Advertisement

ವೆಲ್ಲಿಂಗ್ಟನ್‌ ಟೆಸ್ಟ್‌: ಗ್ರ್ಯಾಂಡ್‌ಹೋಮ್‌ “ಗ್ರ್ಯಾಂಡ್‌ ಸೆಂಚುರಿ’

06:30 AM Dec 03, 2017 | Team Udayavani |

ವೆಲ್ಲಿಂಗ್ಟನ್‌: ಆಲ್‌ರೌಂಡರ್‌ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ ಅವರ ಬಿರುಸಿನ ಶತಕ ಸಾಹಸದಿಂದ ವೆಲ್ಲಿಂಗ್ಟನ್‌ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ನ್ಯೂಜಿಲ್ಯಾಂಡ್‌ ಭಾರೀ ಮೇಲುಗೈ ಸಾಧಿಸಿದೆ. ವಿಂಡೀಸಿನ 134 ರನ್ನಿಗೆ ಉತ್ತರವಾಗಿ ದ್ವಿತೀಯ ದಿನದಾಟದ ಅಂತ್ಯಕ್ಕೆ 9 ವಿಕೆಟ್‌ ಕಳೆದುಕೊಂಡು 447 ರನ್‌ ಪೇರಿಸಿದೆ. ಲಭಿಸಿರುವ ಮುನ್ನಡೆ 313 ರನ್‌.

Advertisement

ಚಹಾ ವಿರಾಮದ ಬಳಿಕ, 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಗ್ರ್ಯಾಂಡ್‌ಹೋಮ್‌ ವಿಂಡೀಸ್‌ ಎಸೆತಗಳನ್ನು ಪುಡಿಗುಟ್ಟುತ್ತ ಕೇವಲ 71 ಎಸೆತಗಳಲ್ಲಿ ಮೊದಲ ಶತಕದ ಸಂಭ್ರಮವನ್ನಾಚರಿಸಿದರು. ಇದರೊಂದಿಗೆ ಟೆಸ್ಟ್‌ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಮೊದಲ ಶತಕ ಹೊಡೆದ ವಿಶ್ವದಾಖಲೆ ಗ್ರ್ಯಾಂಡ್‌ಹೋಮ್‌ ಪಾಲಾಯಿತು. ಅಷ್ಟೇ ಅಲ್ಲ, 115 ವರ್ಷಗಳಷ್ಟು ಹಳೆಯದಾದ ದಾಖಲೆಯನ್ನೂ ಅವರು ಮುರಿದರು. 1902ರ ಆಸ್ಟ್ರೇಲಿಯ ವಿರುದ್ಧದ ಓವಲ್‌ ಟೆಸ್ಟ್‌ನಲ್ಲಿ ಇಂಗ್ಲೆಂಡಿನ ಗಿಲ್ಬರ್ಟ್‌ ಜೋಸೆಫ್ 76 ಎಸೆತಗಳಿಂದ ಮೊದಲ ಶತಕ ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ನ್ಯೂಜಿಲ್ಯಾಂಡಿನ ಅತಿ ವೇಗದ ಶತಕಗಳ ಯಾದಿಯಲ್ಲಿ ಗ್ರ್ಯಾಂಡ್‌ಹೋಮ್‌ ಸಾಧನೆಗೆ 2ನೇ ಸ್ಥಾನ. ಆಸ್ಟ್ರೇಲಿಯ ವಿರುದ್ಧ ಕಳೆದ ವರ್ಷ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಬ್ರೆಂಡನ್‌ ಮೆಕಲಮ್‌ ಕೇವಲ 54 ಎಸೆತಗಳಿಂದ ಸೆಂಚುರಿ ಸಿಡಿಸಿದ್ದು ಕೇವಲ ಕಿವೀಸ್‌ ದಾಖಲೆಯಷ್ಟೇ ಅಲ್ಲ, ವಿಶ್ವದಾಖಲೆಯೂ ಆಗಿದೆ.

ಗ್ರ್ಯಾಂಡ್‌ಹೋಮ್‌ ಒಟ್ಟು 74 ಎಸೆತ ಎದುರಿಸಿ 105 ರನ್‌ ಬಾರಿಸಿದರು. ಈ ಬಿರುಸಿನ ಬ್ಯಾಟಿಂಗ್‌ ವೇಳೆ 11 ಬೌಂಡರಿ ಹಾಗೂ 3 ಸಿಕ್ಸರ್‌ ಸಿಡಿಯಲ್ಪಟ್ಟಿತು. ಚಹಾ ವಿರಾಮದ ಬಳಿಕ ಆಡಲಿಳಿದ ಗ್ರ್ಯಾಂಡ್‌ಹೋಮ್‌, ಒಂದೇ ಅವಧಿಯ ಆಟದಲ್ಲಿ ಸೆಂಚುರಿ ಹೊಡೆದ ನ್ಯೂಜಿಲ್ಯಾಂಡಿನ 6ನೇ ಕ್ರಿಕೆಟಿಗನೆನಿಸಿದರು. ಜಿಂಬಾಬ್ವೆ ಎದುರಿನ 2005-06ರ ಹರಾರೆ ಟೆಸ್ಟ್‌ನಲ್ಲಿ ಡೇನಿಯಲ್‌ ವೆಟರಿ ಒಂದೇ ಅವಧಿಯಲ್ಲಿ 127 ರನ್‌ ರಾಶಿಹಾಕಿದ್ದು ಕಿವೀಸ್‌ ದಾಖಲೆ.

ರಾಸ್‌ ಟಯ್ಲರ್‌ ಏಳೇ ರನ್‌ ಕೊರತೆಯಿಂದ ಶತಕ ತಪ್ಪಿಸಿಕೊಂಡರು (160 ಎಸೆತ, 93 ರನ್‌, 10 ಬೌಂಡರಿ). ಹೆನ್ರಿ ನಿಕೋಲ್ಸ್‌ 67, ಮೊದಲ ಟೆಸ್ಟ್‌ ಆಡಿದ ಕೀಪರ್‌ ಟಾಮ್‌ ಬ್ಲಿಂಡೆಲ್‌ 57 ರನ್‌ ಹೊಡೆದು ಗಮನ ಸೆಳೆದರು. ನ್ಯೂಜಿಲ್ಯಾಂಡ್‌ 2ಕ್ಕೆ 85 ರನ್‌ ಮಾಡಿದಲ್ಲಿಂದ 2ನೇ ದಿನದಾಟ ಮುಂದುವರಿಸಿತ್ತು.

Advertisement

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-134. ನ್ಯೂಜಿಲ್ಯಾಂಡ್‌-9 ವಿಕೆಟಿಗೆ 447 (ಗ್ರ್ಯಾಂಡ್‌ಹೋಮ್‌ 105, ಟಯ್ಲರ್‌ 93, ನಿಕೋಲ್ಸ್‌ 67, ಬ್ಲಿಂಡೆಲ್‌ 57, ರೋಶ್‌ 73ಕ್ಕೆ 3, ಕಮಿನ್ಸ್‌ 74ಕ್ಕೆ 2, ಚೇಸ್‌ 83ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next