Advertisement
ಬದುಕು ಸದಾ ಏರಿಳಿತಗಳ ಹಾದಿ. ಅಲ್ಲಿ ಸದಾ ಸವಾಲುಗಳು ಎದುರಾಗುತ್ತವೆ. ಆದರೆ ದಿನೇಶ್ ಕಾರ್ತಿಕ್ ರ ಜೀವನ ಇಂತಹ ಏರಿಳಿತಗಳ ಆಗರ. ಜೀವನದ ಕಷ್ಟವೆಲ್ಲಾ ತನಗೆ ಯಾಕೆ ಎಂದು ಕೊರಗಿ ಕಂಠಪೂರ್ತಿ ಮದ್ಯ ಕುಡಿದು ಬಿದ್ದಿದ್ದ ದಿನೇಶ್ ಇಂದು ಭಾರತೀಯ ತಂಡದ ಪ್ರಮುಖ ಸದಸ್ಯ ಆಗಿದ್ದಾನೆಂದರೆ ಅದು ಸುಲಭದ ಮಾತಲ್ಲ.
Related Articles
Advertisement
2007ರಲ್ಲಿ ಗೆಳತಿ ನಿಖಿತಾ ಜೊತೆಗೆ ಕಾರ್ತಿಕ್ ಹೊಸ ಜೀವನ ಆರಂಭಿಸಿದ್ದರು. ಆ ಸಮಯದಲ್ಲಿ ಕಾರ್ತಿಕ್ ತಮಿಳುನಾಡು ರಣಜಿ ತಂಡದ ಕ್ಯಾಪ್ಟನ್ ಆಗಿದ್ದರು. ಆ ಸಮಯದಲ್ಲಿ ಅವರ ಜೀವನದಲ್ಲಿ ಒಬ್ಬ ವಿಶೇಷ ವ್ಯಕ್ತಿ ಬರುತ್ತಾರೆ. ಆಗ ತಮಿಳುನಾಡು ತಂಡದ ಆಟಗಾರ, ನಂತರ ಭಾರತ ತಂಡದ ಆಡಿದ ಆರಂಭಿಕ ಆಟಗಾರ ಮುರಳಿ ವಿಜಯ್.
ಇತ್ತ ದಿನೇಶ್ ಕಾರ್ತಿಕ್ ಗೆ ವಿವಾಹದ ಬಳಿಕ ಭಾರತೀಯ ತಂಡದಲ್ಲಿ ಅವಕಾಶ ಕಡಿಮೆಯಾಯ್ತು. ಅತ್ತ ಮುರಳಿ ವಿಜಯ್ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುತ್ತಿದ್ದ. ಈ ಸಮಯದಲ್ಲಿ ವಿಜಯ್ ಗೂ ಕಾರ್ತಿಕ್ ಪತ್ನಿ ನಿಖಿತಾಗೂ ಪ್ರೇಮಾಂಕುರವಾಗಿತ್ತು. ಹೌದು, ತಮಿಳುನಾಡು ರಣಜಿ ತಂಡದ ಕ್ಯಾಪ್ಟನ್ ನ ಪತ್ನಿ ಅದೇ ತಂಡದ ಆಟಗಾರನೊಬ್ಬನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಇದು ಎಷ್ಟು ಮಂದುವರಿದಿತ್ತು ಎಂದರೆ ತಮಿಳುನಾಡು ತಂಡದ ಎಲ್ಲಾ ಆಟಗಾರರಿಗೆ ಇದು ತಿಳಿದಿತ್ತು. ಆದರೆ ತನ್ನ ಬೆನ್ನ ಹಿಂದೆ ಇಷ್ಟೆಲ್ಲಾ ಆಗುತ್ತಿದ್ದರೂ ಕಾರ್ತಿಕ್ ಗೆ ಇದ್ಯಾವುದೂ ಗೊತ್ತಿರಲಿಲ್ಲ.
ಅದು 2012, ಪರಿಸ್ಥಿತಿ ಮತ್ತಷ್ಟು ಹಳಸಿತ್ತು. ನಿಖಿತಾ ಗರ್ಭಿಣಿಯಾಗಿದ್ದರು. ಆದರೆ ಒಂದು ವಿಚಾರ ಕೇಳಿ ದಿನೇಶ್ ಗೆ ಆಕಾಶವೇ ತಲೆಗೆ ಬಿದ್ದ ಅನುಭವ. ತನ್ನ ಪತ್ನಿಯ ಹೊಟ್ಟೆಯಲ್ಲಿರುವ ಮಗು ತನ್ನದಲ್ಲ ಎಂದು ದಿನೇಶ್ ಗೆ ಗೊತ್ತಾಗಿತ್ತು. ಆಗಲೇ ಅವರಿಗೆ ಈ ಮುರಳಿ ವಿಜಯ್ ಕಥೆ ಗೊತ್ತಾಗಿದ್ದು. ದಿನೇಶ್ ಡಿವೋರ್ಸ್ ನೀಡಿದರು. ದಿನೇಶ್ ರಿಂದ ವಿಚ್ಛೇದನ ಪಡೆದ ಮರುದಿನವೇ ನಿಖಿತಾ- ವಿಜಯ್ ವಿವಾಹ ನಡೆದಿತ್ತು! ಇದಾಗಿ ಮೂರು ತಿಂಗಳಲ್ಲಿ ನಿಖಿತಾ ಮಗುವಿಗೆ ಜನ್ಮ ನೀಡಿದ್ದರು. ಇತ್ತ ದಿನೇಶ್ ಕಾರ್ತಿಕ್ ಇದೆಲ್ಲವನ್ನು ಅರಗಿಸಿಕೊಳ್ಳಲಾಗದೆ ಕುಸಿದು ಹೋಗಿದ್ದರು.
ವೈಯಕ್ತಿಕ ಬದುಕಿನ ಈ ಆಘಾತದಿಂದ ತತ್ತರಿಸಿ ಹೋಗಿದ್ದ ಕಾರ್ತಿಕ್ ಡಿಪ್ರೆಶನ್ ಗೆ ಒಳಗಾಗಿದ್ದರು. ಭಾರತ ತಂಡದಲ್ಲೂ ಸ್ಥಾನವಿಲ್ಲ. ದೇಶಿಯ ಕ್ರಿಕೆಟ್ ನಲ್ಲೂ ಪ್ರದರ್ಶನ ಕಡಿಮೆಯಾಗಿತ್ತು. ತಮಿಳುನಾಡು ತಂಡದ ನಾಯಕತ್ವವೂ ಕೈ ತಪ್ಪಿತು. ಅದು ಸಿಕ್ಕಿದ್ದು ಮತ್ತದೇ ಮುರಳಿ ವಿಜಯ್ ಗೆ. ಐಪಿಎಲ್ ನಲ್ಲೂ ವೈಫಲ್ಯ ಅನುಭವಿಸಿದರು. ಪತ್ನಿ ಮತ್ತು ಗೆಳೆಯನ ಮೋಸವನ್ನು ಮರೆಯಲಾಗದ ಕಾರ್ತಿಕ್ ಕುಡಿತದ ಮೊರೆ ಹೋದರು. ಪ್ರಾಕ್ಟಿಸ್ ಗೆ ಹೋಗುವುದನ್ನು ಕಡಿಮೆ ಮಾಡಿದರು. ಜಿಮ್ ಮರೆತರು.
ಮನೆ ಬಿಟ್ಟು ಬಾರದ ದಿನೇಶ್ ಕುರಿತು ಮಾಹಿತಿ ತಿಳಿದ ಅವರ ಜಿಮ್ ಟ್ರೈನರ್ ಮನೆಗೆ ಬಂದು ಮನವೊಲಿಸಿದರು. ಹಲವು ಪ್ರಯತ್ನಗಳ ಬಳಿಕ ದಿನೇಶ್ ಕೊನೆಗೂ ಜಿಮ್ ಗೆ ಬಂದಿದ್ದರು. ಇದೇ ಜಿಮ್ ಗೆ ಬರುತ್ತಿದ್ದ ‘ಆಕೆ’ ಯು ಇದನ್ನು ಗಮನಿಸಿದಳು. ಜಿಮ್ ಟ್ರೈನರ್ ನಿಂದ ಮಾಹಿತಿ ಪಡೆದ ಆಕೆ ದಿನೇಶ್ ನೆರವಿಗೆ ನಿಂತಳು. ಆಕೆ ಬೇರಾರು ಅಲ್ಲ, ಭಾರತದ ಸ್ಕ್ವಾಶ್ ಚಾಂಪಿಯನ್ ದೀಪಿಕಾ ಪಳ್ಳಿಕಲ್.
ತರಬೇತುದಾರ ಹಾಗೂ ದೀಪಿಕಾ ಅವರ ಶ್ರಮ ಫಲ ನೀಡತೊಡಗಿತು. ಈಗ ದಿನೇಶ್ ಕಾರ್ತಿಕ್ ಸುಧಾರಣೆಯ ಹಾದಿಯಲ್ಲಿದ್ದರು. ಮತ್ತೊಂದೆಡೆ, ಮುರಳಿ ವಿಜಯ್ ಅವರ ಪ್ರದರ್ಶನ ಕಳಪೆಯಾಗ ತೊಡಗಿತು. ಭಾರತ ತಂಡದಿಂದ ಹೊರಬಿದ್ದ ವಿಜಯ್ ಅವರನ್ನು ಐಪಿಎಲ್ ನಲ್ಲೂ ಅವಕಾಶ ಕಳೆದುಕೊಂಡರು. ದೀಪಿಕಾ ಪಳ್ಳಿಕಲ್ ಬೆಂಬಲದೊಂದಿಗೆ ದಿನೇಶ್ ಕಾರ್ತಿಕ್ ನೆಟ್ ನಲ್ಲಿ ತೀವ್ರ ಅಭ್ಯಾಸ ಪ್ರಾರಂಭಿಸಿದರು. ಗೆಳೆಯ ಅಭಿಷೇಕ್ ನಾಯರ್ ಕೂಡಾ ನೆರವಿಗೆ ಬಂದರು. ಇದರ ಪರಿಣಾಮ ಕಾಣಿಸಲಾರಂಭಿಸಿತು. ದಿನೇಶ್ ಕಾರ್ತಿಕ್ ದೇಶೀಯ ಕ್ರಿಕೆಟ್ ನಲ್ಲಿ ದೊಡ್ಡ ಸ್ಕೋರ್ ಗಳನ್ನು ಮಾಡಲು ಪ್ರಾರಂಭಿಸಿದರು. ಮತ್ತೆ ಐಪಿಎಲ್ ಗೆ ಆಯ್ಕೆಯಾದ ದಿನೇಶ್, ಮೊದಲು ಗುಜರಾತ್ ಲಯನ್ಸ್, ನಂತರ ಕೆಕೆಆರ್ ಗೆ ಆಡಿದರು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕ್ಯಾಪ್ಟನ್ ಕೂಡಾ ಆಡಿದರು.
ಕಷ್ಟದ ಸಮಯದಲ್ಲಿ ಬೆಂಬಲಕ್ಕೆ ನಿಂತ ದೀಪಿಕಾ ಜೊತೆ ದಿನೇಶ್ ವಿವಾಹವಾದರು. 2018ರಲ್ಲಿ ಮತ್ತೆ ಟೀಂ ಇಂಡಿಯಾಗೆ ಆಯ್ಕೆಯಾದ ದಿನೇಶ್ ನಿದಹಾಸ್ ಟ್ರೋಫಿ ಫೈನಲ್ ನಲ್ಲಿ ಎಂದೂ ಮರೆಯಲಾಗದ ಇನ್ನಿಂಗ್ ಆಡಿದರು. ಧೋನಿ ನಿವೃತ್ತಿಯ ದಿನಗಳು ಹತ್ತಿರ ಬರುತ್ತಿದ್ದಂತೆ ದಿನೇಶ್ ಗೆ ಅವಕಾಶ ನೀಡಲಾಯಿತು. 2019ರ ವಿಶ್ವಕಪ್ ನಲ್ಲೂ ಆಡಿದರು. ಆದರೆ ಮತ್ತೆ ಅವಕಾಶ ಸಿಗಲಿಲ್ಲ. 2020ರಲ್ಲಿ ಸೀಸನ್ ನಡುವೆ ಕೆಕೆಆರ್ ನಾಯಕತ್ವ ತೊರೆಯಬೇಕಾಯಿತು. ತಂಡವೂ ಕೈಬಿಟ್ಟಿತು. ಆದರೆ ನಂತರ ನಡೆದಿದ್ದು ಮಾತ್ರ ಒಂದು ಅದ್ಭುತ.