ಸಮಯಕ್ಕೆ ಸರಿಯಾಗಿ ಕಾಫಿ ಕೊಯ್ಲಾಗದಿದ್ದರೆ ಬೆಳೆಗಾರರಿಗೆ ಜ್ವರ ಬರುತ್ತದೆ. ಇದಕ್ಕೆ ಅಂತಲೇ ಕುಶಲ ಕೆಲಸಗಾರರು ಇದ್ದರೂ ಅವರುಗಳ ಪ್ರಮಾಣ ಕಡಿಮೆ. ಈ ತಲೆನೋವನ್ನು ಕಡಿಮೆ ಮಾಡಲು ಇಲ್ಲೊಂದು ಯಂತ್ರ ಆವಿಷ್ಕಾರವಾಗಿದೆ.
ಈಗ ಎಲ್ಲೆಲ್ಲೂ ಕಾಫಿ ಕೊಯ್ಲಿನ ಹವಾ.
ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಳಲ್ಲೆಲ್ಲಾ ಕೊಯ್ಲಿನ ಸಿದ್ಧತೆಗಳು ನಡೆಯುತ್ತಿವೆ. ಆದರೆ, ಕಾಫಿ ಬೆಳೆದವರಿಗೆ ಕೊಯ್ಲು ಬಂದರೆ ಜ್ವರ ಬಂದಂತೆ ಅನ್ನೋದೇನೋ ಸತ್ಯ. ಏಕೆಂದರೆ, ಸರಿಯಾದ ಸಮಯಕ್ಕೆ ಕೊಯ್ಲು ಮಾಡಬೇಕು. ಅದಕ್ಕೆ ಜನ ಬೇಕು. ಅವರು ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ಸಿಕ್ಕರೂ, ಕುಶಲ ಕೆಲಸಗಾರರು ಸಿಗುವುದು ವಿರಳ. ಇದು ಕಾಫಿ ಸಂಗ್ರಹಣೆ ಪ್ರಮಾಣದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪರಿಣಾಮ, ಬೆಳೆಗಾರರು ನಷ್ಟ ಅನುಭವಿಸುವಂಥ ಸ್ಥಿತಿಗೆ ತಲುಪಿ ಬಿಡುತ್ತಾರೆ.
ಇಂಥ ಸಂದರ್ಭಗಳಲ್ಲಿ ಯಂತ್ರಗಳ ಅವಶ್ಯಕತೆ ಇರುತ್ತದೆ. ಇತ್ತೀಚಿನವರೆಗೂ ಕಾಫಿಕೊಯ್ಲಿಗೆ ಸೂಕ್ತವಾದ ಯಂತ್ರೋಪಕರಣಗಳಿರಲಿಲ್ಲ. ಈ ಕೊರತೆ ನೀಗಿಸಲು ಈಗ ಗಲೀವರ್ ಎಂಬ ಸಾಧನ ಆವಿಷ್ಕಾರವಾಗಿದೆ. ಇದನ್ನು ಬಳಸಿ ಪರಿಣಾಮಕಾರಿಯಾಗಿ, ನಿಗದಿತ ದಿನಗಳಿಗಿಂತಲೂ ಮುಂಚಿತವಾಗಿಯೇ ಕೊಯ್ಲು ಮಾಡಬಹುದು. ನೋಡಲು ಸರಳವಾಗಿರುವ ಈ ಸಾಧನ, ಬಳಸಲು ಅಷ್ಟೇ ಹಗುರ ಮತ್ತು ಸರಾಗ.
ಈ ಯಂತ್ರ ಬಳಸಿ, ಒಂದೇ ಒಂದು ಗಂಟೆಯಲ್ಲಿ ಸರಾಸರಿ 80 ಕೆ.ಜಿ ಕಾಫಿಹಣ್ಣು ಕೊಯ್ಲು ಮಾಡಬಹುದು. ಕೆಲಸ ಆರಂಭಿಸುವ ಮುನ್ನ ಬ್ಯಾಟರಿ ಚಾರ್ಜ್ ಮಾಡಿಕೊಳ್ಳಬೇಕು. ಯಾವುದೇ ಸ್ಥಳದಲ್ಲಿಯಾದರೂ ಇದನ್ನು ಶೀಘ್ರವಾಗಿ ಚಾರ್ಜ್ ಮಾಡಿಕೊಳ್ಳ ಬಹುದಾದ್ದರಿಂದ ಕಿರಿಕಿರಿಯಾಗುವುದಿಲ್ಲ. ಕೊಯ್ಲು ಮಾಡುವಾಗ ನೇರ ವಿದ್ಯುತ್ ಸಂಪರ್ಕದ ಅವಶ್ಯಕತೆ ಇರುವುದಿಲ್ಲ. ಇದರಿಂದ ಶಾರ್ಟ್ ಸರ್ಕ್ನೂಟ್, ವಿದ್ಯುತ್ ಅವಘಡದಂಥ ಅಪಾಯಗಳು ಇಲ್ಲ.
ಈ ಸಾಧನಕ್ಕೆ ಸೆನ್ಸಾರ್ ಅಳವಡಿಸಲಾಗಿದೆ. ಇದನ್ನು ಬಳಸಿ ಕೊಯ್ಲು ಮಾಡುವಾಗ ಕಾಫಿಗಿಡದ ಬುಡ ಅಲುಗಾಡುವುದಿಲ್ಲ. ಅದರ ಕಾಂಡಗಳಿಗೆ, ರೆಕ್ಕೆಗಳಿಗೆ ಗಾಸಿಯಾಗುವುದಿಲ್ಲ. ಎಲೆಗಳು ಕಿತ್ತು ಬರುವುದಿಲ್ಲ. ಹಣ್ಣುಗಳ ಮೇಲೆ ತರಚುಗಾಯಗಳಾಗುವುದಿಲ್ಲ. ಬಹಳ ನಾಜೂಕಾಗಿ ಹಣ್ಣುಗಳ ಕೊಯ್ಲುಕಾರ್ಯ ನಡೆಯುತ್ತದೆ. ಕೊಯ್ಲು ನಡೆಯುವಾಗ ಗಿಡದ ಕೆಳಗೆ ತೆಳುವಾದ ಪ್ಲಾಸ್ಟಿಕ್ ಶೀಟ್ ಅಥವಾ ಗೊಬ್ಬರದ ಚೀಲಗಳನ್ನು ಹೊಲಿದು ಮಾಡಿದ ಶೀಟ್, ಟಾರ್ಪಾಲ್ ಹಾಸಬೇಕು. ಇದರಿಂದ ಹಣ್ಣುಗಳು ನೆಲಕ್ಕೆ ಬಿದ್ದು ಚದುರುವುದಿಲ್ಲ. ಇದರಿಂದ ಸಂಗ್ರಹಣೆ ಕಾರ್ಯ ಸಲೀಸಾಗುತ್ತದೆ.
ಕೃಷಿಕಾರ್ಯದ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉತ್ಪನ್ನಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದಾಗ ಕೃಷಿಗೆ ಮಾಡಿದ ಖರ್ಚೂ ಗಿಟ್ಟದ ಉದಾಹರಣೆಗಳು ಕಾಫಿ ಬೆಳೆಗಾರರಿಗೂ ಆಗಿದೆ. ಇಂಥ ಸಂದರ್ಭಗಳಲ್ಲಿ ಖರ್ಚು ಕಡಿಮೆಯಾದಷ್ಟೂ ಲಾಭದಾಯಕ. ಈ ನಿಟ್ಟಿನಲ್ಲಿ, ಈ ಸಾಧನ ಬೆಳೆಗಾರರಿಗೆ ವರದಾನವೇ ಆಗಿದೆ.
– ಕುಮಾರ ರೈತ