Advertisement

ಇನ್ನೂ 2 ದಿನ ನಡುಗಿಸಲಿದೆ ಚಳಿ ಮಳೆ

12:20 PM Dec 11, 2022 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಶನಿವಾರ ನಿರಂತರವಾಗಿ ದಿನಪೂರ್ತಿ ಸುರಿದ ಜಿಟಿ-ಜಿಟಿ ಮಳೆಗೆ ನಾಗರಿಕರು ಹೈರಾಣಾಗುವಂತಾಯಿತು.

Advertisement

ಮಳೆಯ ಜತೆಗೆ ಚಳಿಯೂ ಇರುವುದರಿಂದ ನಡುಗುವಂತಾಯಿತು. ಕಳೆದ ಕೆಲ ದಿನಗಳಿಂದ ತಾಪಮಾನ ದಿಢೀರ್‌ ಕಡಿಮೆಯಾಗಿದೆ. ಈ ವರ್ಷದ ಡಿಸೆಂಬರ್‌ನಲ್ಲಿ ಇದುವರೆಗಿನ ಅತ್ಯಂತ ಕನಿಷ್ಠ ತಾಪಮಾನವಾಗಿದೆ. ಕನಿಷ್ಠ ತಾಪಮಾನ 18.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಬೆಂಗಳೂರಿನಲ್ಲಿ ಮುಂದಿನ 2 ದಿನಗಳ ಕಾಲ ಇದೇ ಮಾದರಿಯ ಚಳಿಯಿಂದ ಕೂಡಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

ಬೆಂಗಳೂರಿನ ನಗರ ಕೇಂದ್ರದಲ್ಲಿ 18.4, ಬಾಪೂಜಿನಗರದಲ್ಲಿ 22.6, ಹೆಬ್ಟಾಳದಲ್ಲಿ 20.4, ಹೊಂಬೇಗೌಡ ನಗರದಲ್ಲಿ 21.1, ಜಯನಗರದಲ್ಲಿ 22.1, ಸಿಲ್ಕ್ ಬೋರ್ಡ್‌ ರಸ್ತೆಯಲ್ಲಿ 21.6 ಮತ್ತು ಎಚ್‌ಎಎಲ್‌ನಲ್ಲಿ 21.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

ಟ್ರಾಫಿಕ್‌ ಕಿರಿಕ್‌: ವೀಕೆಂಡ್‌ ಮೂಡ್‌ನ‌ಲ್ಲಿದ್ದ ಬೆಂಗಳೂರಿಗರಿಗೆ ಟ್ರಾಫಿಕ್‌ನಿಂದ ಕಿರಿ-ಕಿರಿ ಉಂಟಾಗಿದೆ. ಬೆಂಗಳೂರು ನಗರಾದ್ಯಂತ ಶನಿವಾರ ನಿರಂತರವಾಗಿ ಸುರಿದ ತುಂತುರು ಮಳೆಗೆ ನಗರದ ಬಹುತೇಕ ಕಡೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವುದು ಕಂಡು ಬಂತು. ರಾಜಧಾನಿಯಲ್ಲಿ ಅಬ್ಬರಿಸಿದ ಮಳೆಯಿಂದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ಕಷ್ಟವಾಗಿದೆ. ಮೈಸೂರು ರಸ್ತೆ, ಕೆಂಗೇರಿ, ನಾಯಂಡಹಳ್ಳಿ, ಮೆಜೆಸ್ಟಿಕ್‌, ಶಾಂತಿನಗರ, ಕೋರಮಂಗಲ, ಮಲ್ಲೇಶ್ವರ, ಯಶವಂತಪುರ, ಚಾಮರಾಜಪೇಟೆ, ತುಮಕೂರು ರಸ್ತೆ ಸುತ್ತ-ಮುತ್ತ ಸುರಿದ ಮಳೆಯಿಂದಾಗಿ ರಸ್ತೆಗಳ ಮೇಲೆ ನೀರು ನಿಂತಿದೆ.

ಪರಿಣಾಮ ವಾಹನ ಸವಾರರು ಹೈರಾಣಾಗಿದ್ದು, ಮುಂದೆ ಸಾಗಲಾರದೇ ಸರತಿ ಸಾಲಿನಲ್ಲಿ ವಾಹನಗಳು ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಎರಡನೇ ಶನಿವಾರದ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಕೆಲ ಖಾಸಗಿ ಕಂಪನಿಗಳು ಮುಚ್ಚಿದ್ದರೂ, ವಾಹನಗಳ ಓಡಾಟ ಎಂದಿನಂತೆ ಇತ್ತು. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇನ್ನು ನಗರದ ತಗ್ಗು ಪ್ರದೇಶಗಳಲ್ಲಿರುವ ಕೆಲ ಮನೆಗಳಿಗೆ ನೀರು ನುಗ್ಗಿದೆ.

Advertisement

ಸುತ್ತಾಡಲು ಪ್ಲ್ರಾನ್‌ ಹಾಕಿದವರಿಗೆ ನಿರಾಸೆ: ಶಾಪಿಂಗ್‌, ಫ್ಯಾಮಿಲಿ ಜತೆಗೆ ಸುತ್ತಾಟ ಮಾಡಲು ಪ್ಲ್ರಾನ್‌ ಮಾಡಿದವರ ಆಸೆಗೆ ಮಳೆ ತಣ್ಣೀರೆರಚಿದೆ. ಚಳಿಗೆ ಗಡಗಡ ನಡುಗುತ್ತಿರುವ ಬೆಂಗಳೂರಿಗರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ವೀಕೆಂಡ್‌ ಬಂದ ಕೂಡಲೇ ವಿವಿಧ ಅಲಂಕಾರಗಳಿಂದ ಕಂಗೊಳಿಸುತ್ತಿದ್ದ ಮಾಲ್‌ಗ‌ಳು, ಮಾರುಕಟ್ಟೆ, ಪಬ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಲ್ಲದೇ ಖಾಲಿ-ಖಾಲಿಯಾಗಿದ್ದವು. ವಾರಾಂತ್ಯದಲ್ಲಿ ಹೆಚ್ಚಿನ ಜನರು ಕುಟುಂಬಸ್ಥರ ಜತೆಗೆ ಉಪಾಹಾರ ಸೇವಿಸಲು ಹೋಟೆಲ್‌ ಗಳಿಗೆ ಭೇಟಿ ನೀಡುವುದು ಸಾಮಾನ್ಯ. ಈ ಲೆಕ್ಕಾಚಾರದಲ್ಲಿ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿಟ್ಟಿದ್ದ ಹೋಟೆಲ್‌ ಮಾಲೀಕರಿಗೆ ಗ್ರಾಹಕರಿಲ್ಲದೇ ತಲೆಬಿಸಿಯಾಗಿದೆ.

ಅನಿವಾರ್ಯ ಕಾರಣವಿದ್ದವರು ಮಾತ್ರ ರಸ್ತೆ ಮೇಲೆ ಓಡಾಡುತ್ತಿರುವುದು ಕಂಡು ಬಂತು. ಬಹುತೇಕ ಕಡೆಗಳಲ್ಲಿ ಆಟೋ ಚಾಲಕರು ಪ್ರಯಾಣಿಕರ ಕೊರತೆಯಿಂದ ಬಾಡಿಗೆ ಇಲ್ಲದೇ ಬರಿಗೈಯಲ್ಲೇ ಮನೆಗೆ ಮರಳಿದರು. ಬಸ್‌ ನಂತಹ ಸಾರಿಗೆ ವ್ಯವಸ್ಥೆಯಲ್ಲೂ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಎಲ್ಲ ಬಗೆಯ ಮಳಿಗೆಗಳೂ ವ್ಯಾಪಾರವಿಲ್ಲದೇ ಬಿಕೋ ಎನ್ನುತ್ತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next