Advertisement

ವರ್ಣ ಸಂಘರ್ಷ ರಹಿತ ಸಮಾಜಕ್ಕೆ ನಾಂದಿ ಹಾಡಿದ ಬಸವಣ್ಣ

01:35 PM Mar 28, 2017 | |

ಹುಬ್ಬಳ್ಳಿ: ವಿಶ್ವಗುರು ಬಸವಣ್ಣ 12ನೇ ಶತಮಾನದಲ್ಲೇ ವರ್ಣ ಸಂಘರ್ಷ ರಹಿತ ಸಮಾಜಕ್ಕೆ ನಾಂದಿ ಹಾಡಿದ್ದರು. ಆದರೆ ವಿಜ್ಞಾನ ಮುಂದುವರಿದಿದ್ದರೂ ನಾವು ಜಾತಿ ಸಂಕೋಲೆಗಳಿಂದ ಹೊರಗೆ ಬಂದಿಲ್ಲವೆಂದು ಡಿಮಾನ್ಸ್‌ ನಿವೃತ್ತ ವೈದ್ಯಾಧಿಕಾರಿ ಡಾ|ಶಿವಶಂಕರ ಪೋಳ ವಿಷಾದ ವ್ಯಕ್ತಪಡಿಸಿದರು. 

Advertisement

ಕರ್ನಾಟಕ ಸರಕಾರ, ಕಂದಾಯ ಇಲಾಖೆ, ತಾಲೂಕು ಆಡಳಿತ ವತಿಯಿಂದ ಇಲ್ಲಿನ ಮಿನಿ ವಿಧಾನಸೌಧದ ತಾಪಂ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 12ನೇ ಶತಮಾನದ ದಲಿತ ವಚನಕಾರರ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಬಸವಣ್ಣ ದಲಿತರ ಮನೆಯಲ್ಲಿ ಅಂಬಲಿ ತೆಗೆದುಕೊಳ್ಳಬೇಕೆಂಬ ವ್ಯವಸ್ಥೆ ಮಾಡಿದರು.

ಮಹಿಳೆಯರು ಸೇರಿದಂತೆ ಎಲ್ಲರೂ ಶಿಕ್ಷಣವಂತರಾಗುವಂತೆ ಮಾಡಿದರು. ದಲಿತರಿಂದಲೇ ವಚನ ಬರೆಸಲು ಆಂದೋಲನ ಆರಂಭಿಸಿದ್ದರು. ಅಂದಿನ ಶರಣರು ಸಾಮಾಜಿಕ ಕ್ರಾಂತಿ ಮಾಡಿದರು. ಆದರೆ ಜಾತಿವಾದಿಗಳ ಕೈಯಲ್ಲಿ ಸಿಕ್ಕು ಇಂದಿಗೂ ನಾವು ಜಾತಿ ಸಂಕೋಲೆಯಿಂದ ಹೊರಗೆ ಬರಲು ಆಗುತ್ತಿಲ್ಲವೆಂದರು. 

ದಲಿತ ಹೋರಾಟಗಾರ ತಮ್ಮಣ್ಣ ಮಾದರ ಮಾತನಾಡಿ, ಕರ್ನಾಟಕ ನೆಲದಲ್ಲಿ 12ನೇ ಶತಮಾನದಲ್ಲಿ ಬಸವಣ್ಣ ಮತ್ತು ಅಲ್ಲಮಪ್ರಭುಗಳ ನೇತೃತ್ವದಲ್ಲಿ ದೊಡ್ಡ ಸಾಮಾಜಿಕ ಚಳವಳಿಯ ಕ್ರಾಂತಿ ನಡೆಯಿತು. ಇವರ ಜೊತೆಗೂಡಿ ಹೋರಾಡಿದ ಎಲ್ಲಾ ಶಿವಶರಣರು ವ್ಯವಸ್ಥೆಯ ವಿರುದ್ಧ ಬಂಡಾಯವೆದ್ದ ಬಂಡಾಯಗಾರರಾಗಿದ್ದಾರೆ ಎಂದರು.

ಭಾರತ ಸನಾತನ ಧರ್ಮ ಹೊಂದಿರುವ ರಾಷ್ಟ್ರ. ಇಲ್ಲಿ ಸನಾತನಧರ್ಮದೊಂದಿಗೆ ಜಾತಿ ವ್ಯವಸ್ಥೆ ಬೆಳೆದು ಬಂದಿದೆ. ಭಗವಾನ್‌ ಬುದ್ಧ ಎರಡು ಸಾವಿರ ವರ್ಷಗಳ ಹಿಂದೆ ಪುರೋಹಿತ ಶಾಹಿ ವ್ಯವಸ್ಥೆಯ ವಿರುದ್ಧ ಬಂಡೆದ್ದು ವಿಶ್ವವ್ಯಾಪಿಯಾಗಿ ಬೌದ್ಧ ಧರ್ಮ ಸ್ಥಾಪಿಸಿದ. ಆನಂತರ ಅವರ ಮಾರ್ಗದಲ್ಲಿ ನಡೆದವರೆಂದರೆ ಬಸವಣ್ಣನವರು. 

Advertisement

ಅವರು ಸಮಾಜದಲ್ಲಿದ್ದ ಜಾತಿ ವ್ಯವಸ್ಥೆ ತೊಡೆದು ಹಾಕುವ ಪ್ರಯತ್ನ ಮಾಡಿದರು. ಆದರೆ ಜಾತಿ ವ್ಯವಸ್ಥೆ ಹಾಗೆಯೇ ಉಳಿಯಿತು ಎಂದರು. ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಶಶಿಧರ ಮಾಡ್ಯಾಳ ಮಾತನಾಡಿ, ಮಹನೀಯರ ವಿಚಾರಗಳು ಜನಮಾನಸದಲ್ಲಿ ಸದಾವಿರಬೇಕೆಂಬ ವಿಚಾರದಿಂದ ಸರಕಾರ ಜಯಂತಿಗಳನ್ನು ಆಚರಿಸುತ್ತಿದೆ ಎಂದರು. 

ಎಲ್‌ಐಸಿ ಧಾರವಾಡ ಸಹಾಯಕ ಶಾಖಾಧಿಕಾರಿ ಅಶೋಕ ಪಿ. ಹೊಸಕೇರಿ, ಜೆಎಸ್‌ ಎಸ್‌ ಕಾಲೇಜ್‌ನ ಉಪನ್ಯಾಸಕ ಡಾ| ಸದಾಶಿವ ನಡುವಿನಕೇರಿ, ಕೆಸಿಡಿ ಕಾಲೇಜಿನ ಉಪನ್ಯಾಸಕ ಪೊ| ಎಸ್‌.ಎಸ್‌. ದೊಡ್ಡಮನಿ, ಹೆಸ್ಕಾಂನ ಸರೋಜಿನಿ ಭದ್ರಾಪುರ ಮಾತನಾಡಿದರು. ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಡಾ|ರಾಮಚಂದ್ರ ಹೊಸಮನಿ, ಡಾ| ಮಾರುತಿ ಹುಬ್ಬಳ್ಳಿ, ಪರುಶುರಾಮ  ಹೊರಕೇರಿ, ವೈ.ಎ. ದೊಡ್ಡಮನಿ ಮೊದಲಾದವರಿದ್ದರು. ಗುರುನಾಥ ಉಳ್ಳಿಕಾಶಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next