ಬೆಂಗಳೂರು: “ಪ್ಲಾಸ್ಟರ್ ಆಫ್ ಪ್ಯಾರಿಸ್’ (ಪಿಓಪಿ) ಬಳಸಿ ತಯಾರಿಸಿರುವ ಹಾಗೂ ಬಣ್ಣ ಲೇಪಿತ ಗಣಪತಿ ವಿಗ್ರಹಗಳನ್ನು ವಶಕ್ಕೆ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.
“ಪ್ಲಾಸ್ಟರ್ ಆಫ್ ಪ್ಯಾರಿಸ್’ (ಪಿಓಪಿ) ಬಳಸಿ ತಯಾರಿಸಿರುವ ಹಾಗೂ ಬಣ್ಣ ಲೇಪಿತ ಗಣಪತಿ ವಿಗ್ರಹಗಳನ್ನು ವಶಕ್ಕೆ ಪಡೆಯುವ ಕೆಎಸ್‌ಪಿಸಿಬಿ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಬೆಂಗಳೂರಿನ ಸೆಲ್ವರಾಜ್ ಸೇರಿದಂತೆ ಏಳು ಮಂದಿ ಗಣಪತಿ ವಿಗ್ರಹ ತಯಾರಕರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಹಾಗೂ ನ್ಯಾ.ಆರ್.ಬಿ. ಬೂದಿಹಾಳ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಜತೆಗೆ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಕೆಎಸ್‌ಪಿಸಿಬಿಗೆ ಸೂಚಿಸಿ ವಿಚಾರಣೆಯನ್ನು ಜ.13ಕ್ಕೆ ಮುಂದೂಡಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ವಾದಿಸಿ, ಪಿಒಪಿ ಮತ್ತು ಬಣ್ಣ ಲೇಪಿತ ಗಣಪತಿ ವಿಗ್ರಹಗಳ ಮಾರಾಟ ನಿಷೇಧಿಸಿ ಕೆಎಸ್‌ಪಿಸಿಬಿ ಅಧಿಸೂಚನೆ ಹೊರಡಿಸಿದೆ. ಜತೆಗೆ, ಸದ್ಯ ಬಳಸಲ್ಪಡದ ಗಣಪತಿ ವಿಗ್ರಹಗಳನ್ನು ವಶಕ್ಕೆ ಪಡೆದು ವಿಲೇವಾರಿ ಮಾಡುವಂತೆ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶಿಸಿದೆ. ಇದರಿಂದ ಈಗಾಗಲೇ ಕೋಟ್ಯಂತರ ರೂ. ವ್ಯಯಿಸಿ ಗಣಪತಿ ವಿಗ್ರಹ ತಯಾರಿಕೆಯಲ್ಲಿ ತೊಡಗಿರುವವರಿಗೆ ಅಪಾರ ನಷ್ಟವಾಗಲಿದೆ ಎಂದು ತಿಳಿಸಿದರು.
ಅಲ್ಲದೆ, ಈಗಾಗಲೇ ತಯಾರಿಸಲ್ಪಟ್ಟಿರುವ ವಿಗ್ರಹಗಳನ್ನು ಮಾರಾಟ ಮಾಡಲು ಅನುಮತಿ ನೀಡಬೇಕು. ಅದಕ್ಕೆ ಅನುಮತಿ ನೀಡಿದರೆ 2017ರ ಅಕ್ಟೋಬರ್‌ನಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ಬಣ್ಣ ಲೇಪಿತ ಗಣಪತಿ ವಿಗ್ರಹಗಳನ್ನು ತಯಾರಿಸುವುದಿಲ್ಲ ಎಂಬುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಲಾಗುವುದು ಎಂದು ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಕೆಎಸ್‌ಪಿಸಿಬಿಗೆ ಸೂಚಿಸಿ ವಿಚಾರಣೆ ಮುಂದೂಡಿತು.