ಕಾಣಿಯೂರು: ಶೌಚಾಲಯದ ಹಳೆಯ ಗೋಡೆಯನ್ನು ಕೆಡವುತ್ತಿದ್ದ ವೇಳೆ ಮಣ್ಣಿನ ಇಟ್ಟಿಗೆಯ ಗೋಡೆ ಮೈಮೇಲೆ ಕುಸಿದು ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಕಾಣಿಯೂರು ಸಮೀಪದ ಎಣ್ಮೂರು ಗ್ರಾಮದ ನರ್ಲಡ್ಕದಲ್ಲಿ ಸಂಭವಿಸಿದೆ. ನೆರೆಯ ಬೀಪಾತುಮ್ಮ (51) ಮತ್ತು ನೆಬಿಸಾ (45) ಮೃತಪಟ್ಟವರು.
ನರ್ಲಡ್ಕ ನಿವಾಸಿ ಹರೀಶ ನಾಯ್ಕ ಅವರ ಮನೆಯ ಹಳೆಯ ಶೌಚಾಲಯದ ಗೋಡೆ ಕೆಡಹುವ ವೇಳೆ ಈ ಘಟನೆ ಸಂಭವಿಸಿದೆ. ಹೊಸ ಕಟ್ಟಡ ಕಟ್ಟುವ ಉದ್ದೇಶದಿಂದ ಹಳೆಯ ಗೋಡೆಯನ್ನು ಕೆಡಸುವ ಕೆಲಸ ಮಾಡಲಾಗುತ್ತಿತ್ತು. ಇತರ ಕೆಲಸಗಾರರ ಜತೆ ಸಮೀಪದ ಮನೆಯ ಬೀಪಾತುಮ್ಮ ಮತ್ತು ನೆಬಿಸಾ ಅವರು ಕೆಲಸದಲ್ಲಿ ನಿರತರಾಗಿದ್ದಾಗ ಇಟ್ಟಿಗೆಯ ಗೋಡೆ ಇವರ ಮೇಲೆ ಕುಸಿದು ಬಿತ್ತು. ತತ್‌ಕ್ಷಣ ಅವರನ್ನು ಮಣ್ಣಿನ ರಾಶಿಯಿಂದ ಹೊರತೆಗೆದು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಕಾಣಿಯೂರು ತಲುಪುವಾಗ ಬೀಪಾತುಮ್ಮ ಮೃತಪಟ್ಟರು. ನೆಬಿಸಾ ಅವರನ್ನು ಪುತ್ತೂರಿಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುವ ಮೊದಲೆ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ಸುರಕ್ಷತೆ ನಿಯಮ ಪಾಲಿಸದ 100 ಶಾಲಾ ಕಟ್ಟಡ ಕೆಡವಲು ಆದೇಶ
ಮಕ್ಕಳು ವಿದೇಶದಲ್ಲಿ
ಮೃತಪಟ್ಟ ಬೀಪಾತುಮ್ಮ ಅವರ ಪತಿ ಮಹಮ್ಮದ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ ಪುತ್ರ ವಿದೇಶ ದಲ್ಲಿದ್ದಾರೆ. ಪುತ್ರಿ ಮನೆಯಲ್ಲಿ ಇದ್ದಾರೆ. ನೆಬಿಸಾ ಅವರ ಪತಿ ರಶೀದ್ ಖಾನ್ ವ್ಯಾಪಾರ ವೃತ್ತಿ ನಡೆಸುತ್ತಿದ್ದರೆ ಇಬ್ಬರು ಮಕ್ಕಳು ವಿದೇಶದಲ್ಲಿ ಇದ್ದಾರೆ.ಇಬ್ಬರು ಮಹಿಳೆಯರ ಸಾವು