Advertisement

Covid-19: ಯುಎಇನಿಂದ ಭಾರತಕ್ಕೆ ಮರಳಲು 9 ಸಾವಿರ ಮಂದಿ ಆನ್ ಲೈನ್ ನಲ್ಲಿ ಹೆಸರು ನೋಂದಣಿ

08:07 AM May 01, 2020 | Nagendra Trasi |

ಯುಎಇ: ಕೋವಿಡ್ 19 ವೈರಸ್ ನಿಂದ ಸಂಯುಕ್ತ ಅರಬ್ ರಾಷ್ಟ್ರ(ಯುನೈಟೆಡ್ ಅರಬ್ ಎಮಿರೇಟ್ಸ್)ಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರಿಗೆ ಸ್ವದೇಶಕ್ಕೆ ಮರಳಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಭಾರತೀಯ ರಾಯಭಾರಿ ಕಚೇರಿ ಹೆಸರು ಮತ್ತು ಸಂಪೂರ್ಣ ವಿಳಾಸ ನಮೂದಿಸಲು ಇ-ರಿಜಿಸ್ಟ್ರೇಶನ್ ಗೆ ಅವಕಾಶ ಕೊಟ್ಟ ಪರಿಣಾಮ 12 ಗಂಟೆಯಲ್ಲಿ 9 ಸಾವಿರ ಮಂದಿ ಹೆಸರು ನೋಂದಾಯಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

ಭಾರತಕ್ಕೆ ಮರಳಲು ಆನ್ ಲೈನ್ ರಿಜಿಸ್ಟ್ರೇಶನ್ ಮಾಡಿಸಬೇಕೆಂಬ ಸೂಚನೆ ಹಿನ್ನೆಲೆಯಲ್ಲಿ ಏಕಕಾಲಕ್ಕೆ ಅಪಾರ ಪ್ರಮಾಣದಲ್ಲಿ ಅಪ್ಲಿಕೇಶನ್ ಸಲ್ಲಿಸಿದ್ದರಿಂದ ವೆಬ್ ಸೈಟ್ ಹಲವು ಭಾರೀ ಕ್ರ್ಯಾಶ್ ಆಗಿತ್ತು. ಇ-ರಿಜಿಸ್ಟ್ರೇಶನ್ ಪೋರ್ಟಲ್ ಗೆ ಬುಧವಾರ ಚಾಲನೆ ನೀಡಲಾಗಿತ್ತು.

ತಾಂತ್ರಿಕ ಸಮಸ್ಯೆಯಿಂದ ವೆಬ್ ಸೈಟ್ ಕ್ರ್ಯಾಶ್ ಆಗುತ್ತಿರುವುದರಿಂದ ಮುಂದಿನ ಕೆಲವು ದಿನಗಳವರೆಗೆ ಹೆಸರು ಮತ್ತು ವಿವರಗಳನ್ನು ನಮೂದಿಸಲು ಅವಕಾಶ ನೀಡಬೇಕೆಂದು ಭಾರತೀಯರು ಮನವಿ ಮಾಡಿಕೊಂಡಿರುವುದಾಗಿ ಗಲ್ಫ್ ನ್ಯೂಸ್ ವರದಿ ಮಾಡಿದೆ.

ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮತ್ತು ದುಬೈಯಲ್ಲಿರುವ ರಾಜತಾಂತ್ರಿಕ ಕಚೇರಿ ಬುಧವಾರ ರಾತ್ರಿ, ಭಾರತಕ್ಕೆ ತೆರಳಲು ಹೆಸರನ್ನು ಆನ್ ಲೈನ್ ನಲ್ಲಿ ರಿಜಿಸ್ಟ್ರೇಶನ್ ಮಾಡಿದರೆ ಸ್ವೀಕರಿಸುವುದಾಗಿ ಘೋಷಿಸಿ, ಲಿಂಕ್ (https://cgidubai.gov.in/covid_register/) ಅನ್ನು ಬಿಡುಗಡೆ ಮಾಡಿತ್ತು.

ರಾಯಭಾರಿ ಕಚೇರಿ ಈ ಘೋಷಣೆ ಹೊರಡಿಸಿದ ಕೆಲವೇ ಕ್ಷಣಗಳಲ್ಲಿ ರಿಜಿಸ್ಟ್ರೇಶನ್ ಪ್ರತಿಕ್ರಿಯೆ ಆರಂಭಗೊಂಡಿದ್ದು, ತಾಂತ್ರಿಕ ಕಾರಣಗಳಿಂದ ವೆಬ್ ಸೈಟ್ ಕ್ರ್ಯಾಶ್ ಆಗಿತ್ತು ಎಂದು ವರದಿ ವಿವರಿಸಿದೆ. ಒಂದು ವೇಳೆ ವಿಪರೀತ ಟ್ರಾಫಿಕ್ (ರಿಜಿಸ್ಟ್ರೇಶನ್ ಸಂಖ್ಯೆ) ನಿಂದ ಪೇಜ್ ಲೋಡ್ ಆಗಲು ಸಮಯ ತೆಗೆದುಕೊಂಡರೆ ತಾಳ್ಮೆಯಿಂದ ಇರಿ ಎಂದು ಭಾರತೀಯ ಕಾನ್ಸುಲೇಟ್ ಗುರುವಾರ ನಸುಕಿನ ವೇಳೆ ಟ್ವೀಟ್ ಮೂಲಕ ವಿನಂತಿಸಿಕೊಂಡಿತ್ತು.

Advertisement

ಕೋವಿಡ್ 19 ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಚ್ 22ರಿಂದ ಗಡಿಭಾಗವನ್ನು ಬಂದ್ ಮಾಡಿ, ವಿಮಾನ ಹಾರಾಟ ನಿರ್ಬಂಧಿಸಿದ ನಿಟ್ಟಿನಲ್ಲಿ ಸಾವಿರಾರು ಭಾರತೀಯರು ಯುಎಇನಲ್ಲಿ ಸಿಕ್ಕಿಹಾಕಿಕೊಳ್ಳುವಂತಾಗಿತ್ತು. ಇದರಲ್ಲಿಯೂ ಮುಖ್ಯವಾಗಿ ವಿಸಿಟಿಂಗ್ ವೀಸಾದಲ್ಲಿ ಬಂದವರು, ಉದ್ಯೋಗ ಅರಸಿ ಬಂದವರು, ನಿರುದ್ಯೋಗಿ ಕೆಲಸಗಾರರು, ಗರ್ಭಿಣಿ ಮಹಿಳೆಯರು, ಪ್ರತ್ಯೇಕ ಕುಟುಂಬಗಳು, ವಯಸ್ಸಾದವರು ತಾಯ್ನಾಡಿಗೆ ಹಿಂದಿರುಗಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಸರ್ಕಾರದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಗಲ್ಫ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆದೊಯ್ಯುವ ನಿಟ್ಟಿನಲ್ಲಿ ಕನಿಷ್ಠ ಮೂರು ಭಾರತೀಯ ನೌಕಾ ಯುದ್ಧ ಹಡಗುಗಳು ಮತ್ತು 500 ವಿಮಾನಗಳನ್ನು ಸಿದ್ದವಾಗಿಟ್ಟುಕೊಳ್ಳುವಂತೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

ಇದೇ ರೀತಿ ಸೌದಿ ಅರೇಬಿಯಾದಲ್ಲಿಯೂ ಸಿಕ್ಕಿಹಾಕಿಕೊಂಡಿರುವ ಭಾರತೀಯರಿಗಾಗಿ ಹೆಸರು ನೋಂದಾಯಿಸಲು ವೆಬ್ ಸೈಟ್ ಲಾಂಚ್ ಮಾಡಿದೆ. ಈ ಬಗ್ಗೆ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವೀಟ್ ಮಾಡಿದ್ದು, ಹೆಸರು ನೋಂದಣಿಯ ಮುಖ್ಯ ಉದ್ದೇಶ ಕೇವಲ ಅಂಕಿಅಂಶ ಸಂಗ್ರಹಕ್ಕಾಗಿ ಮಾತ್ರ. ಭಾರತಕ್ಕೆ ವಿಮಾನ ಸಂಚಾರ ಪುನರಾರಂಭಿಸುವ ಬಗ್ಗೆ ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಭಾರತ ಸರ್ಕಾರವೇ ತನ್ನ ವೆಬ್ ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಘೋಷಣೆ ಹೊರಡಿಸಲಿದೆ ಎಂದು ರಾಯಭಾರಿ ಕಚೇರಿ ತಿಳಿಸಿರುವುದಾಗಿ ಖಲೀಜ್ ಟೈಮ್ಸ್ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next