ ಪಟ್ಟಿಯನ್ನು ರಾಜ್ಯ ಸರಕಾರ ಗುರುತಿ ಸಿದ್ದು, ಆ ಪಟ್ಟಿಯಲ್ಲಿ ಮಂಗಳೂರು ಕೂಡ ಸೇರಿದೆ.

Advertisement

ಜೂ. 1ರಿಂದ ಆ. 19ರ ವರೆಗಿನ ಮಳೆ ಹಾಗೂ ಇತರ ಹಲವು ಮಾನದಂಡಗಳ ಆಧಾರ ದಲ್ಲಿ ಈ ಪಟ್ಟಿಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬಿಡುಗಡೆ ಮಾಡಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿ ಈ ಅವಧಿಗೆ ಶೇ. 20ರಷ್ಟು ಮಳೆ ಕೊರತೆ ಇದೆ. ಮಧ್ಯಮ ಮಳೆ ಕೊರತೆ ತಾಲೂಕು ಎಂದು ಗುರುತಿಸಲಾಗಿದೆ. ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಹೆಚ್ಚಿನ ಮಳೆ ಕೊರತೆ ಇದ್ದರೂ ಮಾನದಂಡದ ಅನ್ವಯ ಮಳೆ ಕೊರತೆ, ಸತತ ಮೂರು ವಾರಗಳ ಅಥವಾ ಅದಕ್ಕಿಂತ ಹೆಚ್ಚು ಶುಷ್ಕ ವಾತಾವರಣ, ತೇವಾಂಶ ಕೊರತೆ, ಅಂತರ್ಜಲ ಮಟ್ಟದ ಸೂಚ್ಯಂಕ, ಜಲಾಶಯಗಳ ನೀರಿನ ಸಂಗ್ರಹ, ನದಿಗಳಲ್ಲಿ ಹರಿವು ಸಹಿತ ವಿವಿಧ ಮಾನದಂಡಗಳ ಆಧಾರದಲ್ಲಿ ಮಂಗಳೂರು ತಾಲೂಕನ್ನು ಮಾತ್ರ ಬರ ಪಟ್ಟಿಯಲ್ಲಿ ಸೇರಿಸಿದೆ.

ತಾಲೂಕು ರೆಡ್‌ ಝೋನ್‌
ಸದ್ಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಇದೆ. ಜೂ. 1ರಿಂದ ಆ. 25ರ ವರೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಶೇ. 40ರಷ್ಟು ಕೊರತೆ, ಬಂಟ್ವಾಳ ಶೇ. 24, ಮಂಗಳೂರು ಶೇ. 20, ಪುತ್ತೂರು ಶೇ. 37, ಕಡಬ ಶೇ. 33, ಕಾರ್ಕಳ ಶೇ. 22, ಬ್ರಹ್ಮಾವರ ಶೇ. 21, ಹೆಬ್ರಿ ಶೇ. 39ರಷ್ಟು ಮಳೆ ಕೊರತೆ ಇದ್ದು, ತೀವ್ರ ಮಳೆ ಕೊರತೆ ತಾಲೂಕು ಎಂದು ಗುರುತಿಸಲಾಗಿದೆ. ಅದೇ ರೀತಿ ಸುಳ್ಯ ತಾಲೂಕಿನಲ್ಲಿ ಶೇ. 18, ಮೂಡುಬಿದಿರೆ ಶೇ. 11, ಮೂಲ್ಕಿ ಶೇ. 15, ಉಳ್ಳಾಲ ಶೇ. 16, ಕುಂದಾಪುರ ಶೇ. 8, ಉಡುಪಿ ಶೇ. 14, ಬೈಂದೂರು ಶೇ. 16, ಕಾಪುವಿನಲ್ಲಿ ಶೇ. 9ರಷ್ಟು ಮಳೆ ಕೊರತೆ ಇದ್ದು, ಮಧ್ಯಮ ಮಳೆ ಕೊರತೆ ತಾಲೂಕು ಎಂದು ಗುರುತು ಮಾಡಲಾಗಿದೆ.
2017ರಲ್ಲೂ ಬರ ಬಂದಿತ್ತು

ಆರು ವರ್ಷಗಳ ಹಿಂದೆ ರಾಜ್ಯ ಸರಕಾರ ಬಿಡುಗಡೆ ಮಾಡಿದ 160 ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಮಂಗಳೂರು ಹಾಗೂ ಬಂಟ್ವಾಳ ತಾಲೂಕುಗಳು ಸೇರಿಕೊಂಡಿದ್ದವು. ಮಂಗಳೂರು ತಾಲೂಕಿನಲ್ಲಿ ಸರಾಸರಿ 301 ಮಿ.ಮೀ., ಬಂಟ್ವಾಳದಲ್ಲಿ 337 ಮಿ.ಮೀ. ಮಳೆಯಾಗುತ್ತದೆ. ಆದರೆ ಆ ವರ್ಷ ಮಂಗಳೂರು ತಾಲೂಕಿನಲ್ಲಿ ಕೇವಲ 75 ಮಿ.ಮೀ. ಹಾಗೂ ಬಂಟ್ವಾಳದಲ್ಲಿ 91 ಮಿ.ಮೀ. ಮಳೆಯಾಗಿತ್ತು. ಶೇ. 75ರಷ್ಟು ಮಳೆ ಕೊರತೆ ಎದುರಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next