Advertisement

ಕೋಮಟೋಳ್ಳು ತೆಲುಗು ಕೃತಿ ನಿಷೇಧಿಸಲು ಆಗ್ರಹ

11:49 AM Sep 19, 2017 | Team Udayavani |

ಬೆಂಗಳೂರು: ತೆಲಂಗಾಣದ ಸಾಹಿತಿ ಪ್ರೊ.ಕಂಚ ಐಲಯ್ಯ ಷೆಫ‌ರ್ಡ್‌ ಅವರು ಆರ್ಯವೈಶ್ಯ ಸಮುದಾಯವನ್ನು ನಿಂದಿಸುವ ಉದ್ದೇಶದಿಂದ ತೆಲುಗು ಭಾಷೆಯಲ್ಲಿ ಬರೆದಿರುವ “ಸಾಮಾಜಿಕ ಸ್ಮಗ್ಲರ್‌ ಕೋಮಟೋಳ್ಳು’ ಪುಸ್ತಕವನ್ನು ತಕ್ಷಣವೇ ನಿಷೇಧಿಸಬೇಕು ಮತ್ತು ಲೇಖಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಆರ್ಯವೈಶ್ಯ ಮಹಾಮಂಡಳಿ ಮತ್ತು  ಆರ್ಯವೈಶ್ಯ ಒಕ್ಕೂಟ ಆಗ್ರಹಿಸಿದೆ.

Advertisement

ರಾಜ್ಯದ ವಿವಿಧ ಭಾಗಗಳಿಂದ ನಗರಕ್ಕೆ ಬಂದ ಆರ್ಯವೈಶ್ಯ ಸಮುದಾಯದವರು ಸೋಮವಾರ ಟೌನ್‌ಹಾಲ್‌ ಮುಂದೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಮಾತನಾಡಿ, ತೆಲಂಗಾಣದ ಲೇಖಕ ಕೆಂಚ ಐಲಯ್ಯರವರು ಆರ್ಯವೈಶ್ಯರನ್ನು ಸ್ಮಗ್ಲರ್‌ ಎನ್ನುವ ಮೂಲಕ ಇಡೀ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ.

ಇದರ ವಿರುದ್ಧ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಮುಖ್ಯಮಂತ್ರಿಗೆ ಮತ್ತು ರಾಜ್ಯದ ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ನೀಡಿದ್ದೇವೆ. ಆ ಪುಸ್ತಕವನ್ನು ತಕ್ಷಣದಿಂದಲೇ ನಿಷೇಧಿಸಿ, ಲೇಖಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಒಂದು ವಾರದೊಳಗೆ ಸೂಕ್ತ ಕ್ರಮ ತೆಗೆದುಕೊಳ್ಳದೇ ಇದ್ದರೆ ರಾಜ್ಯದ ಬೀದಿ ಬೀದಿಯಲ್ಲಿ ಹೋರಾಟ ನಡೆಸಲಿದ್ದೇವೆ.  ಎಲ್ಲಾ ಪೊಲೀಸ್‌ ಠಾಣೆಯಲ್ಲೂ ಆ ಲೇಖಕನ ವಿರುದ್ಧ ದೂರು ದಾಖಲಿಸಲಿದ್ದೇವೆ ಎಂದು ಎಚ್ಚರಿಸಿದರು.

ಹಲವಾರು ವರ್ಷದಿಂದ ದಾನಧರ್ಮ ಮಾಡಿಕೊಂಡು ಬರುತ್ತಿರುವ ಈ ಸಮುದಾಯವನ್ನು ಕೀಳಾಗಿ ಬಿಂಬಿಸಿದ್ದಾರೆ. ಗಾಂಧೀಜಿ ಹಾಗೂ ನೆಹರು ಬಗ್ಗೆಯೂ ಹೀನ ಶಬ್ಧಗಳಲ್ಲಿ ಬರೆದಿದ್ದಾರೆ. ಪ್ರಚಾರದ ಗೀಳಿನಿಂದಾಗಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದರು. ಮಹಾಮಂಡಳಿಯ ಬಿ.ಗೋವಿಂದ, ಗಿರೀಶ್‌ ಪೆಂಡಕೂರ್‌, ಕೆ.ವಿಜಯರಾಜೇಶ್‌, ಎ.ಆರ್‌.ರಾಮಪ್ರಸಾದ್‌ ಮೊದಲಾದವರು ಪ್ರತಿಭಟನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next