Advertisement

ಬಣ್ಣ ಬಣ್ಣದ ಹರಳುಗಳ ಟ್ರೆಂಡ್‌

03:38 PM Sep 10, 2020 | |

ಆಭರಣ ಎಂದಾಗ ಹೆಣ್ಮಕ್ಕಳ ಕಡೆಗೆ ಬೆರಳು ತೋರಿಸಲಾಗುತ್ತದೆ. ಮಹಿಳೆಯರು ಆಭರಣ ಪ್ರಿಯರು ಎಂಬ ಮಾತಿದೆ. ಆಭರಣಗಳಲ್ಲಿ ವಿವಿಧ ಆಕರ್ಷಕ ವಿನ್ಯಾಸಗಳನ್ನು ಆಯ್ಕೆ ಮಾಡಿ ಧರಿಸಿಕೊಂಡು ಖುಷಿಪಡುತ್ತಾರೆ. ಆದರೆ ಇತ್ತೀಚೆಗೆ ಪುರುಷರು ಆಭರಣದತ್ತ ಒಲವು ತೋರಿಸುತ್ತಿದ್ದಾರೆ. ನವರತ್ನದ ಉಂಗುರ ಸೇರಿದಂತೆ ಅದೃಷ್ಣ ಬದಲಾಯಿಸುವ ನಂಬಿಕೆಯಿಂದ ರತ್ನಗಳನ್ನು ಜೋಡಿಸಿ ಆಭರಣ ಧರಿಸುವವರು ಹೆಚ್ಚಾಗಿದ್ದಾರೆ.

Advertisement

ಆಭರಣದೊಂದಿಗೆ ವಜ್ರ, ರತ್ನ, ಮುತ್ತು, ಹವಳನ್ನು ಬೆಸೆದು ಧರಿಸಿಕೊಳ್ಳುವುದರಿಂದ ಆಭರಣದ ಅಂದ ಹೆಚ್ಚುವುದರೊಂದಿಗೆ ಅದೃಷ್ಟ ಬದಲಾಗುತ್ತದೆ ಎಂಬುದು ನಂಬಿಕೆ. ಪ್ರಸ್ತುತ ಬಹುತೇಕ ಸಿನೆಮಾ ತಾರೆಯರ ಕೈಯಲ್ಲೂ ಅದೃಷ್ಟದ ಕಲ್ಲುಗಳನ್ನು ಕಾಣಬಹುದು. ಅವರ ಜನ್ಮರಾಶಿಗೆ ಹೊಂದುವಂತಹ ರತ್ನಗಳನ್ನು ಧರಿಸುವುದರಿಂದ ಆರೋಗ್ಯ, ಅದೃಷ್ಣ ಎಲ್ಲವೂ ಸುಧಾರಣೆಯಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಬಂಗಾರದ ಮಳಿಗೆಗಳಲ್ಲಿ ನವರತ್ನಗಳ ಉಂಗುರ, ಕಿವಿಯೋಲೆಗಳು ಹೆಚ್ಚಿನ ಪ್ರಾಶಸ್ತ್ಯ ಪಡೆದುಕೊಳ್ಳುತ್ತಿದೆ. ವಜ್ರ, ನೀಲ, ಪಿಂಕ್‌, ಪಚ್ಚೆ, ಮುತ್ತು, ಹವಳಗಳ ಆಭರಣಗಳನ್ನು ಧರಿಸಲು ಯುವತಿಯರಂತೂ ಉತ್ಸುಹಕರರಾಗಿದ್ದಾರೆ.

ಇದನ್ನೂ ಓದಿ: ಟ್ಯಾಟು ಹಾಕುವಾಗ ಇರಲಿ ನಿಮ್ಮಲ್ಲಿ ಎಚ್ಚರ!

ಟ್ರೆಂಡಿ ನವರತ್ನಗಳು
ದಶಕಗಳ ಹಿಂದೆ ಅದೃಷ್ಟ , ಆರೋಗ್ಯದ ಆಧಾರದ ಮೇಲೆ ಧರಿಸುತ್ತಿದ್ದ ನವರತ್ನಗಳೀಗ ಟ್ರೆಂಡ್‌ ಆಗಿ ಬದಲಾಗುತ್ತಿದೆ. ಹೆಚ್ಚಾಗಿ ಯುವತಿಯರ ಕೈಯಲ್ಲಿ ಬಣ್ಣ ಬಣ್ಣದ ಹರಳುಗಳ ಉಂಗುರಗಳು ಜಾಗ ಪಡೆದುಕೊಂಡಿದೆ. ಬಿಳಿ ಬಣ್ಣದ ಉಂಗುರಗಳೇ ಯುವತಿಯರ ಕೈಯಲ್ಲಿ ಮಿಂಚುತ್ತಿದ್ದ ಕಾಲವೀಗ ಬದಲಾಗಿ ಬಣ್ಣ ಬಣ್ಣದ ಉಂಗುರ, ಕಿವಿಯೋಲೆಗಳೇ ಶೈನ್‌ ಆಗುತ್ತಿದೆ. ಮಾರುಕಟ್ಟೆಯಲ್ಲಿ ಲಭಿಸುವ ಶೈನಿಂಗ್‌ ಆಭರಣಗಳಿಗಿಂತ ಹರಳುಗಳಿರುವ ಆಭರಣಗಳೇ ಹೆಚ್ಚು ಬೇಡಿಕೆ ಪಡೆದುಕೊಂಡಿದೆ.

ಸರ, ಕಿವಿಯೋಲೆ, ಉಂಗುರಗಳಲ್ಲೂ ಬಣ್ಣ
ಪ್ರಸ್ತುತ ಯುವತಿಯರು ತಾವು ಧರಿಸುವ ಸರ, ಕಿವಿಯೋಲೆ, ಉಂಗುರಗಳಲ್ಲಿ ಬಣ್ಣ ಬಣ್ಣದ ಹರಳುಗಳನ್ನು ಪೋಣಿಸಿ ಧರಿಸುತ್ತಾರೆ. ಇದು ಧರಿಸಿದವರಿಗೆ ಹೊಸ ಲುಕ್‌ ನೀಡುತ್ತದೆ. ಮದುವೆ, ಪೂಜೆ, ಪಾರ್ಟಿ ಯಾವುದೇ ಸಮಾರಂಭಗಳಿಗೂ ಬಣ್ಣದ ಹರಳು ಆಕರ್ಷಕವಾಗಿ ಕಾಣಿಸುತ್ತದೆ. ಧರಿಸುವ ಬಟ್ಟೆಗೆ ಒಪ್ಪುವಂತಹ ಹರಳುಗಳ ಆಭರಣಗಳನ್ನು ಹಾಕಿಕೊಂಡರೆ ಸುಂದರವಾಗಿ ಕಾಣಬಹುದಾಗಿದೆ. ಅಲ್ಲದೆ ಫ್ಯಾನ್ಸಿ ಆಭರಣಗಳ ಸೆಟ್‌ನಂತೆಯೇ ಚಿನ್ನದ ಸರಗಳ ಸೆಟ್‌ಗಳಲ್ಲೂ ನಮಗೆ ಬೇಕಾದ ಬಣ್ಣದ ಸರಗಳು ಸಿಗುತ್ತದೆ. ಆ ಕಾರಣಕ್ಕಾಗಿ ಬಂಗಾರ ಬಣ್ಣದ ಸರಗಳಿಗಿಂತ ಬಣ್ಣ ಬಣ್ಣದ ಸ್ಟೋನ್‌ ಗಳಿರುವ ಆಭರಣಗಳೇ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ.

Advertisement

ಇದನ್ನೂ ಓದಿ: ಪುಟ್ಟ ಕಾರುಗಳತ್ತ ಹೆಚ್ಚುತ್ತಿರುವ ಒಲವು

ಪುರುಷರ ಮೈಯಲ್ಲೂ ಬಣ್ಣದ ಹರಳು
ಆಭರಣ ಧರಿಸುವುದೆಂದರೆ ಮುಖ ತಿರುಗಿಸಿಕೊಳ್ಳುತ್ತಿದ್ದ ಪುರುಷರ ಮೈಯಲ್ಲೂ ಬಣ್ಣದ ಹರಳುಗಳು ಸ್ಥಾನ ಪಡೆದುಕೊಳ್ಳುತ್ತಿದೆ. ಅದೃಷ್ಟ ಎನ್ನುವ ಕಾರಣಕ್ಕಾಗಿ ಪುರುಷರು ತಮ್ಮ ರಾಶಿಗೆ ಒಪ್ಪುವಂತಹ ಕಲ್ಲುಗಳನ್ನು ಆಯ್ಕೆ ಮಾಡಿ ಉಂಗುರವನ್ನಾಗಿ ಧರಿಸಿಕೊಳ್ಳುತ್ತಿದ್ದಾರೆ. ಇದನ್ನು ಹೊರತುಪಡಿಸಿ ಒಂದು ಕಿವಿಗೆ ಬಣ್ಣದ ಚಿಕ್ಕ ಟಿಕ್ಕಿ, ಸರದ ಪೆಂಡೆಂಟ್‌ನಲ್ಲಿ ಹರಳು ಧರಿಸುತ್ತಿದ್ದಾರೆ. ಇದು ಲೇಟೆಸ್ಟ್‌ ಟ್ರೆಂಡ್‌ ಹಾಗೂ ನಂಬಿಕೆಯೂ ಹೌದು. ಪ್ರಸ್ತುತ ಬಹುತೇಕ ಪುರುಷರು ನವರತ್ನದ ಉಂಗುರ ಧರಿಸುವುದು ಕಾಣಬಹುದಾಗಿದೆ.

ಫ್ಯಾನ್ಸಿಗಳಲ್ಲೂ ಬಣ್ಣದ ಹರಳು ಲಭ್ಯ
ಫ್ಯಾನ್ಸಿ ಆಭರಣಗಳಲ್ಲಿ ಬಣ್ಣದ ಸ್ಟೋನ್‌ ಗಳು ಲಭಿಸುತ್ತದೆ. ಆದರೆ ಅದು ಅಪ್ಪಟ ರತ್ನಗಳಂತೆ ಶೈನಿಂಗ್‌ ಇರುವುದಿಲ್ಲ ಎನ್ನುವ ಕಾರಣಕ್ಕೆ ಬಹುತೇಕ ಮಂದಿ ಅಪ್ಪಟ ರತ್ನಗಳನ್ನು ಕೊಂಡುಕೊಳ್ಳುತ್ತಾರೆ. ಆದರೆ ಕಾಲೇಜು ಯುವಕ, ಯುವತಿಯರು ಫ್ಯಾನ್ಸಿ ಸ್ಟೋನ್‌ಗಳಲ್ಲೇ ಸಮಾಧಾನಪಟ್ಟುಕೊಳ್ಳುತ್ತಾರೆ.

ಹರಳುಗಳಲ್ಲಿ ನಂಬಿಕೆ
ಜ್ಯೋತಿಷ್ಯಶಾಸ್ತ್ರ ದ ಪ್ರಕಾರ ಹರಳುಗಳ ಧಾರಣೆಯ ಬಗ್ಗೆ ವಿಶೇಷ ವಿವರಗಳಿವೆ. ಮನಬಂದಂತೆ ಹರಳುಗಳನ್ನು ಧರಿಸುವುದು ಒಳ್ಳೆಯದಲ್ಲ. ಅವರವರಿಗೆ ಅನಿಸಿದಂತೆ ಹರಳು ಧರಿಸುವುದರಿಂದ ಅದೃಷ್ಟ ಕೈಕೊಡುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಅದಕ್ಕಾಗಿ ಅಪ್ಪಟ ನವರತ್ನಗಳ ಹರಳುಗಳನ್ನು ಪರಿಶೀಲಿಸಿ ಧರಿಸಬೇಕು ಎಂದು ನಂಬಲಾಗಿದೆ. ಬಹುತೇಕ ಮಂದಿ ನಂಬಿಕೆಯ ಆಧಾರದ ಮೇಲೆ ಧರಿಸಿದರೆ ಇನ್ನು ಕೆಲವರು ಫ್ಯಾಷನ್‌ ಆಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next