Advertisement

ಮುಂಡೋಳೆ: ಕುಸಿಯುತ್ತಿದೆ ಸಂಪರ್ಕ ರಸ್ತೆ 

12:52 PM Jun 11, 2018 | |

ಬಡಗನ್ನೂರು: ಪಟ್ಟೆ – ಅಂಬಟೆಮೂಲೆ -ಈಶ್ವರಮಂಗಲ ಸಂಪರ್ಕ ರಸ್ತೆಯ ಮುಂಡೋಳೆ ಬಳಿ ಹೊಳೆಯ ಬಳಿ ಸಾಗುವ ರಸ್ತೆ ಕುಸಿತಗೊಳ್ಳುತ್ತಿದ್ದು, ಸಂಪರ್ಕ ಕಡಿತದ ಭೀತಿ ಎದುರಾಗಿದೆ. ಯು ಆಕಾರದಲ್ಲಿ ಹರಿಯುವ ಸೀರೆ ಹೊಳೆ ಬಳಿಯ ಈ ಸಂಪರ್ಕ ರಸ್ತೆ ಸಾಗುತ್ತದೆ. ತೀವ್ರ ಮಳೆ ಸಂದರ್ಭ ಎರಡೂ ಬದಿಗಳ ಹೊಳೆಯಲ್ಲಿ ನೀರು ತುಂಬಿ ಸಮಾಗಮವಾಗುತ್ತದೆ. ರಸ್ತೆ ನಿರಂತರ ಕೊರೆತದಿಂದ ದಿನೇದಿನೇ ಕುಸಿಯುತ್ತಿದೆ.

Advertisement

ಮುಂಡೋಳೆ, ಅಂಬಟೆಮೂಲೆ, ಪಾದೆಕರ್ಯ ಸೇರಿದಂತೆ ವಿವಿಧೆಡೆಗಳಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಈ
ರಸ್ತೆಯ ಮೂಲಕ ಸಾಗಿ ಮುಖ್ಯರಸ್ತೆಯನ್ನು ಸಂಪರ್ಕಿಸುತ್ತಾರೆ. ಬೆಟ್ಟಂಪಾಡಿ, ಪಾಣಾಜೆ, ಕೇರಳ ಭಾಗಗಳು, ಪುತ್ತೂರು ಕಡೆಗಳಿಂದ ಈಶ್ವರಮಂಗಲಕ್ಕೆ ತೆರಳುವವರು ಈ ಸಂಪರ್ಕ ರಸ್ತೆಯ ಸಾಗುತ್ತಾರೆ. ಮಕ್ಕಳ ಸಹಿತ, ವಾಹನಗಳ ಸಂಚಾರಕ್ಕೆ ಈ ಸ್ಥಿತಿ ಅಪಾಯಕಾರಿಯಾಗಿದೆ.

ತಡೆ ನಿರ್ಮಿಸಬೇಕು
ನೀರಿನ ಹೊಡೆತಕ್ಕೆ ಹಾಗೂ ಮುಳುಗಡೆಯಾದ ಸಂದರ್ಭ ದಿನದಿಂದ ದಿನಕ್ಕೆ ರಸ್ತೆಯ ಒಂದು ಬದಿಯಿಂದ ಕುಸಿತ ಉಂಟಾಗುತ್ತಿದ್ದು, ಸಮರ್ಪಕ ತಡೆ ನಿರ್ಮಾಣದ ಮೂಲಕ ಹಾಗೂ ರಸ್ತೆಯನ್ನು ಮೇಲ್ಮಟ್ಟಕ್ಕೆ ಏರಿಕೆ ಮಾಡಿ ಅಪಾಯ ದೂರ ಮಾಡಬೇಕಾದ ಆವಶ್ಯಕತೆ ಇದೆ. 

ಕಿರಿದಾದ ಸೇತುವೆ
ಈ ಜಾಗದಲ್ಲಿ ಕಿರಿದಾದ ಸೇತುವೆಯೂ ಇದ್ದು, ಮಳೆಗಾಲದಲ್ಲಿ ಹೊಳೆಯಲ್ಲಿ ಹರಿದು ಬರುವ ಮರದ ತುಂಡುಗಳು, ಕಸ ಕೆಳಭಾಗದಲ್ಲಿ ಶೇಖರಣೆಗೊಂಡು ಬೇಗನೇ ಮುಳುಗಡೆಯಾಗುತ್ತದೆ. ಕಿರುಸೇತುವೆಯ ಕೆಳ ಭಾಗದಲ್ಲಿನ ಸಣ್ಣ ನೀರಾವರಿ ಇಲಾಖೆಯ ಅವೈಜ್ಞಾನಿಕ ಅಣೆಕಟ್ಟಿನಲ್ಲೂ ಕಸ ಶೇಖರಣೆಗೊಳ್ಳುತ್ತದೆ.

ಗಮನ ಹರಿಸಿ
ದಿನಂಪ್ರತಿ ಹಲವು ಶಾಲಾ -ಕಾಲೇಜು ಮಕ್ಕಳು ಇದೇ ರಸ್ತೆಯಲ್ಲಿ ಸಾಗುತ್ತಾರೆ. ಈಶ್ವರಮಂಗಲಕ್ಕೆ ಹೆಚ್ಚು ಪ್ರಯೋಜನಕಾರಿ ಸಂಪರ್ಕ ರಸ್ತೆಯೂ ಹೌದು. ದಿನದಿಂದ ದಿನಕ್ಕೆ ರಸ್ತೆ ಕುಸಿತ ಉಂಟಾಗುತ್ತಿರುವುದು, ರಸ್ತೆಯ ಎರಡೂ ಬದಿಯೂ ಹೊಳೆ ತುಂಬಿ ಹರಿಯುತ್ತಿರುವುದರಿಂದ ಹೆಚ್ಚು ಅಪಾಯಕಾರಿಯಾಗಿದ್ದು, ರಕ್ಷಣಾ ಕ್ರಮಕ್ಕಾಗಿ ಜನಪ್ರತಿನಿಧಿಗಳು ಗಮನಹರಿಸಬೇಕು.
 - ಲಿಂಗಪ್ಪ ಗೌಡ ಮೋಡಿಕೆ
    ಪೋಷಕರು

Advertisement

ಮನವಿ
ಇಲ್ಲಿನ ಸಮಸ್ಯೆಯ ಕುರಿತು ಗ್ರಾ. ಪಂ. ನಿಂದ ಹಲವು ಬಾರಿ ನಿರ್ಣಯ ಕೈಗೊಂಡು ಜಿ.ಪಂ.ಗೆ ಕಳುಹಿಸಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೆ ಇಲ್ಲ. ಸಣ್ಣ ನೀರಾವರಿ ಇಲಾಖೆಯವರು ನಿರ್ಮಿಸಿದ ಅಣೆಕಟ್ಟನ್ನೂ ಪ್ರಯೋಜನಕಾರಿಯಾಗುವಂತೆ ಅಭಿವೃದ್ಧಿಪಡಿಸಬೇಕು, ರಸ್ತೆಯ ಭಾಗಕ್ಕೆ ಸರಿಯಾದ ತಡೆಗೋಡೆ ನಿರ್ಮಿಸಬೇಕು. ಈ ಕುರಿತು ಶಾಸಕರಿಗೂ ಗ್ರಾ.ಪಂ.ನಿಂದ ಮನವಿ ಮಾಡಲಾಗುವುದು.
ಕೇಶವ ಗೌಡ ಕನ್ನಾಯ
ಅಧ್ಯಕ್ಷರು, ಬಡಗನ್ನೂರು ಗ್ರಾ. ಪಂ

ರಾಜೇಶ್‌ ಪಟ್ಟೆ 

Advertisement

Udayavani is now on Telegram. Click here to join our channel and stay updated with the latest news.

Next