Advertisement

ದೋಷ ರಹಿತ ಮತದಾರರ ಪಟ್ಟಿ ತಯಾರಿಸಲು ಸಹಕರಿಸಿ

04:01 PM Dec 01, 2020 | Suhan S |

ದಾವಣಗೆರೆ: ದೋಷ, ಲೋಪರಹಿತವಾದ ಮತದಾರರ ಪಟ್ಟಿ ಪರಿಷ್ಕರಣೆಗೆ ರಾಜಕೀಯ ಪಕ್ಷಗಳ ಮುಖಂಡರು ಸಮರ್ಪಕ ಹಾಗೂ ರಚನಾತ್ಮಕವಾದ ಸಹಕಾರ ನೀಡಬೇಕು ಎಂದು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ವಿಶೇಷ ವೀಕ್ಷಕ ಎಸ್‌.ಆರ್‌.ಉಮಾಶಂಕರ್‌ ಮನವಿ ಮಾಡಿದರು.

Advertisement

ಸೋಮವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮತದಾರರ ಪಟ್ಟಿಗಳ ಪರಿಷ್ಕರಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆಗೆ ಅಧಿಸೂಚನೆ ಹೊರಡಿಸಲಾಗಿದೆ. ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಸಕ್ರಿಯವಾಗಿ ತೊಡಗಿಸಿಕೊಂಡಲ್ಲಿ ಉತ್ತಮ ಮತದಾರರ ಪಟ್ಟಿ ತಯಾರಿಸಲು ಸಾಧ್ಯವಾಗುತ್ತದೆ ಎಂದರು.

ಯಾವ ಮತದಾರರನ್ನು ಸೇರ್ಪಡೆಗೊಳಿಸ  ಬೇಕು, ಹೆಸರು ತೆಗೆದು ಹಾಕಬೇಕು, ವರ್ಗಾವಣೆ, ತಿದ್ದುಪಡಿಗೆ ಸಂಬಂ ಧಿಸಿದಂತೆ(ಅರ್ಜಿ ನಮೂನೆ 6, 7, 8 ಮತ್ತು 8ಎ) ಅರ್ಜಿಗಳನ್ನು ನೀಡಿ ಸಹಕರಿಸಬೇಕು. ರಾಜಕೀಯ ಪಕ್ಷಗಳ ಸಹಕಾರ ಇದ್ದರೆ ಮತದಾರರ ಪಟ್ಟಿ ತಯಾರಿಕೆಯಲ್ಲಿಸಮಸ್ಯೆಗಳು ಕಡಿಮೆಯಾಗುತ್ತವೆ. ಇಲ್ಲವಾದರೆಪಟ್ಟಿಗೆ ಸಂಬಂ ಧಿಸಿದಂತೆ ದೂರುಗಳು ಹೆಚ್ಚುತ್ತವೆ.ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದರು.

ಕಾಂಗ್ರೆಸ್‌ ಮುಖಂಡ ಎ. ನಾಗರಾಜ್‌ ಮಾತನಾಡಿ, ಯುವ ಮತದಾರರ ಅರ್ಜಿ ನೀಡಲಾಗಿದ್ದು ಕರಡು ಪ್ರತಿಯಲ್ಲಿ ಹೆಸರು ಸೇರ್ಪಡೆಯಾಗಿಲ್ಲ. ಕೆಲವು ಎಂಎಲ್‌ಸಿಗಳ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದ್ದು, ಅವರು ದಾವಣಗೆರೆಯಲ್ಲಿ ನೆಲೆಸಿಲ್ಲ ಎಂಬ ಬಗ್ಗೆ ನಾವು ಆಕ್ಷೇಪಣೆ ಸಲ್ಲಿಸಿದ್ದೆವು. ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ಕೂಡ ಆಗಿ ವರದಿ ನೀಡಿದ್ದು, ಪ್ರಕರಣ ಸದ್ಯ ಉಚ್ಚ ನ್ಯಾಯಾಲಯದಲ್ಲಿ ಇದೆ. ಈ ಬಗ್ಗೆ ನಿಯಮಾನುಸಾರ ಆಕ್ಷೇಪಣೆಯನ್ನು ನಾವು ಸಲ್ಲಿಸಲಿದ್ದು ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅವರ ಹೆಸರನ್ನು ಕೈ ಬಿಡಬೇಕು ಎಂದು ಮನವಿ ಮಾಡಿದರು.

ಪ್ರಕರಣ ಉಚ್ಚ ನ್ಯಾಯಾಲಯದಲ್ಲಿ ಇರುವುದರಿಂದ ಈ ಬಗ್ಗೆ ನ್ಯಾಯಾಲಯತೀರ್ಪು ನೀಡಲಿದೆ. ನಿಯಮಾನುಸಾರ ನೀಡಲಾದ ಆಕ್ಷೇಪಣೆಯನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು. ಎಲ್ಲ ಪಕ್ಷಗಳ ರಾಜಕೀಯ ಮುಖಂಡರು ತಮ್ಮ ಬಿಎಲ್‌ಎ (ಬೂತ್‌ ಮಟ್ಟದ ಏಜೆಂಟ್ಸ್‌)ಗಳ ಪಟ್ಟಿಯನ್ನು ಚುನಾವಣಾಧಿಕಾರಿಗಳಿಗೆ ನೀಡಬೇಕು. ಹೊನ್ನಾಳಿ ತಾಲ್ಲೂಕು ಹೊರತುಪಡಿಸಿ ಬೇರೆ ಕ್ಷೆತ್ರಗಳಿಂದ ಪಟ್ಟಿ ಬಂದಿಲ್ಲ.ಆದಷ್ಟು ಶೀಘ್ರವಾಗಿ ಪಟ್ಟಿ ತಯಾರಿಸಿ ನೀಡಬೇಕು. ಡಿ. 17 ರವರೆಗೆ ಆಕ್ಷೇಪಣೆಗಳು, ತಿದುಪಡಿಗೆ ಅವಕಾಶ ಇದ್ದು ರಾಜಕೀಯ ಪಕ್ಷಗಳು ಆದಷ್ಟುಬೇಗ ಅರ್ಜಿಗಳನ್ನು ನೀಡಬೇಕೆಂದು ಎಂದು ಉಮಾಶಂಕರ್‌ ತಿಳಿಸಿದರು.

Advertisement

ಬಿಜೆಪಿ ಮುಖಂಡ ಲಿಂಗರಾಜ ಗೌಳಿ ಮಾತನಾಡಿ, ಮೊದಲು ಬಿಎಲ್‌ಒಗಳು ಯುವ ಮತದಾರರ ಕಾರ್ಡನ್ನು ಬೇಗ ನೀಡುತ್ತಿದ್ದರು. ಕೋವಿಡ್ ವೇಳೆ ಯುವ ಮತದಾರರ ಕಾರ್ಡನ್ನು ನೀಡುವುದು ವಿಳಂಬವಾಗಿದೆ ಎಂದರು. ಪಿವಿಸಿ ಎಪಿಕ್‌ ಕಾರ್ಡ್‌ ನೀಡುತ್ತಿದ್ದು ತಾಂತ್ರಿಕ ತೊಂದರೆಯಿಂದ ಸ್ವಲ್ಪ ವಿಳಂಬವಾಗಿತ್ತು. ಅದನ್ನು ಸರಿಪಡಿಸಲಾಗಿತ್ತು ಎಪಿಕ್‌ ಕಾರ್ಡ್‌ ವಿತರಿಸಲಾಗುತ್ತಿದೆ ಎಂದು ಡಿಸಿ ತಿಳಿಸಿದರು. ಜಿಲ್ಲೆಯಲ್ಲಿ ಇಪಿ(ಎಲೆಕ್ಟರಲ್‌ ಪಾಪುÂಲೇಷನ್‌) ಅನುಪಾತ ಶೇ.77 ಹೆಚ್ಚಿರುವುದರರ್ಥ ಡಿಲೀಷನ್‌ (ಹೆಸರು ತೆಗೆದುಹಾಕುವ) ಕೆಲಸ ಸರಿಯಾಗಿ ಆಗಿಲ್ಲ. ಹೆಸರು ಸೇರ್ಪಡೆಗೊಳಿಸುವಷ್ಟೇ ಡಿಲೀಷನ್‌ ಮಾಡುವುದು ಕೂಡ ಮುಖ್ಯ. ಮರಣ ಹೊಂದಿದವರ, ಬೇರೆ ಊರಿಗೆ ಹೋಗಿ ನೆಲೆಸಿರುವವರ ಹೆಸರನ್ನು ತೆಗೆದುಹಾಕಲು ನೀಡಲಾದ ಅರ್ಜಿಯನ್ನು ಅಪ್‌ಡೇಟ್‌ ಮಾಡಬೇಕು. ಸುಮ್ಮನೆ ಅರ್ಜಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬಾರದು. ಬದಲಾಗಿ ತಹಶೀಲ್ದಾರರು, ಚುನಾವಣಾಧಿ ಕಾರಿಗಳು ಅರ್ಜಿಗಳನ್ನು ಅಪ್‌ ಡೇಟ್‌ ಮಾಡಿಸಬೇಕು ಎಂದು ಸೂಚಿಸಿದರು.

ಚುನಾವಣೆಯಲ್ಲಿ ಒಂದು ಉತ್ತಮ ಮತದಾರರ ಪಟ್ಟಿ ತಯಾರಿಸುವುದೇ ಚುನಾವಣಾ ಆಯೋಗದ ಮುಖ್ಯ ಉದ್ದೇಶವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಸಂಗ್ರಹಿಸಲಾದ ಅರ್ಜಿ ನಮೂನೆಗಳನ್ನು ನಿಯಮಿತವಾಗಿ ಅಪ್‌ ಡೇಟ್‌ ಮಾಡಬೇಕು. ಇಲ್ಲವಾದಲ್ಲಿ ಶಿಸ್ತಿನ ಕ್ರಮ ಜರುಗಿಸಲಾಗುವುದು. ಪಾಲಿಕೆಯಲ್ಲಿ ಇಂತಹ ಸಮಸ್ಯೆ ಹೆಚ್ಚಿದೆ ಎಂದು ತಿಳಿಸಿದರು. ಸಂಯುಕ್ತ ಜನತಾದಳದ ಎಚ್‌. ಜಯಪ್ಪ, ಕಾಂಗ್ರೆಸ್‌ ಪಿ.ಜೆ.ನಾಗರಾಜ್‌, ಸಿಪಿಐನ ರಂಗನಾಥ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next