Advertisement

Politics: ಧರಣಿಗೆ ಬನ್ನಿ: ಸಂಸದರು, ರಾಜ್ಯಸಭಾ ಸದಸ್ಯರಿಗೆ ಸಿಎಂ ಪತ್ರ

11:10 PM Feb 06, 2024 | Team Udayavani |

ಬೆಂಗಳೂರು: ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ರಾಜ್ಯ ಸರಕಾರವು ಕೇಂದ್ರದ ವಿರುದ್ಧ ಸಾರಿರುವ ಕರ ಸಮರ ಈಗ ದೇಶದ ಗಮನ ಸೆಳೆಯುತ್ತಿದೆ. ಈ ಮಧ್ಯೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸ್ವತಃ ಕೇಂದ್ರದ ಹಣಕಾಸು ಸಚಿವೆ ಹಾಗೂ ಅನುದಾನ ಹಂಚಿಕೆ ವಿವಾದದ ಕೇಂದ್ರ ಬಿಂದು ನಿರ್ಮಲಾ ಸೀತಾರಾಮನ್‌ ಮತ್ತು ಬಿಜೆಪಿ ಮೈತ್ರಿ ಪಕ್ಷ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಸೇರಿದಂತೆ ರಾಜ್ಯದ ಎಲ್ಲ ಸಂಸದರು, ರಾಜ್ಯಸಭಾ ಸದಸ್ಯರಿಗೆ ಖುದ್ದು ಪತ್ರ ಬರೆದಿದ್ದಾರೆ. ರಾಜ್ಯಕ್ಕಾಗುತ್ತಿರುವ ಅನ್ಯಾಯ ಖಂಡಿಸಿ ದಿಲ್ಲಿಗೆ ಹೋಗೋಣ, ಬನ್ನಿ ಕೇಳ್ಳೋಣ ಎಂದು ಆಹ್ವಾನ ನೀಡಿದ್ದಾರೆ.

Advertisement

ಎಲ್ಲ ಸಂಸದರು, ರಾಜ್ಯದಿಂದ ಆಯ್ಕೆಯಾದ ರಾಜ್ಯಸಭೆ ಸದಸ್ಯರೆಲ್ಲರಿಗೂ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚುಟುಕಾಗಿ ಪತ್ರ ಬರೆದಿದ್ದು, ಅದರಲ್ಲಿ ಕೇಂದ್ರದ ವಿರುದ್ಧ ಆಗುತ್ತಿರುವ ಅನ್ಯಾಯದ ಬಗ್ಗೆ ಗಮನಸೆಳೆದಿದ್ದಾರೆ. ರಾಜ್ಯದ ಬಗ್ಗೆ ಕೇಂದ್ರದ ಧೋರಣೆ ಖಂಡಿಸಿ ಬುಧವಾರ ದೆಹಲಿಯಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ. ತಾವೂ ಪಾಲ್ಗೊಂಡು ಅದರ ಯಶಸ್ಸಿಗೆ ನೆರವಾಗಬೇಕು ಅಂತ ರಾಜ್ಯದ ಸಮಸ್ತ ಜನತೆಯ ಪರವಾಗಿ ವಿನಂತಿಸುತ್ತೇನೆ’ ಎಂದು ಮನವಿ ಮಾಡಿದ್ದಾರೆ.

ಅದರಲ್ಲೂ ಮುಖ್ಯವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಸಚಿವರಾದ ನಿರ್ಮಲಾ ಸೀತಾರಾಮನ್‌, ರಾಜೀವ್‌ ಚಂದ್ರಶೇಖರ್‌, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಸೇರಿ ಬಿಜೆಪಿಯಿಂದ ಆಯ್ಕೆಯಾದ ರಾಜ್ಯಸಭೆ ಸದಸ್ಯರಿಗೆ ಆಹ್ವಾನ ನೀಡಿರುವುದು ವಿಶೇಷ. ಉಳಿದಂತೆ ಸಂಸದರೆಲ್ಲರಿಗೂ ಈ ಆಹ್ವಾನ ನೀಡಲಾಗಿದೆ.

ಮುಖ್ಯಮಂತ್ರಿಗಳು ಬರೆದ ಪತ್ರದ ಸಾರ…

ಮಾನ್ಯರೇ, ಒಂದು ವಿಶೇಷ ಸಂದರ್ಭದಲ್ಲಿ ಈ ಪತ್ರವನ್ನು ಬರೆಯುತ್ತಿದ್ದೇನೆ.

Advertisement

ಕೇಂದ್ರ ಸರ್ಕಾರದಿಂದ ಆಗುತ್ತಿರುವ ನಿರಂತರ ಅನ್ಯಾಯ ಮತ್ತು ಕರ್ನಾಟಕದ ವಿಚಾರವಾಗಿ ಕೇಂದ್ರ ಸರ್ಕಾರವು ತೋರುತ್ತಿರುವ ಮಲತಾಯಿ ಧೋರಣೆಯು ತಮಗೆ ಈಗಾಗಲೇ ತಿಳಿದ ವಿಷಯವಾಗಿರುತ್ತದೆ. ಇದರ ವಿರುದ್ಧ ಪ್ರತಿಭಟಿಸಲು ಮತ್ತು ದೇಶದ ಗಮನಸೆಳೆಯಲು ತೀರ್ಮಾನಿಸಲಾಗಿದೆ. ರಾಜ್ಯದ ಉಪ ಮುಖ್ಯಮಂತ್ರಿಗಳು, ಎಲ್ಲ ಸಚಿವರು, ಶಾಸಕರು ಮತ್ತು ಸಂಸದರು ಸೇರಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಫೆ. 7ರಂದು ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದೇವೆ.

ಕರ್ನಾಟಕಕ್ಕೆ ತೆರಿಗೆ ಪಾಲಿನ ಹಂಚಿಕೆಯಲ್ಲಿ ಆಗುತ್ತಿರುವ ಭಾರೀ ಅನ್ಯಾಯ, ಬರ ಪರಿಹಾರ ನೀಡದಿರುವುದು, ವಿವಿಧ ಯೋಜನೆಗಳಿಗೆ ಅನುಮತಿ ಮತ್ತು ನೆರವು ನೀಡುವಲ್ಲಿ ತೋರುತ್ತಿರುವ ನಿರ್ಲಕ್ಷ್ಯ ಮತ್ತು ವಿಳಂಬ ಇತ್ಯಾದಿಗಳು ರಾಜ್ಯದಲ್ಲಿ ಜನಜೀವನವನ್ನು ವಿಪರೀತವಾಗಿ ಬಾಧಿಸುತ್ತಿವೆ. ಈ ವಿಚಾರವನ್ನು ಜವಾಬ್ದಾರಿಯುತ ಚುನಾಯಿತ ಪ್ರತಿನಿಧಿಗಳಾದ ತಾವು ಅರಿತೇ ಇರುತ್ತೀರಿ. ಆದುದರಿಂದ ಈ ಧರಣಿ ಸತ್ಯಾಗ್ರಹದಲ್ಲಿ ತಾವು ಕೂಡ ಪಾಲ್ಗೊಂಡು ಅದರ ಯಶಸ್ಸಿಗೆ ನೆರವಾಗಬೇಕು ಎಂದು ತಮ್ಮಲ್ಲಿ ಕರ್ನಾಟಕದ ಸಮಸ್ತ ಜನತೆಯ ಪರವಾಗಿ ವಿನಂತಿಸುತ್ತೇನೆ.

ಧನ್ಯವಾದಗಳೊಂದಿಗೆ

ಇತಿ ತಮ್ಮ ವಿಶ್ವಾಸದ
ಸಿದ್ದರಾಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next