ಹುಬ್ಬಳ್ಳಿ: ಇಲ್ಲಿನ ಕಾರವಾರ ರಸ್ತೆ ಕೆಂಪಕೆರೆಯನ್ನು ಕೊಳಚೆ ಪ್ರದೇಶವೆಂದು ಘೋಷಣೆಗೆ ಅಗತ್ಯವಾದ ದಾಖಲೆಗಳನ್ನು ಸ್ಥಳೀಯ ಪ್ರದೇಶದ ನಿವಾಸಿಗಳಿಂದ ಸಂಗ್ರಹಿಸಿ ಕ್ರಮ ಕೈಗೊಳ್ಳಬೇಕೆಂದು ಶಾಸಕ ಪ್ರಸಾದ ಅಬ್ಬಯ್ಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ಬೆಳಗ್ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಕುಂದುಕೊರತೆ ಆಲಿಸಿದ ನಂತರ ಮಾತನಾಡಿದ ಅವರು, ಇಲ್ಲಿ ಸುಮಾರು 70 ಮನೆಗಳಿದ್ದು, ಪ್ರತಿ ಮನೆ ಮನೆಯ ಸರ್ವೇ ಕಾರ್ಯ ನಡೆಸಿ, ಈ ಪ್ರದೇಶದ ಸರ್ವೇ ನಡೆಸಿ ಹದ್ದುಬಸ್ತು ಮಾಡಬೇಕು. ಎಲ್ಲ ಕೆಲಸಗಳನ್ನು ಕೈಗೊಂಡು ಪ್ರಗತಿಯ ಬಗ್ಗೆ 2-3 ದಿನದಲ್ಲಿ ವರದಿ ಸಲ್ಲಿಸುವಂತೆ ತಹಶೀಲ್ದಾರ್ ಹಾಗೂ ಸ್ಲಂ ಬೋರ್ಡ್ ಅಧಿಕಾರಿಗಳಿಗೆ ಸೂಚಿಸಿದರು.
ಸ್ಥಳೀಯ ನಿವಾಸಿಗಳ ಪ್ರಮುಖ ಬೇಡಿಕೆಯಾದ ಹೊಸ ಶೌಚಾಲಯ, ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ನೀರಿನ ಬವಣೆ ನೀಗಿಸಲು ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಕೆಂಪಕೆರೆಯ ಸುತ್ತಲಿನ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಕೂಡಲೇ ಸಿಸಿ ಟಿವಿ, ಬೀದಿದೀಪ ಅಳವಡಿಸಬೇಕು. ಪೊಲೀಸರ ಗಸ್ತು ಹೆಚ್ಚಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಎಂಎಸ್‌ಐಎಲ್ ಮಳಿಗೆ ಸ್ಥಳಾಂತರಿಸಿ: ಇಲ್ಲಿನ ಎಂಎಸ್‌ಐಎಲ್ ಮದ್ಯದ ಮಳಿಗೆಯಿಂದ ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಜನವಸತಿ ಪ್ರದೇಶದಲ್ಲೇ ಮದ್ಯದ ಮಳಿಗೆ ಇರುವುದರಿಂದ ಪ್ರತಿದಿನ ಜಗಳಗಳುಂಟಾಗುತ್ತಿವೆ. ಕೂಡಲೇ ಅದನ್ನು ಇಲ್ಲಿಂದ ಬೇರೆಡೆ ಸ್ಥಳಾಂತರಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮುಖಂಡರಾದ ಪ್ರಭು ಪ್ರಭಾಕರ, ಪ್ರಶಾಂತ ಮನಮುಟಗಿ, ಶ್ರೀಶೈಲ ಚಲವಾದಿ, ತಹಸೀಲ್ದಾರ್ ಶಶಿಧರ ಮಾಡ್ಯಾಳ, ಪಾಲಿಕೆ ಅಧಿಕಾರಿಗಳಾದ ವಿಜಯಕುಮಾರ, ರಿಯಾಜ, ಜಲಮಂಡಳಿಯ ಶಿಂಗೋಟಿ, ಸ್ಲಂ ಬೋರ್ಡ್‌ನ ಎಚ್. ನಾಗರಾಜ, ವಿ.ಆರ್. ಶಿರೂರು, ಎಚ್.ಜಿ. ಮಂಜುನಾಥ, ಹಳೇ ಹುಬ್ಬಳ್ಳಿ ಠಾಣೆ ಇನ್ಸ್‌ಪೆಕ್ಟರ್ ಅಶೋಕ ಚವ್ಹಾಣ, ಅಬಕಾರಿ ಇಲಾಖೆ ಅಧಿಕಾರಿಗಳು ಮೊದಲಾದವರಿದ್ದರು.