Advertisement

ಹೆರೂರಿಗೆ ಬರುವೆ, ಸಮಸ್ಯೆಆಲಿಸುವೆ: ಎಚ್‍ಡಿಕೆ

10:34 PM Jun 22, 2019 | Team Udayavani |

ಯಾದಗಿರಿ: ಮಳೆಯಿಂದಾಗಿ ಕಲಬುರಗಿ ಜಿಲ್ಲೆ ಹೆರೂರಿನ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಂದೂಡಲಾಗಿದೆ. ಹೀಗಾಗಿ, ಜನತೆ ನಿರಾಸೆಗೊಳ್ಳುವುದು ಬೇಡ. ಮತ್ತೆ ಬಂದು ಸಮಸ್ಯೆ ಆಲಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಭಯ ನೀಡಿದರು.

Advertisement

ಚಂಡರಕಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಳೆಯಿಂದ ಕಾರ್ಯಕ್ರಮ ಮುಂದೂಡಲಾಗಿದೆ. ಜುಲೈನಲ್ಲಿ ವಿಧಾನಸಭೆ ಅಧಿ ವೇಶನ ನಡೆಯಲಿದ್ದು, ಈ ಮಧ್ಯೆ ಸಮಯ ನೋಡಿಕೊಂಡು ಜುಲೈ ಮೊದಲನೇ ಅಥವಾ ಎರಡನೇ ವಾರದಲ್ಲಿ ಗ್ರಾಮ ವಾಸ್ತವ್ಯ ನಿಗದಿಪಡಿಸುವುದಾಗಿ ಭರವಸೆ ನೀಡಿದರು.

ಹೆರೂರು ಗ್ರಾಮ ಹಾಗೂ ಸುತ್ತಮುತ್ತಲಿನ ಜನರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರದ ಭರವಸೆ ಹೊಂದಿದ್ದರು. ದೊಡ್ಡಮಟ್ಟದ ನಿರೀಕ್ಷೆ ಹೊಂದಿದ್ದರು. ಆದರೆ, ಅನಿವಾರ್ಯವಾಗಿ ಕಾರ್ಯಕ್ರಮ ಮುಂದೂಡಿರುವುದಕ್ಕೆ ಜನರ ಬಳಿ ಕ್ಷಮೆಯಾಚಿಸುವೆ ಎಂದರು.

ಮಳೆಯ ಕಾರಣ ಕಾರ್ಯಕ್ರಮ ಮುಂದೂಡಿರುವುದಕ್ಕಿಂತ ಹೆಚ್ಚಾಗಿ ಈ ಭಾಗದಲ್ಲಿ ಮಳೆಯಾಗಿರುವುದು ತಮಗೆ ಸಂತಸ ತಂದಿದೆ. ಬಿತ್ತನೆ ವೇಳೆಯಲ್ಲಿ ಮಳೆ ಸುರಿದಿರುವುದು ರೈತರಿಗೆ ಆಶಾದಾಯಕವಾಗಿದೆ. ಪ್ರಕೃತಿಯ ಸಹಕಾರ ದೊರೆತಿದೆ ಎಂದರು.

ತಕ್ಷಣವೇ ಕ್ರಮ: ಚಂಡರಕಿಯಲ್ಲಿ ಜನಸ್ಪಂದನ ವೇಳೆ ಸಿವಿಲ್‌ ವ್ಯಾಜ್ಯಗಳನ್ನು ಹೊರತುಪಡಿಸಿ ಶಾಲಾ ಕಟ್ಟಡ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಫಲಾನುಭವಿಗಳ ಕೆಲ ಅರ್ಜಿಗಳು ಬಂದಿದ್ದು, ಪ್ರಮುಖವಾಗಿ ಯುವಕರು ಉದ್ಯೋಗ ಕಲ್ಪಿಸಲು ಮನವಿ ಸಲ್ಲಿಸಿದ್ದಾರೆ. ಅಂಗವಿಕಲರು, ಮಹಿಳೆಯರ ಕೆಲವು ಅರ್ಜಿ, ಆಕಸ್ಮಿಕವಾಗಿ ಚಿಕ್ಕ ವಯಸ್ಸಿನಲ್ಲಿ ಗಂಡ ಇಲ್ಲದೇ ಅನಾನುಕೂಲವಾಗಿ ಉದ್ಯೋಗ ಕೊಡಿಸುವಂತೆ ಮನವಿಗಳು ಬಂದಿವೆ.

Advertisement

ಸಾಧ್ಯವಾದಷ್ಟು ಮಟ್ಟಿಗೆ ಖಾಸಗಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಹಲವು ಹಳ್ಳಿಗಳ ರಸ್ತೆ ನಿರ್ಮಾಣಕ್ಕೆ ಮನವಿ ಬಂದಿದ್ದು, ತಕ್ಷಣದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದರು.

ಈಗಾಗಲೇ ಚಂಡರಕಿಯಲ್ಲಿ ಹಿರಿಯ ಅಧಿ ಕಾರಿಗಳು, ಸಚಿವರು, ಶಾಸಕರು ಎಲ್ಲರ ಜತೆಗೂಡಿ ಜನಸಾಮಾನ್ಯರ ಮನವಿ ಸ್ವೀಕರಿಸಿ, ಎಲ್ಲವನ್ನೂ ವಿಂಗಡಿಸಿ ಸಮಸ್ಯೆಗಳನ್ನು ಬೇರ್ಪಡಿಸಲಾಗಿದೆ. ಇಲಾಖಾವಾರು ಪರಿಮಿತಿಯಲ್ಲಿ ಪರಿಹಾರಕ್ಕೆ ಜಿಲ್ಲಾಧಿಕಾರಿಗಳು ತೀರ್ಮಾನ ಮಾಡಲಿದ್ದಾರೆ ಎಂದರು.

ಅದ್ಧೂರಿ ಸಿದ್ಧತೆ ಬಯಸಿಲ್ಲ: ಗ್ರಾಮ ವಾಸ್ತವ್ಯಕ್ಕೆ ದೊಡ್ಡ ಅದ್ಧೂರಿಯ ಸಿದ್ಧತೆಗಳನ್ನೇನೂ ಬಯಸಿಲ್ಲ. ಎರಡು ಫ್ಯಾನ್‌, ನೆಲದ ಮೇಲೆ ಚಾಪೆ ಹಾಸಿ ಮಲಗಿದ್ದೇನೆ. ನಾನು ಜನಸಾಮಾನ್ಯರ ಜತೆ ಇರುವವನಾಗಿದ್ದು, ಶಾಲೆಗಳ ಅಭಿವೃದ್ಧಿ ಉದ್ದೇಶದಿಂದ ಶಾಲೆಯಲ್ಲಿ ವಾಸ್ತವ್ಯ ಮಾಡಿದ್ದೇನೆ. ವಿದ್ಯಾರ್ಥಿಗಳೊಂದಿಗೆ ಊಟ ಮಾಡಿದ್ದೇನೆ. ಮಕ್ಕಳು ಖುಷಿ ಪಟ್ಟಿದ್ದಾರೆ.

ಶಾಲಾ ವಾಸ್ತವ್ಯದಿಂದ ಮಕ್ಕಳಿಗೆ ಉತ್ತೇಜನ ದೊರೆತು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ತಿಳಿಸಿದರು. ನೀರು ಹಂಚಿಕೆ ವಿಷಯ ಕುರಿತು ಪ್ರಸ್ತಾಪಿಸಿದ ಅವರು, ಈ ವಿಷಯದಲ್ಲಿ ರಾಜಕೀಯ ಮಾಡಬಾರದು. ಅಕ್ಕಪಕ್ಕದ ರಾಜ್ಯಗಳು ಸೌಹಾರ್ದಯುತವಾಗಿರಬೇಕು. ಕೊಟ್ಟು ತೆಗೆದುಕೊಳ್ಳುವ ನೀತಿ ಅನುಸರಿಸಬೇಕು. ಒಟ್ಟಿನಲ್ಲಿ ಅಭಿವೃದ್ಧಿ ಮುಖ್ಯ ಎಂದು ಹೇಳಿದರು.

ರಾಜ್ಯದಲ್ಲಿ ನೇಕಾರರ ಹಾಗೂ ಬಡತನದ ಸಮಸ್ಯೆಗಳ ಅರಿವಿದೆ. ಮೀನುಗಾರರ ಸಮಸ್ಯೆ ಬಗ್ಗೆಯೂ ಗೊತ್ತಿದೆ. ಜನರ ನಿರೀಕ್ಷೆ ತಲುಪಲು ಸರ್ಕಾರ ಸಾಧ್ಯವಾದಷ್ಟು ಶ್ರಮಿಸಲಿದೆ.
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next