Advertisement
ಭಾರತದಲ್ಲಿ ಕ್ರಿಕೆಟ್ ಅಭಿಮಾನಿಯಾಗಿರುವ ಎಲ್ಲರಿಗೂ ಗೊತ್ತಿರುವ ಸಂಗತಿಗಳನ್ನೇ ಇಲ್ಲಿ ಮತ್ತೂಮ್ಮೆ ಹೇಳಲಾಗಿದೆ. ಅಷ್ಟೇ! ಸಚಿನ್ ಎಂಬ ಸಾಕ್ಷ್ಯಚಿತ್ರದ ಆರಂಭದಲ್ಲೇ ಒಂದು ಮಾತು ಕೇಳಿಸುತ್ತದೆ: ಸಚಿನ್ ಒಬ್ಬ ಹೀರೋ, ಮಾದರಿ ವ್ಯಕ್ತಿ ಮಾತ್ರವಲ್ಲ, ಅವರೊಂದು “ಭಾವನೆ’…ಇದನ್ನು ಕೇಳುವ ಪ್ರೇಕ್ಷಕರು “ಭಾವನೆ’ಗೊಳಗಾಗಿ ಸಚಿನ್ ಹೇಗೆ ಭಾವನಾತ್ಮಕವಾಗಿ ಭಾರತವನ್ನು ಆವರಿಸಿಕೊಂಡಿದ್ದಾರೆ ಅಥವಾ ಅವರು ಹೇಗೆ ಭಾರತದ “ಭಾವನೆ’ಯಾಗುತ್ತಾರೆ ಎಂಬುದನ್ನೆಲ್ಲ ಚಿತ್ರದಲ್ಲಿ ನೋಡಬಹುದು ಎಂಬ ಊಹೆ ಮಾಡಿಕೊಳ್ಳುತ್ತಾರೆ.
Related Articles
Advertisement
ವಾಸ್ತವವಾಗಿ ಭಾರತದ ಕ್ರಿಕೆಟ್ ಹುಚ್ಚರಿಗೆಲ್ಲ ಈಗಾಗಲೇ ಏನು ಗೊತ್ತಿದೆಯೋ ಅದನ್ನೇ ಮತ್ತೂಮ್ಮೆ ಇಲ್ಲಿ ಹೇಳಲಾಗಿದೆ. ಹಿನ್ನೆಲೆಯಲ್ಲಿ ಸಚಿನ್ ನಿರೂಪಣೆ, ಮುನ್ನೆಲೆಯಲ್ಲಿ ಹಳೆಯ ಪಂದ್ಯಗಳ ವೀಡಿಯೋಗಳು ಒಂದಾದ ಮೇಲೊಂದರಂತೆ ಬರುತ್ತಾ ಹೋಗುತ್ತವೆ. ನಡು ನಡುವೆ ಸಚಿನ್‌ಗಿರುವ ಸಂಗೀತ ಪ್ರೀತಿ, ಗೆಳೆಯರೊಂದಿಗೆ, ಕುಟುಂಬದೊಂದಿಗೆ ಇರುವ ನಿಕಟತೆ, ಆತ್ಮೀಯತೆ, ಅವರಿಗೆ ಕಾರ್ ರೇಸ್ ಕುರಿತಿರುವ ಸೆಳೆತ ಇವೆಲ್ಲವನ್ನು ಹೇಳಲಾಗಿದೆ.
ಇದಕ್ಕೂ ಬಳಸಲಾಗಿರುವುದು ಹಳೆಯ ವೀಡಿಯೋಗಳನ್ನು! ಆದ್ದರಿಂದಲೇ ಇಲ್ಲಿ ಸಚಿನ್ ನಟಿಸಿದ್ದಾರೆ ಎಂಬ ಮಾತು ಅರ್ಥ ಕಳೆದುಕೊಳ್ಳುವುದು. ಆದ್ದರಿಂದಲೇ ಇದೊಂದು ಸಾಕ್ಷ್ಯಚಿತ್ರವಾಗುವುದು. ಸಿನಿಮಾವೊಂದರಲ್ಲಿ ಪುನರ್‌ಸೃಷ್ಟಿಯಿರುತ್ತದೆ, ಸಾಕ್ಷ್ಯಚಿತ್ರದಲ್ಲಿ ಹಳೆಯ ಸಾಕ್ಷಿಗಳ ಸಂಗ್ರಹವಿರುತ್ತದೆ. ಹಳೆಯ ವೀಡಿಯೋಗಳು ಬಳಸಲ್ಪಡುತ್ತವೆ, ಹಲವರ ಪ್ರತಿಕ್ರಿಯೆಗಳು, ಕೆಲ ವಸ್ತುಗಳನ್ನೆಲ್ಲ ಹಾಜರು ಮಾಡಲಾಗುತ್ತದೆ. ಈ ಸಿನಿಮಾದಲ್ಲಿ ಅದನ್ನಷ್ಟೇ ಶ್ರದ್ಧೆಯಿಂದ ಮಾಡಿರುವುದರಿಂದ….
ಅದೇ ಹಳೆಯ ಚಾಪೆಲ್, ಅಜರ್ ವಿವಾದ: ಸಚಿನ್ ತಮ್ಮ ಆತ್ಮಕಥನ ಪ್ಲೇಯಿಂಗ್ ಇಟ್ ಮೈ ವೇನಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಗ್ರೆಗ್ ಚಾಪೆಲ್‌ಗೆ ನೇರವಾಗಿ ಬೈದಿದ್ದರು. ಚಾಪೆಲ್ ಭಾರತ ಕ್ರಿಕೆಟನ್ನು ಒಡೆದು ಆಳಲು ಬಯಸಿದ್ದರು ಎಂದು ಆರೋಪಿಸಿದ್ದರು. ಇಲ್ಲೂ ಅದನ್ನು ಮಾಡಲಾಗಿದೆ. ಅದಕ್ಕೂ ಹೆಚ್ಚಿನ ಒಳಗುದಿಗಳು ಇಲ್ಲಿ ದಕ್ಕುವುದಿಲ್ಲ. ಸಚಿನ್ ತಮ್ಮ 23ನೇ ವಯಸ್ಸಿನಲ್ಲಿ ಮೊದಲ ಬಾರಿ ನಾಯಕನಾದಾಗ ತಂಡದಲ್ಲಿ ಅಜರುದ್ದೀನ್ ಎಂಬ ಹಿರಿಯ ಹುಲಿಯಿತ್ತು.
ಸಚಿನ್ ಜನಪ್ರಿಯತೆ ಏರುತ್ತಾ ಹೋದಂತೆಲ್ಲ ಅಜರುದ್ದೀನ್ ಅಸಹನೆಗೊಳಗಾಗುತ್ತಾರೆ, ಎರಡು ಶಕ್ತಿಕೇಂದ್ರಗಳು ಹುಟ್ಟಿಕೊಳ್ಳುತ್ತವೆ, ತಂಡದಲ್ಲಿ ಬಿರುಕು ತನ್ನಿಂತಾನೇ ಉದ್ಭವವಾಗುತ್ತದೆ. ಇಂತಹ ಹೊತ್ತಿನಲ್ಲಿ ಅಜರ್‌ಗಾಗುವ ಅಸೂಯೆಯನ್ನು ಹಳೆಯ ವೀಡಿಯೋಗಳ ಮೂಲಕ ಪರಿಣಾಮಕಾರಿಯಾಗಿ ತೋರಿಸಲಾಗುತ್ತದೆ. ಇದು ಸಾಕ್ಷ್ಯಚಿತ್ರದಿಂದಾಗಿರುವ ಲಾಭವೆನ್ನಬೇಕು! ಬಹುಶಃ ಇದನ್ನು ಪುನರ್ ಸೃಷ್ಟಿ ಮಾಡಿದ್ದರೆ ಇಷ್ಟು ಪ್ರಭಾವ ಸಾಧ್ಯವಿರಲಿಲ್ಲವೆಂದು ಖಚಿತವಾಗಿ ಹೇಳಬಹುದು.
ಎಲ್ಲವನ್ನೂ ಕೊಟ್ಟ ಕ್ರಿಕೆಟ್ ಎಲ್ಲವನ್ನೂ ಕಸಿಯಿತು: 2007ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ದ್ರಾವಿಡ್ ನಾಯಕತ್ವದಲ್ಲಿ ವೆಸ್ಟ್‌ಇಂಡೀಸ್‌ಗೆ ತೆರಳಿತ್ತು. ಅಲ್ಲಿ ಅಪಮಾನಕಾರಿಯಾಗಿ ಸೋತು ಭಾರತಕ್ಕೆ ಮರಳಿತು. ಆಗ ಸಚಿನ್ ಮನೆ ಮುಂದೆ 150 ಕಮಾಂಡೋಗಳು ರಕ್ಷಣೆಗೆ ಜಮಾಯಿಸಿರುತ್ತಾರೆ. ಮನೆಯೊಳಗೂ ಮೂವರು ಕಮಾಂಡೋಗಳಿರುತ್ತಾರೆ. ಭಾರತದ ಸೋಲಿನಿಂದ ರೊಚ್ಚಿಗೆದ್ದಿದ್ದ ಜನತೆ ಅಷ್ಟು ಗಲಾಟೆ ಮಾಡಿರುತ್ತಾರೆ. ಆ ಹಂತದಲ್ಲಿ ಸಚಿನ್ 7 ದಿನ ಮನೆಯಿಂದ ಹೊರಹೋಗುವುದಿಲ್ಲ. ಆಗವರಿಗೆ ಅನಿಸಿದ್ದಿಷ್ಟು: “ಎಲ್ಲವನ್ನೂ ಕೊಟ್ಟ ಕ್ರಿಕೆಟ್ ತನ್ನಿಂದ ಎಲ್ಲವನ್ನೂ ಕಸಿದುಕೊಂಡಿತು’. ಆಗಲೂ ಅವರು ಕುಸಿಯುವುದಿಲ್ಲ. ವಿಶ್ವಕಪ್ ಗೆದ್ದೇ ತೀರಬೇಕು ಎಂಬ ತಮ್ಮ ಹಂಬಲಕ್ಕಾಗಿ ನಿವೃತ್ತಿ ಯೋಚನೆಯನ್ನು ಬದಿಗೊತ್ತುತ್ತಾರೆ. 2011ರಲ್ಲಿ ಸಚಿನ್ ಅದರಲ್ಲಿ ಯಶಸ್ವಿಯಾಗುತ್ತಾರೆ.
ಕಣ್ಣಂಚು ಒದ್ದೆಯಾಗುತ್ತೆ: ಸಚಿನ್ ಎಂಬ ಭಾರತ ರತ್ನ ನಿವೃತ್ತಿಯಾಗುವುದು ದೇಶದಲ್ಲಿ ದೊಡ್ಡ ಸುದ್ದಿಯಾಗಿತ್ತು. ಕಡೆಯ ಪಂದ್ಯವನ್ನು ಅವರು ವೆಸ್ಟ್‌ಇಂಡೀಸ್ ವಿರುದ್ಧ ಆಡಿ ವಿದಾಯ ಹೇಳುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಹೊತ್ತಿನಲ್ಲಿ ಜನರ ಕಣ್ಣಿನಲ್ಲಿ ನೀರಾಡುತ್ತಿರುತ್ತದೆ. ಬಹುಶಃ ಆಗ ಅಳದ ಭಾರತದ ಕ್ರಿಕೆಟ್ ಅಭಿಮಾನಿ ಇರಲಿಕ್ಕಿಲ್ಲ. ಅದೇ ಹಳೆಯ ವೀಡಿಯೋವನ್ನು ನಿಮ್ಮೆದುರು ಮತ್ತೆ ಇಟ್ಟಾಗ ಮತ್ತೂಮ್ಮೆ ನೀವು ಭಾವುಕರಾಗುತ್ತೀರಿ, ಬಹುಶಃ ನೀವು ಅಳುತ್ತೀರಿ. ಹಿಂದೆ ಅದನ್ನು ನೇರವಾಗಿ ನೋಡಿ ಬಿಕ್ಕಿದವರೂ ಈಗ ಮತ್ತೂಮ್ಮೆ ಬಿಕ್ಕುತ್ತಾರೆ. ಅಷ್ಟರಮಟ್ಟಿಗೆ ಸಚಿನ್ ಸಾಕ್ಷ್ಯಚಿತ್ರ ಯಶಸ್ವಿಯಾಗಿದೆ!
ವರ್ಷದ ಹಿಂದೆ ಧೋನಿ ಕುರಿತ ಎಂ.ಎಸ್.ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ ಬಿಡುಗಡೆಯಾದಾಗ ಜನರ “ಭಾವನೆ’ಗಳು ಅದಲು ಬದಲಾಗಿದ್ದವು. ಇದೊಂದು ಸಾಕ್ಷ್ಯಚಿತ್ರವಾಗಬಹುದೆಂಬ ಆತಂಕದಿಂದ ಸಿನಿಮಾವನ್ನು ಹೊರತಂದು ಸತ್ಯಘಟನೆಗಳಿಗೆ ಮರುಜೀವ ನೀಡಿ ಕಲಾತ್ಮಕ ಸೃಷ್ಟಿಯನ್ನಾಗಿಸಲಾಗಿತ್ತು. ಜನರೂ ಅದನ್ನು ಅಗಾಧ ಪ್ರೀತಿಯಿಂದ ಸ್ವೀಕರಿಸಿದ್ದರು. ಸಚಿನ್ ಎ ಬಿಲಿಯನ್ ಡ್ರೀಮ್ಸ್ ಸಿನಿಮಾವನ್ನೂ ಅಂತಹದ್ದೇ ಬಿಲಿಯನ್ ನಿರೀಕ್ಷೆ, ನಂಬಿಕೆಗಳಿಂದ ನೋಡುವಂತಿಲ್ಲ. ಇದು ಅಭಿಮಾನಿಗಳಿಗೆ ಒಂದು ಸಂಗ್ರಹಯೋಗ್ಯ ಅತ್ಯುತ್ತಮ ಸಾಕ್ಷ್ಯಚಿತ್ರ. ಆದರೆ ಸಿನಿಮಾಪ್ರೇಮಿಗಳ ತುಡಿತವನ್ನು ತಣಿಸುವ ಕಲೆಯಲ್ಲ!
ಚಿತ್ರ: ಸಚಿನ್: ಎ ಬಿಲಿಯನ್ ಡ್ರೀಮ್ಸ್ನಿರ್ಮಾಣ: ಕಾರ್ನಿವಾಲ್ ಮೋಷನ್ ಪಿಕ್ಚರ್ಸ್
ನಿರ್ದೇಶನ: ಜೇಮ್ಸ್ ಎರ್ಕಿನ್
ತಾರಾಗಣ: ಸಚಿನ್ ತೆಂಡುಲ್ಕರ್, ಅರ್ಜುನ್ ತೆಂಡುಲ್ಕರ್, ಅಂಜಲಿ, ಸಾರಾ ಇತರರು * ನಿರೂಪ