ವಿಕ್ಕಿ ಹಾಗೂ ಸಂಯುಕ್ತಾ ಹೆಗಡೆ ಅಭಿನಯದ “ಕಾಲೇಜ್ ಕುಮಾರ್’ ಚಿತ್ರ ಶುರುವಾಗಿದ್ದು ಮತ್ತು ಮುಗಿದಿದ್ದು ಗೊತ್ತೇ ಇದೆ. ಈಗ ಆಡಿಯೋ ಸಿಡಿ ಕೂಡ ಬಿಡುಗಡೆಯಾಗಿದೆ. ನಿರ್ಮಾಪಕ ಪದ್ಮನಾಭ ಆಡಿಯೋ ಬಿಡುಗಡೆ ಸಮಾರಂಭವನ್ನು ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಆಯೋಜಿಸಿದ್ದರು. ಅಂದಿನ ಹೈಲೈಟ್ ಧ್ರುವ ಸರ್ಜಾ, ಮಾಲಾಶ್ರೀ ಮತ್ತು ಸಚಿವ ಎ. ಮಂಜು. ಉಳಿದಂತೆ ಚಿತ್ರರಂಗದ ಅನೇಕ ಗಣ್ಯರು ಕುಮಾರನ ಹಾಡುಗಳ ಬಿಡುಗಡೆಗೆ ಸಾಕ್ಷಿಯಾದರು.
ಅಂದು ಹಾಡು, ಕುಣಿತ, ಹಾಸ್ಯದ ಹೊನಲು, ಮ್ಯಾಜಿಕ್, ಪುಟಾಣಿಗಳ ತರಹೇವಾರಿ ಡೈಲಾಗ್‌ಗಳ ಝಲಕ್ ಇತ್ಯಾದಿಯಿಂದಾಗಿ ಆ ವೇದಿಕೆ ರಂಗಾಗಿತ್ತು. ಧ್ರುವ ಸರ್ಜಾ ವೇದಿಕೆಗೆ ಬರುವವರೆಗೂ ಒಂದೇ ವೇಗದಲ್ಲಿ ನಡೆಯುತ್ತಿದ್ದ ಮನರಂಜನೆ ಕಾರ್ಯಕ್ರಮ, ಧ್ರುವ ಸರ್ಜಾ ವೇದಿಕೆಗೆ ಎಂಟ್ರಿಯಾಗುತ್ತಿದ್ದಂತೆ, ಇನ್ನಷ್ಟು ರಂಗಾಯಿತು. ಡೈಲಾಗ್ ಹೇಳುತ್ತಲೇ, “ನಿರ್ದೇಶಕ ಸಂತು ಅವರು ಸಾಕಷ್ಟು ಸಮಯ ತೆಗೆದುಕೊಂಡು ಈ ಚಿತ್ರ ಮಾಡಿದ್ದಾರೆ. ಇಂದಿನ ಹೀರೋ ಅರ್ಜುನ್ ಜನ್ಯ.
ನಾನು ಈ ಚಿತ್ರವನ್ನು ಮೊದಲ ದಿನವೇ ಚಿತ್ರಮಂದಿರದಲ್ಲಿ ವೀಕ್ಷಿಸುತ್ತೇನೆ’ ಎಂದರು ಧ್ರುವ. ನಿರ್ಮಾಪಕ ಪದ್ಮನಾಭ ಕೂಡ ಅಂದು ಎಂದಿಗಿಂತ ಉತ್ಸಾಹದಲ್ಲಿದ್ದರು. ಅದಕ್ಕೆ ಕಾರಣ, ವೇದಿಕೆ ಮೇಲೆ ಹೆಜ್ಜೆ ಹಾಕುತ್ತಿದ್ದ ನೃತ್ಯ ಕಲಾವಿದರು. ಅವರೊಂದಿಗೆ ಹೆಜ್ಜೆ ಹಾಕಿದ ಪದ್ಮನಾಭ್, “ಅರ್ಜುನ್ ಜನ್ಯ ಒಳ್ಳೆಯ ಹಾಡು ಕೊಟ್ಟಿದ್ದಾರೆ. ಇದು ಕಾಲೇಜ್ ಹುಡುಗನ ಸುತ್ತ ನಡೆಯೋ ಕಥೆ. ಈಗಿನ ಯೂತ್ಸ್ಗೆ ಬೇಕಾದ ಎಲ್ಲಾ ಅಂಶಗಳೂ ಇಲ್ಲಿವೆ.
ಇನ್ನು, ಪಶುವೈದ್ಯ ಕಾಲೇಜ್‌ನಲ್ಲಿ ಚಿತ್ರೀಕರಣ ಮಾಡಲು ಸಚಿವ ಮಂಜು ಅವರು ಅನುಮತಿ ಕೊಡಿಸಿದ್ದಾರೆ. ಅವರಿಗೆ ಚಿತ್ರತಂಡದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ’ ಅಂದರು ಅವರು. ನಿರ್ದೇಶಕ ಸಂತು ಈ ಚಿತ್ರದ ಮೂಲಕ ಹೆಸರು ಬದಲಿಸಿಕೊಂಡಿದ್ದಾರೆ. ಅವರು ತಮ್ಮ ತಂದೆಯ ಹೆಸರು ಸೇರಿಸಿಕೊಂಡು ಇಲ್ಲಿ ಹರಿ ಸಂತು ಆಗಿದ್ದಾರೆ. “ಅರ್ಜುನ್ ಜನ್ಯ ಅವರಿಗೆ ಕಥೆ ಹೇಳಿದಾಗ, ಯಾರಿಗೂ ಹೇಳಬೇಡ ಅಂತ ಅವರೇ, ನಿರ್ಮಾಪಕರನ್ನು ಪರಿಚಯಿಸಿದರು.
ನಾನಿಲ್ಲಿ ಹೆಚ್ಚು ಖರ್ಚು ಮಾಡಿಸಿದ್ದೇನೆ. ಕಥೆಗೆ ಇಮೇಜ್ ಇರುವಂತಹ ನಾಯಕ ಅವಶ್ಯಕತೆ ಇರಲಿಲ್ಲ. ಇಲ್ಲಿ ಫೈಟ್ ಇಲ್ಲ. ಒಳ್ಳೆಯ ಲವ್‌ಸ್ಟೋರಿ ಇದೆ. ಚಿತ್ರದಲ್ಲಿ ವಿಕ್ಕಿ, ಸಂಯುಕ್ತಾ ಹೆಗಡೆ, ರವಿಶಂಕರ್ ಮತ್ತು ಶ್ರುತಿ ನಾಲ್ಕು ಪಿಲ್ಲರ್ ಇದ್ದಂತೆ’ ಅಂದರು ಹರಿ ಸಂತು. ಅರ್ಜುನ್ ಜನ್ಯ ಅಂದು ಹಾಡುವುದರ ಜತೆ ನಾಯಕಿ ಸಂಯುಕ್ತಾ ಹೆಗಡೆ ಜತೆ ಹೆಜ್ಜೆ ಹಾಕಿದರು. ರವಿಶಂಕರ್‌ಗೆ ಒಳ್ಳೆಯ ಪಾತ್ರ ಸಿಕ್ಕ ಖುಷಿ ಇದೆ. ಅವರಿಗೆ ಆರ್ಮುಗಂ ಕೋಟೆಯಿಂದ ಹೊರ ಬಂದಿದ್ದೇನೆ ಎಂಬ ವಿಶ್ವಾಸವಿದೆ.
ಶ್ರುತಿ ಅವರಿಗೆ ರವಿಶಂಕರ್ ಜತೆ ನಟಿಸಿದ್ದು ಒಳ್ಳೆಯ ಅನುಭವ ಆಗಿದೆ. “ಅವರ ದೊಡ್ಡ ಅಭಿಮಾನಿ ನಾನು’ ಅಂದರು ಶ್ರುತಿ. ಚಿತ್ರತಂಡ ಕುರಿತು ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ತಂಡಕ್ಕೆ ಶುಭಹಾರೈಸಿದರು. ಸಚಿವ ಎ. ಮಂಜು, ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು. ಮಿಕ್ಕಂತೆ ನಾಯಕ ವಿಕ್ಕಿ, ನಾಯಕಿ ಸಂಯುಕ್ತಾ ಹೆಗಡೆ ಮಾತನಾಡಿದರು.