Advertisement
“ಅಮ್ಮಾ, ಪಪ್ಪ ಎಲ್ಲಿದ್ದಾರೆ? ಎಲ್ಲರ ಅಪ್ಪಂದಿರಂತೆ ನಮ್ಮಪ್ಪ ಯಾಕೆ ಮನೆಗೆ ಬರೋಲ್ಲ?’ ಅಮ್ಮನತ್ತ ತೂರಿ ಬಂತು ಪ್ರಶ್ನೆ. “ನೋಡು ಪುಟ್ಟಾ… ಬೇರೆಯವರೆಲ್ಲ ಹತ್ತಿರದ ಆಫೀಸ್‌ಗಳಲ್ಲಿ ಕೆಲಸ ಮಾಡ್ತಾರೆ. ಆದರೆ, ನಿನ್ನಪ್ಪ ದೂರದ ಗಡಿಯಲ್ಲಿ ಇಡೀ ದೇಶಾನ ಕಾಯ್ತಾ ಇದ್ದಾರೆ. ಅಲ್ಲಿಂದ ಮನೆಗೆ ಬರೋಕೆ ತುಂಬಾ ದೂರ ಆಗುತ್ತೆ ಕಣೋ…’
Related Articles
Advertisement
2005ರ ಮೇ 18- 19ರಂದು ನಮ್ಮ ಮದ್ವೆ ಆಯಿತು. ಮದ್ವೆಗೆ ಒಂದು ವಾರ ಬಾಕಿ ಇರುವಾಗ ಅವರು ಎರಡು ತಿಂಗಳು ರಜೆ ಹಾಕಿ ಊರಿಗೆ ಬಂದರು. ಮದ್ವೆ ರಜೆ ಮುಗಿಸಿ, ವಾಪಸ್ ಜಮ್ಮುವಿಗೆ ಹೋದರು. ನಾನು ಅಮ್ಮನ ಮನೆಯಲ್ಲೇ ಉಳಿದುಕೊಂಡೆ. ನಿತ್ಯವೂ ಅವರಿಂದ ಕಾಲ್ ಬರುತ್ತಿರಲಿಲ್ಲ. ಫೋನ್ ಮಾಡಿದಾಗಲೆಲ್ಲ ಗಡಿಬಿಡಿಯಲ್ಲೇ ಮಾತಾಡುತ್ತಿದ್ದರು. “ತುಂಬಾ ಜನ ಮಾತಾಡಲು ಕಾಯುತ್ತಿದ್ದಾರೆ, ಇನ್ನೊಮ್ಮೆ ಮಾತಾಡ್ತೀನಿ’ ಅಂತ ಫೋನ್ ಇಟ್ಟು ಬಿಡುತ್ತಿದ್ದರು. ನನಗೆ ಅವರ ಜತೆ ಜಾಸ್ತಿ ಹೊತ್ತು ಮಾತಾಡಬೇಕು ಅನಿಸುತ್ತಿತ್ತು. ಆದರೆ, ಆಗುತ್ತಿರಲಿಲ್ಲ. ಪತ್ರ ಬರೆಯುತ್ತಿದ್ದುದೂ ಕಡಿಮೆಯೇ.
ಡೀಯಾ ಹುಟ್ಟಿದಳು…ಒಂದು ವರ್ಷದ ನಂತರ, ಅಂದರೆ 28-6-2006ರಂದು ನಮ್ಮ ಪುಟ್ಟ ಜಗತ್ತಿಗೆ ಮಗಳು ಬಂದಳು. ಆಗ ಅವರು ರಜೆ ಹಾಕಿ ಬಂದಿದ್ದರು. ಜಾಸ್ತಿ ದಿನ ರಜೆ ಇರಲಿಲ್ಲ. ಹಾಗಾಗಿ, ಸಣ್ಣ ಸಮಾರಂಭ ಮಾಡಿ ಮಗುವಿಗೆ “ಡೀಯಾ’ ಅಂತ ಹೆಸರಿಟ್ಟೆವು. ರಜೆ ಮುಗಿಸಿ, ಮತ್ತೆ ಹೊರಟರು. ಈ ಬಾರಿ ನಾನೂ, ಮಗಳೂ ಅವರನ್ನು ಕಳಿಸಿಕೊಟ್ಟೆವು. ದಿಯಾಳ ಒಂದು ವರ್ಷದ ಬರ್ತ್‌ಡೇಗೆ ಬಂದಿದ್ದರು. ಖುಷಿಯಿಂದ ಮಗಳ ಹುಟ್ಟುಹಬ್ಬ ಆಚರಿಸಿದೆವು. 2007ರ ಜುಲೈ 13ರಂದು ವಾಪಸ್ ಹೊರಟರು. ಜಮ್ಮು ತಲುಪಿದಾಗ ಕಾಲ್ ಮಾಡಿದ್ದರು. ಆಮೇಲೆ ಏನೇನಾಯೆ¤ಂದು ನನಗೆ ಸರಿಯಾಗಿ ಗೊತ್ತಿಲ್ಲ. ನಾರ್ಮಲ್ ಆಗೇ ಮಾತಾಡಿದ್ರು…
ಜುಲೈ 20ರಂದು ಅವರಿಂದ ಫೋನ್ ಬಂತು. “ಇಲ್ಲಿ ಹಿಮಪಾತ ಆಗ್ತಾ ಇದೆ. ಕಾಲಿಗೆ ಫ್ರ್ಯಾಕ್ಚರ್ ಆಗಿದೆ. ಕಮಾಂಡ್ ಹಾಸ್ಪಿಟಲ್ ಉಧಂಪುರ್‌ನಲ್ಲಿದ್ದೇನೆ. ಇನ್ನು ಯಾವತ್ತು ಕಾಲ್ ಮಾಡ್ತೀನೋ ಗೊತ್ತಿಲ್ಲ. ಫೋನಿಗಾಗಿ ಕಾಯಬೇಡ’ ಅಂದರು. ನಾನದನ್ನು ನಿಜವೆಂದೇ ನಂಬಿದೆ. ಯಾಕಂದ್ರೆ, ಅವರು ತುಂಬಾ ನಾರ್ಮಲ್ ಆಗಿ ಮಾತಾಡಿದ್ರು. ಬೇಗ ಹುಷಾರಾಗಲಿ ಅಂತ ನಾನು ದೇವರಲ್ಲಿ ಪ್ರಾರ್ಥಿಸುತ್ತಾ ಇದ್ದೆ. ಆದರೆ, ನನ್ನ ತಮ್ಮನಿಗೆ ಡೌಟ್ ಬಂದಿತ್ತು. “ನ್ಯೂಸ್ ಚಾನೆಲ್‌ಗಳಲ್ಲಿ ಫೂಂಚ್‌ನಲ್ಲಿ ಶೂಟೌಟ್ ಆಗಿದೆ ಅಂತ ಬರಿ¤ದೆ’ ಅಂದ. ನನಗೆ ಗಾಬರಿಯಾದ್ರೂ, ಇವರಿಗೇನೂ ಆಗಿಲ್ಲ ಅಂತ ನಂಬಿದ್ದೆ. ಅತ್ತೆ ಮನೆಯವರು ಕೂಡ ಏನೂ ಆಗಿಲ್ಲ ಅಂತಾನೇ ಹೇಳಿದ್ರು. ಆದರೆ, ಅಲ್ಲಿ ನಡೆದದ್ದೇ ಬೇರೆ. ಒಂದು ಟೆಲಿಗ್ರಾಮ್ ಬಂತು…
ಎರಡು ದಿನದ ನಂತರ (ಜು.22) ಅತ್ತೆ ಮನೆಯ ಅಡ್ರೆಸ್‌ಗೆ ಟೆಲಿಗ್ರಾಂ ಬಂತು. ಮಿಲಿಟರಿ ಜೀಪಿನಲ್ಲಿ ಹೋಗುತ್ತಿದ್ದಾಗ ವಾಹನದ ಮೇಲೆ ದಾಳಿ ನಡೆದಿದ್ದು, ನಮ್ಮವರು ಆಸ್ಪತ್ರೆ ಸೇರಿದ್ದಾರೆ ಅಂತ ಗೊತ್ತಾಯ್ತು. ನಾನು ಆಸ್ಪತ್ರೆಗೆ ಫೋನ್ ಮಾಡಿದೆ, ಕಾಲ್ ಕನೆಕ್ಟ್ ಮಾಡೋಕಾಗಲ್ಲ ಅಂತ 15 ನಿಮಿಷದ ನಂತರ ಆ ಕಡೆಯಿಂದ ಉತ್ತರ ಬಂತು. ನನ್ನಲ್ಲಿ ಉಳಿದಿದ್ದ ಧೈರ್ಯವೆಲ್ಲಾ ಉಡುಗಿ ಹೋಯ್ತು. ಅವರಿಗೇನೂ ಆಗದೇ ಇರಲಿ ಅಂತ ನಾನು ಊಟ, ನಿದ್ದೆ ಬಿಟ್ಟು ಪ್ರಾರ್ಥಿಸಿದೆ. “ಕಾಲು ಮುರಿದಿದೆ’ ಅಂದಷ್ಟೇ ಆರ್ಮಿ ಕಡೆಯವರು ಹೇಳಿದ್ರು. ಆದರೆ, ಅವರಿಗೆ ಅಲ್ಲಿ ಗಂಭೀರ ಗಾಯಗಳಾಗಿದ್ದವು. ಜು.24ಕ್ಕೆ ಮತ್ತೆ ಸೇನೆಯಿಂದ ಫೋನ್; “ಜಮ್ಮುವಿಗೆ ಬರ್ಬೇಕು’ ಅಂತ. ತಕ್ಷಣ ಬೆಂಗಳೂರಿಗೆ ಹೊರಟೆವು. ಆದರೆ, ಮೈಸೂರು ತಲುಪೋಷ್ಟರಲ್ಲಿ “ಅವರಿಲ್ಲ’ ಅಂತ ಮೆಸೇಜ್ ಸಿಕ್ಕಿತ್ತು! ಜು.26ಕ್ಕೆ ಅವರ ಪಾರ್ಥಿವ ಶರೀರ ಕೊಡಗಿಗೆ ಬಂತು. ಒಂದು ತಿಂಗಳಾದ ಮೇಲೆ ಅವರ ಶೂ, ಯೂನಿಫಾರ್ಮ್, ನಾನು ಕಳಿಸಿದ ಲೆಟರ್‌ಗಳಿದ್ದ ಬಾಕ್ಸ್ ಬಂತು. ಅವರ ನೆನಪಿಗೆ ಅಂತ ನಮ್ಮಿಬ್ಬರ ಪಾಲಿಗೆ ಉಳಿದಿರೋದು ಅವು ಮಾತ್ರ… ಮಗಳು ಹುಟ್ಟಿದ ಮೇಲೆ ನಾನು ಕೆಲಸ ಬಿಟ್ಟಿದ್ದೆ. ಆದರೀಗ ಅವಳ ಸಂಪೂರ್ಣ ಜವಾಬ್ದಾರಿ ನನ್ನೊಬ್ಬಳದೇ. ನಾನು ಎದ್ದು ನಿಲ್ಲಲೇಬೇಕಿತ್ತು. ಅವರು ಹೋದ ಒಂದು ತಿಂಗಳಿಗೇ ಎಂಬಿಎ ಪ್ರವೇಶ ಪರೀಕ್ಷೆ ಬರೆದು ಪಾಸ್ ಮಾಡಿದೆ. ಡೀಯಾಳನ್ನೂ ನೋಡಿಕೊಳ್ಳಬೇಕಿತ್ತು. ಅವಳು ಮಲಗಿದ ಮೇಲೆ ನಾನು ಎದ್ದು ಓದಲೂ ಬೇಕಿತ್ತು. ಆಮೇಲೆ ಎರಡು ವರ್ಷ ಕರೆಸ್ಪಾಂಡೆನ್ಸ್‌ನಲ್ಲಿ ಎಂಬಿಎ ಮುಗಿಸಿದೆ. ಈಗ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಡೀಯಾ ಈಗ 6ನೇ ತರಗತಿ ಓದುತ್ತಿದ್ದಾಳೆ. ಅವರು ನನ್ನೊಂದಿಗಿಲ್ಲ ಎಂಬ ಭಾವ ನನ್ನನ್ನು ಒಮ್ಮೆಯೂ ಕಾಡಿಲ್ಲ. ಭೌತಿಕವಾಗಿ ಇರದಿದ್ದರೂ ಅವರು ನನ್ನ ಜತೆಗೇ ಇದ್ದಾರೆ. ಅಮ್ಮಾ, ಅಪ್ಪ ಎಲ್ಲಿ…?
ಅವರು ತೀರಿಕೊಂಡಾಗ ಮಗಳಿಗೆ ಒಂದು ವರ್ಷವಾಗಿತ್ತು. ಮೂರೇ ಮೂರು ಸಲ ಅಪ್ಪನ ಮುಖ ನೋಡಿದ್ದಾಳೆ. ಅದೂ ಅವಳಿಗೆ ಜ್ಞಾಪಕವಿಲ್ಲ. ಮೂರು ವರ್ಷವಾಗಿದ್ದಾಗ ಡೀಯಾ ಮೊದಲ ಬಾರಿಗೆ ಅಪ್ಪನ ಬಗ್ಗೆ ಕೇಳಿದ್ದಳು. ಎಷ್ಟು ದಿನಾ ಅಂತ ಸತ್ಯ ಮುಚ್ಚಿಡಲು ಸಾಧ್ಯ? ದೊಡ್ಡವಳಾದ ಮೇಲೆ ಅವಳಿಗೆ ಸಹಜವಾಗಿ ವಿಷಯ ಗೊತ್ತಾಯ್ತು. ಅವಳು ಅವರ ಬಗ್ಗೆ ಕೇಳುವುದನ್ನು ನಿಲ್ಲಿಸಿದಳು. ಅವರು ಹೋದಾಗ ರಾಜ್ಯ ಸರಕಾರ 2 ಲಕ್ಷ ನೀಡಿತ್ತು. ಈಗ ಡಿಫೆನ್ಸ್‌ನವರಿಂದ ಪೆನ್ಶನ್ ಬರುತ್ತಿದೆ. ಅದನ್ನು ಬಿಟ್ಟರೆ ಬಿಡಿಎ ಸೈಟ್, ಸರಕಾರಿ ಕೆಲಸ ಯಾವುದೂ ಸಿಕ್ಕಿಲ್ಲ. ಬಿಡಿಎ ಸೈಟ್ ವಿಚಾರವಾಗಿ ಸೈನಿಕ್ ಬೋರ್ಡ್‌ನವರು ನನಗೆ ಸಹಾಯ ಮಾಡುತ್ತಿದ್ದಾರೆ. ಡೀಯಾಳಿಗೆ ಸಿಗುವ ಸ್ಕಾಲರ್‌ಶಿಪ್ ಅನ್ನೂ ನಾನು ಪಡೆಯುತ್ತಿಲ್ಲ. ಅವಳನ್ನು ನಾನೇ ಸಾಕುತ್ತೇನೆ. ಮಗಳನ್ನು ಆರ್ಮಿ ಡಾಕ್ಟರ್ ಮಾಡುವೆ…
ನಾನು ಗರ್ಭಿಣಿಯಾಗಿದ್ದಾಗ ನಾವಿಬ್ಬರು ಭವಿಷ್ಯದ ಬಗ್ಗೆ ಹಲವು ಕನಸುಗಳನ್ನು ಕಂಡಿದ್ದೆವು. ಗಂಡಾಗಲಿ, ಹೆಣ್ಣಾಗಲೀ… ಒಂದೇ ಮಗು ಸಾಕೆಂದು ಅವರು ಹೇಳಿದ್ದರು. ಮಗಳು ಹುಟ್ಟಿದರೆ ಅವಳನ್ನು ಆರ್ಮಿ ಡಾಕ್ಟರ್ ಓದಿಸಬೇಕು. ಮಗನಾದರೆ, ಹಾಕಿ ಆಟಗಾರನಾಗಬೇಕು. ನಂತರ ಅವನೂ ಸೈನ್ಯ ಸೇರಬೇಕೆಂದು ಬಯಸಿದ್ದರು. 15 ವರ್ಷ ಸೇವೆ ಸಲ್ಲಿಸಿದ ನಂತರ ಸೇನೆಯಿಂದ ನಿವೃತ್ತಿ ಪಡೆಯಿರಿ ಎಂದು ಹೇಳಿದ್ದೆ. ಅವರದಕ್ಕೆ ತಯಾರಿರಲಿಲ್ಲ. ಹಾಗಾಗಿ, ನಾನೇ ಅವರಿದ್ದಲ್ಲಿಗೆ ಹೋಗಬೇಕೆಂದುಕೊಂಡಿದ್ದೆ. ಅದನ್ನು ಅವರಿಗೆ ಹೇಳಲೂ ಆಗಲಿಲ್ಲ. ಎಲ್ಲ ಸೈನಿಕರ ಮಡದಿಯರಂತೆ ಅಡುಗೆ ಕಲಿತು, ಅವರ ಸೈನಿಕ ಗೆಳೆಯರ ಮೂಲಕ ಅವರಿಗೆ ಸ್ನ್ಯಾಕ್ಸ್ ಕಳಿಸಿಕೊಡಬೇಕೆಂದು ಕನಸು ಕಂಡಿದ್ದೆ. ಯಾವುದೂ ನೆರವೇರಲಿಲ್ಲ. ಅವರಾಸೆಯಂತೆಯೇ ಡೀಯಾಳನ್ನು ಆರ್ಮಿ ಡಾಕ್ಟರ್ ಮಾಡಿಸುತ್ತೇನೆ. ನನ್ನ ಹಾಗೆ ಅನೇಕ ಮಹಿಳೆಯರಿದ್ದಾರೆ. ಅವರಿಗೆ ನಾನು ಹೇಳುವುದಿಷ್ಟೇ; ನಮ್ಮವರನ್ನು ಕಳೆದುಕೊಂಡೆವೆಂದು ಕೊರಗುವುದರಲ್ಲಿ ಅರ್ಥವಿಲ್ಲ. ಮಕ್ಕಳ ಭವಿಷ್ಯದಲ್ಲಿ ಅವರ ಕನಸನ್ನು ನನಸಾಗಿಸೋಣ. ನನ್ನವರು ದೇಶ ರಕ್ಷಣೆಯಲ್ಲಿ ಪ್ರಾಣತ್ಯಾಗ ಮಾಡಿದ್ದಾರೆ ಎಂದು ನನಗೆ ತುಂಬಾ ಹೆಮ್ಮೆಯಿದೆ… ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳು ಸೈನಿಕರ ಮೇಲೆ ಕಲ್ಲು ತೂರಿದಾಗ ತುಂಬಾ ಸಿಟ್ಟು ಬರುತ್ತೆ. ನಾವೇ ಹೋಗಿ ಅವರೊಂದಿಗೆ ಹೋರಾಟ ಮಾಡೋಣ ಅಂತನ್ನಿಸುತ್ತೆ.
ನನ್ನ ದೇವರು ಬರೆದ ಪತ್ರ ಡಿಯರ್ ಆಶಾ, 04-08-2005
ಪ್ರೀತಿಯ ಆಶಾಳಿಗೆ ಪತ್ರದ ಮೂಲಕ ರಮೇಶ್ ಬರೆದು ತಿಳಿಸುವ ಆಶೀರ್ವಾದಗಳು. ನಾನು ಇಲ್ಲಿ ಆರೋಗ್ಯದಿಂದ ಇರುವೆನು. ಅದೇ ರೀತಿ ನೀನು, ಅತ್ತೆ- ಮಾವ, ಹರೀಶ್ ಮತ್ತು ರವಿ ಆರೋಗ್ಯದಿಂದಿರುವಿರೆಂದು ನಂಬಿರುತ್ತೇನೆ. ನೀನು 20ರಂದು ಕಳುಹಿಸಿದ ಫೋಟೊ ನನ್ನ ಕೈ ಸೇರಿವೆ ಜತೆಗೆ ಲೆಟರ್ ಕೂಡ. ಅದನ್ನು ಕಷ್ಟದಲ್ಲಿ ಬರೆದ ಹಾಗಿತ್ತು. ಏಕೆ ನಿನಗೆ ಅಲ್ಲಿ ತುಂಬಾ ತೊಂದರೆಯೇ? ಆಶಾ, ನನಗೆ ಇಲ್ಲಿ ಫೋನ್ ಕಾಲ್ ಮಾಡಲೂ ಟೈಂ ಸಿಗುವುದಿಲ್ಲ. ಅಡ್ಜಸ್ಟ್ ಮಾಡಿ ಫೋನ್ ಮಾಡಲು ಟ್ರೈ ಮಾಡಿದರೆ ಲೈನ್ ಕ್ಲಿಯರ್ ಇರುವುದಿಲ್ಲ. ಆದುದರಿಂದ ನಾನು ಲೆಟರ್ ಬರೆಯುವುದು. ತುಂಬಾ ಸಾರಿ. ನೆಕ್ಸ್ಟ್ ನಿನ್ನ ಲೆಟರ್ ಬಂದಮೇಲೆ ಮತ್ತೆ ಬರೆಯುತ್ತೇನೆ. ಬೆಂಗಳೂರಿನಲ್ಲಿ ಮಳೆ ಇದೆಯಾ ಹೇಗೆ? ಕೊಡಗಿಗೆ ಫೋನ್ ಮಾಡಿದೆಯಾ? ಫೋನ್ ಮಾಡಿದರೆ, ಅವರನ್ನು ತುಂಬಾ ಕೇಳಿದೆ ಎಂದು ಹೇಳು. ಮನೆಯಿಂದ ಬರೆದ ಎರಡು ಲೆಟರ್ ಕೈ ಸೇರಿತು ಎಂದೂ ತಿಳಿಸು. ಆಶಾ, ನನಗೆ ಇಲ್ಲಿ ಒಂದೊಂದು ದಿನ ಕಳೆಯುವುದೂ ತುಂಬಾ ಕಷ್ಟ ಆಗುತ್ತಿದೆ. ಮುಂದಿನ ರಜೆಯ ವಿಷಯ ಏನೂ ಹೇಳಲು ಸಾಧ್ಯವಿಲ್ಲ. ನೀನು ಆರೋಗ್ಯ ಸರಿಯಾಗಿ ನೋಡಿಕೋ. ಸಂಡೇ ಡ್ನೂಟಿಗೆ ಹೋಗಬೇಡ. ನಾನು ಈ ತಿಂಗಳು ನಿನ್ನ ಅಕೌಂಟ್‌ಗೆ ಡಿ.ಡಿ. ತೆಗೆದು ಮನೆಗೆ ಕಳುಹಿಸಿದ್ದೇನೆ. ಈ ತಿಂಗಳ 15ರ ಒಳಗೆ ನಿನಗೆ ಅಮೌಂಟ್ ಸಿಗಬಹುದು. ಎಟಿಎಂ ಕಾರ್ಡ್‌ನಿಂದ ಚೆಕ್ ಮಾಡು. ಹಣವನ್ನು ಕ್ಯಾಶ್ ಮಾಡಿಕೊಂಡು ಮನೆಗೆ ಕೊಡುವುದಕ್ಕೆ ಮರೆಯಬೇಡ. ಅತ್ತೆ- ಮಾವ, ಹರೀಶ್, ರವಿಗೆ ನನ್ನ ನಮಸ್ಕಾರ ತಿಳಿಸು. ಇನ್ನೂ ತುಂಬಾ ವಿಷಯವಿತ್ತು. ಆದರೆ, ಇಲ್ಲಿ ಸ್ಥಳವಿಲ್ಲ. ಆದ್ದರಿಂದ ಈ ಪತ್ರವನ್ನು ನಿನ್ನ ಮೇಲಿನ ಪ್ರೀತಿಯಿಂದ ಬರೆದು ಮುಗಿಸುತ್ತೇನೆ.
ಯುವರ್ ಲವಿಂಗ್
ರಮೇಶ್ ಪ್ರಿಯಾಂಕಾ ನಟಶೇಖರ್
ಚಿತ್ರ: ಪ್ರೇಮ್ ಜಯಂತ್ (ಬೀಯಿಂಗ್ ಯೂ)