ಮುಂಬಯಿ: ದಕ್ಷಿಣ ಮುಂಬಯಿಯ ಕೊಲಾಬಾ ಕಫ್‌ಪರೇಡ್ ಪರಿಸರದಲ್ಲಿ ಕಳೆದ ಸುಮಾರು 34 ವರ್ಷಗಳಿಂದ ಸಾಮಾಜಿಕ ಮತ್ತು ಧಾರ್ಮಿಕ ಸೇವೆಗಳೊಂದಿಗೆ ಸಕ್ರಿಯವಾಗಿರುವ “ಕೊಲಾಬಾ ಜಾತ್ರೆ’ ಎಂದೇ ಪ್ರಸಿದ್ಧಿ ಪಡೆದ ಶ್ರೀ ಸಾಯಿನಾಥ ಮಿತ್ರ ಮಂಡಳಿಯ ವಾರ್ಷಿಕ ವರ್ಧಂತಿ ಉತ್ಸವವು ಜ. 27ರಂದು ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಈ ಸಂದರ್ಭ ಧಾರ್ಮಿಕ ಕಾರ್ಯಕ್ರಮವಾಗಿ ಶ್ರೀ ಸತ್ಯನಾರಾಯಣ ಮಹಾಪೂಜೆ ಮತ್ತು ಶ್ರೀ ಸಾಯಿಬಾಬಾ ಮಹಾಪೂಜೆ ಸಂಜೆ ಕಫ್ಪರೇಡ್‌ನ ಸಾಯಿಸದನ್ ಕೇಂದ್ರದಲ್ಲಿ ನೆರವೇರಿತು. ಸಾಯಿನಾಥ್ ಮಿತ್ರ ಮಂಡಳ್ ಕಫ್‌ಪರೇಡ್ ಮುಂಬಯಿ ಸಂಸ್ಥೆಯ ಸಂಸ್ಥಾಪಕಾಧ್ಯಕ್ಷ, ಮನಿಫೋಲ್ಡ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿ. ನ ಕಾರ್ಯಾಧ್ಯಕ್ಷ, ನಾಗೇಶ್ವರ ಸಿನಿ ಕ್ರಿಯೇಶನ್ಸ್‌ನ ಆಡಳಿತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಕಡಂದಲೆ ಸುರೇಶ್ ಎಸ್. ಭಂಡಾರಿ ನೇತೃತ್ವದಲ್ಲಿ ಪೂಜಾ ಕಾರ್ಯಗಳು ವಿಧಿವತ್ತಾಗಿ ನೆರವೇರಿದವು.
ಭಾಂಡೂಪ್ ಪಶ್ಚಿಮದ ಶ್ರೀ ನಿತ್ಯಾನಂದ ಮಂದಿರದ ಪ್ರಧಾನ ಅರ್ಚಕ ವಿದ್ವಾನ್ ಶ್ರೀ ಲಕ್ಷ್ಮೀನಾರಾಯಣ ಭಟ್ ಅವರು ಶ್ರೀ ಸಾಯಿ ಅಭಿಷೇಕ ಮತ್ತು ಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ಸಾಯಿ ಮಹಾರತಿ ಇತ್ಯಾದಿ ಪೂಜೆಗಳನ್ನು ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿ ನೆರೆದ ಭಕ್ತರನ್ನು ಅನುಗ್ರಹಿಸಿದರು. ಸುರೇಶ್ ಭಂಡಾರಿ, ಶೋಭಾ ಸುರೇಶ್ ಭಂಡಾರಿ ಪೂಜಾವಿಧಿಗಳ ಯಜಮಾನತ್ವ ವಹಿಸಿದ್ದರು. ಸೌರಭ್ ಎಸ್. ಭಂಡಾರಿ ಮತ್ತು ಮೇಘಾ ಎಸ್. ಭಂಡಾರಿ, ಮಾ| ಆರ್ಯಮಾನ್ ಎಸ್. ಭಂಡಾರಿ ಉಪಸ್ಥಿತರಿದ್ದರು.
ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಅಧ್ಯಕ್ಷ ನ್ಯಾಯವಾದಿ ಆರ್. ಎಂ. ಭಂಡಾರಿ, ಮಾಜಿ ಅಧ್ಯಕ್ಷ ನ್ಯಾಯವಾದಿ ಶೇಖರ್ ಎಸ್. ಭಂಡಾರಿ, ಎಂಎಲ್‌ಎ ಕ್ಯಾಂಟೀನ್‌ನ ನವೀನ್ ಶೆಟ್ಟಿ, ಜಯ ಪೂಜಾರಿ ಕಫ್‌ಪರೇಡ್, ಶಿವಾಸ್ ಹೇರ್ ಡಿಜೈನರ್ ಪ್ರೈ. ಲಿ.ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ. ಭಂಡಾರಿ, ಗೋಪಾಲ ಭಂಡಾರಿ, ಎಂ. ಹುಸೇನ್ ಸಹಿತ ಅನೇಕ ಗಣ್ಯರು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಸುರೇಶ್ ಭಂಡಾರಿ ಮಂಗಳಾರತಿಗೈದು ಪಾಲ್ಗೊಂಡ ಸಾಯಿ ಭಕ್ತರನ್ನು ಗೌರವಿಸಿದರು.
-ಚಿತ್ರ-ವರದಿ: ರೋನ್ಸ್ ಬಂಟ್ವಾಳ್