Advertisement

ರಕ್ಷಣಾ ತಂಡದೊಂದಿಗೆ ಸಹಕರಿಸಿ

05:57 PM Oct 19, 2020 | Suhan S |

ರಾಯಚೂರು: ಕೃಷ್ಣಾ ಮತ್ತು ಭೀಮಾ ನದಿಯಿಂದ ಅಪಾರ ಪ್ರಮಾಣದ ನೀರು ಹರಿಬಿಟ್ಟಿರುವುದರಿಂದ ರಾಯಚೂರು ತಾಲೂಕಿನ ಗುರ್ಜಾಪೂರ ಹಾಗೂ ಸುತ್ತಮುತ್ತಲಿನ 17 ಗ್ರಾಮಗಳು ಪ್ರವಾಹಕ್ಕೆ ಒಳಗಾಗುವ ಸಾಧ್ಯತೆ ಇರುವ ನಿಟ್ಟಿನಲ್ಲಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಈಗಾಗಲೇ ನಿಯೋಜಿಸಿರುವ ನೋಡಲ್‌ ಅಧಿಕಾರಿಗಳು ಹಾಗೂ ಸಂಬಂಧಿಸಿದವರು ಜಿಲ್ಲೆಗೆ ಆಗಮಿಸಿರುವ ಮಿಲಿಟರಿ ಹಾಗೂ ಎನ್‌ಡಿಆರ್‌ಎಫ್‌ ತಂಡಕ್ಕೆ ಕಾಲಕಾಲಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ್‌ ಸೂಚನೆ ನೀಡಿದರು.

Advertisement

ನಗರದ ಹೊರವಲಯದಲ್ಲಿರುವ ಶಕ್ತಿನಗರದ ಶಕ್ತಿಗೆಸ್ಟ್‌ ಹೌಸ್‌ನಲ್ಲಿ ಭಾನುವಾರ ಮಿಲಿಟರಿ, ಎನ್‌ಡಿಆರ್‌ಎಫ್‌ ಮತ್ತು ಪ್ರವಾಹ ಪೀಡಿತವಾಗಲಿರುವ ಸ್ಥಳಗಳಿಗೆ ನಿಯೋಜಿಸಿದ ನೋಡಲ್‌ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೊನ್ನೆ ಬ್ಯಾರೇಜ್‌ನಿಂದ ಈಗಾಗಲೇ 8ಲಕ್ಷ ನೀರನ್ನು ಹೊರ ಬಿಡಲಾಗಿದೆ. ಈ ನೀರಿನಿಂದ ಪ್ರವಾಹದ ಸ್ಥಿತಿ ಎದುರಾಗಲಿರುವ ತಾಲೂಕಿನ 17 ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಆ ಗ್ರಾಮಗಳ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅವರಿಗಾಗಿ ಶಾಲೆ, ಕಾಲೇಜುಗಳು ಅಥವಾ ವಿದ್ಯಾರ್ಥಿ ನಿಲಯಗಳಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಸೂಚಿಸಿದರು.

ರಾಯಚೂರು ತಾಲೂಕಿನಲ್ಲಿ ಭೀಮಾ ಮತ್ತು ಕೃಷ್ಣಾ ನದಿ ನೀರು ಒಂದೆಡೆ ಸೇರಿ ಹರಿಯುವುದರಿಂದ ಅನೇಕ ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ. ನದಿ ನೀರಿನ ಮಟ್ಟ ಹೆಚ್ಚಳವಾಗುತ್ತಿರುವುದರಿಂದ ಸಂಪರ್ಕ ಕಳೆದುಕೊಂಡು ಜನರು ನಿತ್ಯದ ಚಟುವಟಿಕೆ ನಡೆಸಲು ಸಾಧ್ಯವಾಗದೇ ಇರುವುದರಿಂದ ತುರ್ತು ಸೇವೆಗೆ ಎನ್‌ಡಿಆರ್‌ಎಫ್‌ ತಂಡಬಳಸಿಕೊಂಡು ಅಗತ್ಯ ವಸ್ತುಗಳ ಪೂರೈಕೆಗೆ ಒತ್ತು ನೀಡಬೇಕು ಎಂದರು.

ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ, ಹೆಚ್ಚುವರಿ ಡಿಸಿ ದುರುಗೇಶ್‌, ಎಸಿ ಸಂತೋಷ ಕಾಮಗೌಡ, ತಹಶೀಲ್ದಾರ್‌ ಡಾ.ಹಂಪಣ್ಣ, ಮಿಲಿಟರಿ ತಂಡದ ಮುಖ್ಯಸ್ಥ ವಿವೇಕ್‌ ಪಾಂಡೆ, ಅರ್ನವ್‌ ಗುಪ್ತಾ, ಶ್ರೀಧರ, ನಾರಾಯಣ್‌, ಲೋಕೇಶ್‌, ಆದಿತ್ಯ ಸೇರಿದಂತೆ ಎನ್‌ಡಿಆರ್‌ಎಫ್‌ ತಂಡದ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next