ಬಣ್ಣಗಳೆಲ್ಲ ಮರುಜನ್ಮ ಪಡೆಯಲು ನಿರ್ಧರಿಸಿದವು. ಎಲ್ಲರೂ ತಪಸ್ಸಿಗೆ ಕುಳಿತರೆ ಎಷ್ಟು ವರ್ಷಗಳು ಬೇಕೋ? ಕಷ್ಟ ಎಂದುಕೊಂಡವು. ಬೇರೆ ಉಪಾಯ ಹುಡುಕತೊಡಗಿದವು. ಹೇಮಂತ ಶಿಶಿರರು ಎದುರಿಗೆ ಹಾದು ಹೋಗುತ್ತಿದ್ದರು. ಆವರಲ್ಲಿ ಸಲಹೆ ಕೇಳುವುದು ಉಚಿತ ಎನಿಸಿತು. ಎಲ್ಲರೂ ದೇವಲೋಕದತ್ತ ಹೊರಟರು. ಹೇಮಂತ ಶಿಶಿರರು ಇಡೀ ಪ್ರಕೃತಿಯನ್ನೇ ಆವರಿಸಿಕೊಂಡರು.
ಮಂಜು ಮುಸುಕತೊಡಗಿತು. ಇಡೀ ವಾತಾವರಣ ಥರಗುಟ್ಟುವಂಥದ್ದು. ಕೆಲವೇ ಗಂಟೆಗಳಲ್ಲಿ ಗಿಡ ಮರಗಳೆಲ್ಲಾ ಬೋಳಾಗತೊಡಗಿದವು. ಅಲ್ಲಿನ ಉದ್ಯಾನದಲ್ಲಿನ ಹೂವಿನ ಗಿಡಗಳೂ ಅಷ್ಟೇ. ಎಲ್ಲವೂ ಬಿಳಿಚಿಕೊಳ್ಳತೊಡಗಿದವು. ಇಡೀ ವಾತಾವರಣದಲ್ಲಿ ಉತ್ಸಾಹವೇ ಕಾಣುತ್ತಿರಲಿಲ್ಲ.
ಮನೆಯೊಳಗಿದ್ದ ದೇವರಿಗೂ ಯಾಕೋ ವಿಚಿತ್ರ ಎನಿಸತೊಡಗಿತು. ಮೇಜಿನ ಮೇಲೆ ಕಂಗೊಳಿಸುತ್ತಿದ್ದ ಹೂವೂ ಬಿಳಿಚಿಕೊಂಡಿದೆ. ಮೆಲ್ಲಗೆ ಬಾಗಿಲ ಬಳಿಗೆ ಬಂದು ನಿಂತ. ಹೊರಗೆ ಇಣುಕಿದ. ಎಲ್ಲವೂ ಬಿಳಿಚಿಕೊಂಡಿದೆ. ಯಾಕೆ ಹೀಗೆ ಎಂದು ಯೋಚಿಸುತ್ತಿದ್ದ ಕ್ಷಣಕ್ಕೆ ಬಣ್ಣಗಳೆಲ್ಲ ಹಾಜರಾದವು. ನಮಗೆ ಮರುಜನ್ಮ ಬೇಕು ಎಂದು ಕೇಳಿಕೊಂಡವು.
ಆಗ ದೇವರಿಗೆ ಆರ್ಥವಾಯಿತು. ತಥಾಸ್ತು ಎಂದ. ಹೇಮಂತ ಶಿಶಿರರು ಊರ ಹಾದಿ ಹಿಡಿದರು. ಬೆನ್ನಿಗೇ ಬಣ್ಣಗಳೂ ಸಹ. ಅವರೆಲ್ಲರ ಹಿಂದೆಯೇ ವಸಂತನೂ ಬಂದ. ಈ ಗುಂಪಿನ ಮಧ್ಯೆ ಗ್ರೀಷ್ಮ ಸೇರಿಕೊಂಡಿದ್ದು ತಿಳಿಯಲಿಲ್ಲ.
ಮರ ಗಿಡಗಳೆಲ್ಲ ಚಿಗುರಿಕೊಂಡವು. ಎಲೆ-ಹೂವು-ಹೀಗೆ ಬಣ್ಣವೋ ಬಣ್ಣ. ವಸಂತನ ಗಾನ ಆರಂಭವಾಯಿತು. ನೃತ್ಯ ಪ್ರಾರಂಭವಾಗುವಷ್ಟರಲ್ಲಿ ಗ್ರೀಷ್ಮ ಕಂಡಳು. ವಸಂತ ಮುರುಟತೊಡಗಿದ. ಏನು ಮಾಡುವುದು ತೋಚಲಿಲ್ಲ. ಬಾಯಾರಿಕೆ..ಧಗೆ..ಎಲ್ಲವೂ. ಬಣ್ಣಗಳೂ ಒಣಗತೊಡಗಿದವು. ಮತ್ತೆ ದೇವಲೋಕದ ಹಾದಿಯೇ ಅನಿವಾರ್ಯ ಎನಿಸಿತು. ಹೊರಡಲು ಸಜ್ಜಾದರು. ದೇವರಿಗೆ ಬಣ್ಣಗಳ ಸ್ಥಿತಿ ಅರ್ಥವಾಯಿತು. ವರ್ಷಾಳಿಗೆ ಧರೆಗಿಳಿಯಲು ಸೂಚಿಸಿದ.
ಆಕಾಶದಲ್ಲಿ ಚದುರಿದ ಮೋಡಗಳೆಲ್ಲ ಸಭೆಗೆ ಹೊರಟವು. ಒಂದೆಡೆ ಕೂಡಿಕೊಂಡವು. ಬಹಳಷ್ಟು ಚರ್ಚೆ ನಡೆಯಿತು. ಅಂತಿಮವಾಗಿ ತೀರ್ಮಾನ ಹೊರಬಿತ್ತು. ಹನಿಗಳು ಉದುರತೊಡಗಿದವು. ಬಣ್ಣಗಳೆಲ್ಲ ಮತ್ತೆ ನಳನಳಿಸತೊಡಗಿದವು. ಹಸಿರು, ಹಳದಿ, ಕೆಂಪು, ಕೇಸರಿ, ನೀಲಿ, ನೇರಳೆ, ಕಡು ನೀಲಿ..ಹೀಗೆ ಸಾವಿರಾರು ಬಣ್ಣಗಳು !
ಬದುಕಿನ ಪೆಟ್ಟಿಗೆಯ ತುಂಬಾ ಅವುಗಳೇ !
ಸುವಿಧಾ,
ಮೈಸೂರು