Advertisement
ಮೀನುಗಾರಿಕೆಗೆ ರಜೆ ಇರುವ ಪ್ರಸ್ತುತ ಸಮಯದಲ್ಲಿ ಮೀನು ಹಿಡಿಯಲು ಬಳಸುವ ಭಾರೀ ಗಾತ್ರದ ಬಲೆಗಳು ಮಂಗಳೂರಿನ ದಕ್ಕೆಯಲ್ಲಿ ಸಿದ್ದವಾಗುತ್ತಿದೆ. ಮುಂದಿನ ಮೀನುಗಾರಿಕೆ ಋತುವಿಗೆ ಬೇಕಾದ ಬಲೆಗಳ ನೇಯ್ಗೆಯಲ್ಲಿ ಮೀನುಗಾರ ಸಮುದಾಯ ನಿರತವಾಗಿದೆ. ಈ ಮೂಲಕ ಬಂದರಿನಲ್ಲಿ ಬಣ್ಣ ಬಣ್ಣದ ಲೋಕವೊಂದು ತೆರೆದುಕೊಂಡಿದೆ.
ಪರ್ಸಿನ್ ಬೋಟ್‌ಗಳಿಗೆ ಎರಡು ವಿಧದ ಬಲೆಗಳಿವೆ. ಅಂಜಲ್, ಮಾಂಜಿ, ಬಂಗುಡೆ ಸಹಿತ ವಿವಿಧ ಮೀನುಗಳನ್ನು ಹಿಡಿಯಲು ಅನುಕೂಲವಾಗುವ (ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಅಧಿಕ ಬಳಕೆ)”ಕೋಟಿ ಬಲೆ’ ಹಾಗೂ ಬೂತಾಯಿ ಸಹಿತ ಸಣ್ಣ ಗಾತ್ರದ ಮೀನು ಹಿಡಿಯುವ “ಬೂತಾಯಿ ಬಲೆ’ ಸಿದ್ಧಪಡಿಸುವ ಕಾರ್ಯ ಸದ್ಯ ನಡೆಯುತ್ತಿದೆ. ಈ ಹಿಂದೆ ಬಳಕೆ ಮಾಡಿದ್ದ ಬಲೆಗೆ ಹಾನಿಯಾಗಿದ್ದರೆ ಅದನ್ನು ಸರಿಪಡಿಸುವುದು ಹಾಗೂ ಹೊಸ ಬಲೆ ನೇಯುವ ಕೆಲಸ ಈಗ ನಡೆಯುತ್ತದೆ. ಹೊರರಾಜ್ಯದ ಕಾರ್ಮಿಕರು ಅಧಿಕ!
ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ಅವರ ಪ್ರಕಾರ “ಆಂಧ್ರ ಹಾಗೂ ಒರಿಸ್ಸಾದ ಕಾರ್ಮಿಕರು ಬಲೆ ನೆಯ್ಯುವ ಕೆಲಸ ನಡೆಸುತ್ತಿದ್ದಾರೆ. ಸ್ಥಳೀಯರು ಕಡಿಮೆ. ದಿನಕ್ಕೆ 800 ರೂ. ನೀಡಲಾಗುತ್ತದೆ. ಸುಮಾರು 200ರಷ್ಟು ಕಾರ್ಮಿಕರು ಇದ್ದಾರೆ. ಒಂದು ಬೋಟ್‌ಗೆ ಸೆಟ್ ಬಲೆಗೆ(ಕೋಟಿ ಬಲೆ) 45ರಿಂದ 50 ಲಕ್ಷ ರೂ. ಇದೆ. ಕಡಲಿನಲ್ಲಿ 1500ರಿಂದ 2 ಸಾವಿರ ಮೀ.ವರೆಗೆ ಬಲೆ “ಸರ್ಕಲ್’ ಹಾಕುವವರು ಇದ್ದಾರೆ. ಬಲೆಯ ಎತ್ತರ 80 ಮೀ. ಇರುತ್ತದೆ. ವಿವಿಧ ಕಂಪೆನಿಯವರಿಂದ ಬಲೆಯನ್ನು ತರಲಾಗುತ್ತದೆ. ಇದನ್ನು ಬಳಿಕ ನೇಯುವ ಕಾರ್ಯವನ್ನು ಇಲ್ಲಿ ಮಾಡಲಾಗುತ್ತದೆ. ಜತೆಗೆ ಪ್ರತೀ ವರ್ಷ ಹಾನಿಯಾದ ಬಲೆಯನ್ನು ಇಲ್ಲಿ ಸರಿಪಡಿಸಲಾಗುತ್ತದೆ.
ಬಲೆ ನೇಯುವ ಕಾರ್ಮಿಕರೊಬ್ಬರು “ಉದಯವಾಣಿ’ ಜತೆಗೆ ಮಾತನಾಡಿ “ಹೊಸ ಬಲೆ ನೇಯ್ಗೆಯ ಜತೆಗೆ ತಮ್ಮ ಅನುಭವವನ್ನೆಲ್ಲಾ ಧಾರೆ ಎರೆದು ಹಾಳಾದ ಹಳೆಯ ಬಲೆಗಳನ್ನು ಮರುಜೋಡಿಸಿ ಸಿದ್ದಗೊಳಿಸುವುದು ಸವಾಲಿನ ಕೆಲಸ. ಈ ಬಲೆ ನೇಯುವುದು ಕೋಟ್ಯಾಂತರ ರೂ. ವಹಿವಾಟು ನಡೆಸುವ ಒಂದು ಉದ್ಯಮ. ಮೀನುಗಾರಿಕೆಗೆ ಮೂಲ ಕಚ್ಛಾವಸ್ತುವೇ ಈ ಬಲೆಗಳು. ಈ ಬಣ್ಣದ ಬಲೆಗಳು ಮೀನುಗಾರ ಸಮುದಾಯದ ಜೀವನಕ್ಕೂ ಬಣ್ಣ ತುಂಬುವ ಕೆಲಸ ಮಾಡುತ್ತಿದೆ’ ಎನ್ನುತ್ತಾರೆ ಅವರು.
Related Articles
ಮೀನು ಹಿಡಿಯುವ ಬಲೆ ನೇಯಲು ವಿಸ್ತಾರವಾದ ಜಾಗ ಬೇಕು. ಆದರೆ, ಮಂಗಳೂರು ಬಂದರಿನಲ್ಲಿ ಅದಕ್ಕಾಗಿ ಸೂಕ್ತ ಜಾಗವಿಲ್ಲ. ಟಾರ್ಪಲಿನ್ ಹಾಸಿ ಅದರ ಕೆಳಗೆ ಬಲೆ ನೇಯುವ ಪರಿಸ್ಥಿತಿ ಇದೆ. ಜೋರು ಮಳೆ ಬಂದರೆ ಟಾರ್ಪಲಿನ್ ಗಾಳಿಯಲ್ಲೇ ಹೋಗುತ್ತದೆ. ಜತೆಗೆ ಬಿಸಿಲಿದ್ದರೆ ಸೆಕೆಯಲ್ಲಿ ಕುಳಿತುಕೊಳ್ಳಲು ಆಗುವುದಿಲ್ಲ. ಇದರಿಂದಾಗಿ ಕೆಲಸ ಸರಿಯಾಗಿ ಸಾಗುವುದಿಲ್ಲ. ಇದಕ್ಕಾಗಿ ಬಲೆ ನೇಯುವವರಿಗೆ ಸರಿಯಾದ ವ್ಯವಸ್ಥೆಯನ್ನು ಇಲಾಖೆ ಮಾಡಿಕೊಡಬೇಕು ಎಂಬುದು ಬಲೆ ನೇಯುವವರು ಕೂಗು.
Advertisement
ತಾತ್ಕಾಲಿಕ ವ್ಯವಸ್ಥೆಮೀನುಗಾರಿಕೆ ಬಲೆ ನೇಯುವವರಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಡುವಂತೆ ಬೇಡಿಕೆ ಇದೆ. ಮೀನುಗಾರಿಕಾ ಸಚಿವರು ಕೂಡ ಈಗಾಗಲೇ ಮಂಗಳೂರಿಗೆ ಆಗಮಿಸಿ ಇದರ ಬಗ್ಗೆ ಪರಿಶೀಲಿಸಿ ತತ್‌ಕ್ಷಣಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡುವಂತೆ ಸೂಚಿಸಿದ್ದಾರೆ. ಅದರಂತೆ ಅಂದಾಜುಪಟ್ಟಿ ಸಿದ್ದಪಡಿಸಲಾಗುತ್ತಿದ್ದು, ಶೀಘ್ರ ವ್ಯವಸ್ಥೆ ಮಾಡಿಕೊಡಲಾಗುವುದು.
– ಹರೀಶ್ ಕುಮಾರ್, ಜಂಟಿ ನಿರ್ದೇಶಕರು, ಮೀನುಗಾರಿಕಾ ಇಲಾಖೆ ದ.ಕ. -ದಿನೇಶ್ ಇರಾ