ಉಡುಪಿ: ಸರಕಾರಿ ಪದವಿ ಕಾಲೇಜಿನಲ್ಲಿ 2021-22ನೇ ಸಾಲಿಗೆ ನೇಮಕಗೊಂಡು ಕರ್ತವ್ಯ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೆಪ್ಟಂಬರ್ ಹಾಗೂ ಅಕ್ಟೋಬರ್ ತಿಂಗಳ ಗೌರವಧನ ಪಾವತಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.
ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ಯಿಂದ ಅನುಮೋದ® ೆಗೊಂಡಿರುವ ಅಭ್ಯರ್ಥಿಗಳಿಗೆ ಮಾತ್ರ ಗೌರವಧನ ನೀಡಬೇಕು. ಅನುಮೋದನೆ ಪಡೆಯದೆ ಗೌರವಧನ ನೀಡಿದಲ್ಲಿ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ, ಕಾರ್ಯಾ ಭಾರಕ್ಕೆ ಪೂರಕವಾಗಿ ನೇಮಕಾತಿ ನಡೆದಿರಬೇಕು. ತಪ್ಪು ಮಾಹಿತಿ ನೀಡಿ ಗೌರವಧನ ಪಾವತಿಸುವಂತಿಲ್ಲ. ಸೆಪ್ಟಂಬರ್ ಹಾಗೂ ಅಕ್ಟೋಬರ್ ತಿಂಗಳಿಗೆ ಮಾತ್ರ ಪಾವತಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಕಡ್ಡಾಯವಾಗಿ ನಿರ್ದಿಷ್ಟ ತಿಂಗಳ ಗೌರವಧನ ಶೀಘ್ರ ಪಾವತಿಸಬೇಕು. ವಿಳಂಬ ಮಾಡುವುದು ಅಥವಾ ತಮ್ಮಲ್ಲೇ ಅನುದಾನ ಉಳಿಸಿಕೊಳ್ಳುವುದನ್ನು ಮಾಡಬಾರದು ಎಂದು ಪ್ರಾಂಶುಪಾಲರಿಗೆ ಇಲಾಖೆ ತಿಳಿ ಸಿದೆ.
ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಸೇರಿದಂತೆ ಮಂಗಳೂರು ವಿಭಾಗದ 37 ಸರಕಾರಿ ಪದವಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೆಪ್ಟಂಬರ್, ಅಕ್ಟೋಬರ್ ತಿಂಗಳ ಗೌರವಧನಕ್ಕಾಗಿ 3.19 ಕೋ.ರೂ. ಅನುದಾನದ ಆವಶ್ಯಕತೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಉಪನ್ಯಾಸಕರ ಆಗ್ರಹ :
ಆಯಾ ತಿಂಗಳ ಗೌರವಧನವನ್ನು ಮುಂದಿನ ತಿಂಗಳ 5ನೇ ತಾರೀಕಿನೊಳಗೆ ನೀಡಬೇಕು. ಕೆಲವೊಂದು ತಿಂಗಳು ತೀರ ವಿಳಂಬವಾಗುತ್ತಿದೆ. ಇದರಿಂದ ಸರಕಾರದ ಗೌರವಧನವನ್ನೇ ನಂಬಿಕೊಂಡಿರುವ ಅನೇಕ ಉಪನ್ಯಾಸಕರ ಕುಟುಂಬಗಳಿಗೆ ಸಮಸ್ಯೆಯಾಗುತ್ತಿದೆ. ಕೆಲವೊಮ್ಮೆ ನಾಲ್ಕೈದು ತಿಂಗಳು ವೇತನ ವಿಳಂಬವಾಗುತ್ತದೆ. ನಿರ್ದಿಷ್ಟ ತಿಂಗಳ ವೇತನವನ್ನು ನಿರ್ದಿಷ್ಟ ದಿನಾಂಕದ ಒಳಗೆ ನೀಡುವ ವ್ಯವಸ್ಥೆಯನ್ನು ಸರಕಾರ ಜಾರಿ ಮಾಡಬೇಕು. ಅಲ್ಲದೆ, ಕಡಿಮೆ ಕಾರ್ಯಭಾರದ ನೆಪವೊಡ್ಡಿ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ತೆರವುಗೊಳಿಸಬಾರದು ಎಂದು ಅತಿಥಿ ಉಪನ್ಯಾಸಕರು ಆಗ್ರಹಿಸಿದ್ದಾರೆ.