ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಹೆಲಿಕಾಪ್ಟರ್ ಜಾಯ್‌ರೈಡ್ ಲಲಿತ ಮಹಲ್ ಹೆಲಿಪ್ಯಾಡಿನಿಂದ ಶನಿವಾರ ಆರಂಭವಾಯಿತು. ಶಾಸಕ ಎಂ.ಕೆ.ಸೋಮಶೇಖರ್ ಟೇಪು ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ, ಮೈಸೂರು ಮಹಾ ನಗರಪಾಲಿಕೆ ಆಯುಕ್ತ ಜಿ.ಜಗದೀಶ್, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾರ್ದನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು ಮತ್ತು ಪವನ್ ಹನ್ಸ್ ಲಿಮಿಟೆಡ್‌ನ ಜಾnನಪ್ರಕಾಶ್ ಉಪಸ್ಥಿತರಿದ್ದರು.
ಮೊದಲ ಹಾರಾಟದಲ್ಲಿ ಶಾಸಕ ಎಂ.ಕೆ.ಸೋಮಶೇಖರ್, ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್, ಪಾಲಿಕೆ ಆಯುಕ್ತ ಜಿ. ಜಗದೀಶ ಹಾಗೂ ಎಸ್.ಪಿ ರವಿ ಡಿ.ಚನ್ನಣ್ಣನವರ ಆಗಸದಿಂದ ಮೈಸೂರಿನ ವಿಹಂಗಮ ನೋಟ ಸವಿದರು.
ಈ ಬಾರಿ ಪವನ್ ಹನ್ಸ್ ಲಿಮಿಟೆಡ್ ಮತ್ತು ಚಿಪ್ಸನ್ ಏವಿಯೇಷನ್ ಲಿಮಿಟೆಡ್ ಹೆಲಿಕಾಪ್ಟರ್ ರೈಡ್ ಸಂಘಟಿಸಿದ್ದು, ಅ. 5ರವರೆಗೂ ಜಾಯ್‌ರೈಡ್ ನಡೆಯಲಿದೆ. ವಯಸ್ಕರಿಗೆ 2,300ರೂ., ವಿಶೇಷ ಚೇತನರು ಹಾಗೂ 6 ವರ್ಷದೊಳಗಿನ ಮಕ್ಕಳಿಗೆ 2,200ರೂ. ನಿಗದಿಪಡಿಸಲಾಗಿದೆ.
ಆನ್‌ಲೈನ್ ಮೂಲಕ ಮತ್ತು ಲಲಿತ ಮಹಲ್ ಹೆಲಿಪ್ಯಾಡ್‌ನಲ್ಲಿಯೂ ಟಿಕೆಟ್ ಪಡೆಯಬಹುದಾಗಿದೆ. ಮೈಸೂರಿನ ಹಸಿರು ವಾತಾವರಣ, ವಿಶಾಲವಾದ ರಸ್ತೆಗಳು, ಭವ್ಯವಾದ ಅರಮನೆ ಎಲ್ಲವೂ ಆಗಸದಿಂದಲೂ ಸುಂದರವಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್ ವಿಶಿಷ್ಟ ಅನುಭವ ಹಂಚಿಕೊಂಡರು.
ಮೈಸೂರು ಸ್ವಚ್ಛ ನಗರಿ, ಇದರ ಸಾಕ್ಷಾತ್ ದರ್ಶನ ಹೆಲಿಕಾಪ್ಟರ್ ರೈಡ್‌ನಲ್ಲಿ ನೋಡುವ ಅವಕಾಶ ದೊರೆಯಿತು. ಪಾರಂಪರಿಕ ಕಟ್ಟಡಗಳು ಬಹಳ ಸುಂದರವಾಗಿದೆ. ಅರಮನೆ, ಪಾಲಿಕೆ ಮತ್ತು ಬಹಳಷ್ಟು ಕಟ್ಟಡಗಳು ಮನಮೋಹಕವಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಜಿ.ಜಗದೀಶ ಅಭಿಪ್ರಾಯಪಟ್ಟರೆ, ರವಿ ಚನ್ನಣ್ಣನವರ, ಅವಿಸ್ಮರಣೀಯ ಅನುಭವ, ಮೈಸೂರಿನ ಅಂದ ಚಂದ ಬಹಳ ಸುಂದರ ಎಂದು ಬಣ್ಣಿಸಿದರು.