ಕಲಬುರಗಿ: ದೇಶದ ಸರ್ವ ವರ್ಗಗಳ ಖುಷಿಯ ಹಬ್ಬ ಗಣೇಶ ಚತುರ್ಥಿಗೆ ಕ್ಷಣಗಣನೆ ಶುರುವಾಗಿದೆ. ಇಂದು ಆರಾಧ್ಯದೈವ ಗಣೇಶಚೌತಿಯ ಮೊದಲ ದಿನ ಆರಂಭವಾಗಿದೆ ಇದರೊಂದಿಗೆ ಗಣೇಶನನ್ನು ಕುಳ್ಳಿರಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ಪರಿಸರ ಕಾಳಜಿ ಹಿನ್ನೆಲೆಯಲ್ಲಿ ಈ ಬಾರಿ ಖುದ್ದಾಗಿ ಜನರೇ ಮಣ್ಣಿನ ಮತ್ತು ಪರಿಸರ ಸ್ನೇಹಿ ಗಣಪನ ಮೂರ್ತಿ ಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಆದರೂ, ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಬಣ್ಣ, ಬಣ್ಣದ ವಿವಿಧ ಆಕಾರದ ಗಣೇಶ ಮೂರ್ತಿಗಳು ಕಂಡು ಬರುತ್ತಿವೆ. ಇದಕ್ಕೆ ಕೆಲವು ಪ್ರಜ್ಞಾವಂತರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮನೆ–ಮನೆಗೆ ಗಣಪ: ಇಂದು ಬುಧವಾರ ಮನೆ-ಮನೆಗೆ ವಿವಿಧ ಆಕಾರದ, ನಾನಾ ಬಣ್ಣಗಳ ಗಣಪ ಕಾಲಿಡಲಿದ್ದಾನೆ. ಮಂಗಳವಾರವಂತೂ ಜನರು ನಗರದ ಹಲವಾರು ಮಾರುಕಟ್ಟೆಗಳು, ಅಂಗಡಿ ಮುಂಗಟ್ಟುಗಳ ಮುಂದೆ ಇಟ್ಟಿದ್ದ ಥರೇವಾರಿ ಗಣಪನ ಮೂರ್ತಿಗಳನ್ನು ಕೊಳ್ಳಲು ಮುಗಿಬಿದ್ದಿದ್ದರು.
ದಿನವಿಡಿ ಸುರಿದ ಮಳೆ ತುಸು ಬಿಡುವು ನೀಡಿದ್ದರಿಂದ ಗಣಪನ ಖರೀದಿಗೆ ಅನುಕೂಲವಾಯಿತು ಎಂದು ಕೆಲವರು ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಬೆಲೆ ತುಸು ದುಬಾರಿ ಎಂದು ಕೆಲವರು ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.
ಅಲಂಕಾರದ ಸಾಮಾನುಗಳು, ವಿದ್ಯುತ್ ಅಲಂಕಾರಿಕ ದೀಪಗಳು, ಸಿರೀಜ್‌ಗಳು ಮತ್ತು ಹೂವು, ಹಣ್ಣು ಎಲ್ಲವೂ ತುಸು ದುಬಾರಿಯಾಗಿವೆ. ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ದೊಡ್ಡ ಪ್ರಮಾಣದಲ್ಲಿ ಗಣಪನನ್ನು ಮನೆ ತುಂಬಿಸಿಕೊಳ್ಳುವಲ್ಲಿ ಬಹುತೇಕರು ಹಿಂದೇಟು ಹಾಕಿದ್ದರು. ಇದರಿಂದಾಗಿ ಮನೆಗಳಲ್ಲಿ ಗಣಪನ ಆರಾಧನೆ ತುಸು ಕಡಿಮೆ ಎನ್ನಿಸಿತ್ತು. ಆದರೆ, ಈ ಬಾರಿ ಎಲ್ಲಿ ನೋಡಿದರಲ್ಲಿ ಗಣಪನ ಮೂರ್ತಿಗಳ ಮಾರಾಟ ಭಾರಿ ಜೋರಿನಿಂದ ನಡೆಯಿತು.